ಚಿತ್ರದುರ್ಗ: ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹಾಗೂ ಸರ್ಕಾರದ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಕೆಲವು ಮಾರ್ಗಸೂಚಿಗಳನ್ನು ನೀಡಿ ಆದೇಶಿಸಲಾಗಿದೆ. ನವೆಂಬರ್ 1 ರಿಂದ 6 ರವರೆಗೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಜಿಲ್ಲಾ ಧಿಕಾರಿ ಕಚೇರಿಯಿಂದ ನಮೂನೆ-ಎಲ್ .ಇ-5 ರಲ್ಲಿ ತಾತ್ಕಾಲಿಕ ಪರವಾನಗಿಗಳನ್ನು ಮಂಜೂರು ಮಾಡಲಾಗಿದೆ.
ಪಟಾಕಿ ಮಾರಾಟಗಾರರು ನಿಯಮ ಪಾಲನೆ ಮಾಡುತ್ತಿರುವುದನ್ನು ಪರಿಶೀಲಿಸಲು ತಂಡಗಳನ್ನು ರಚನೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತಹಶೀಲ್ದಾರ್, ಪೊಲೀಸ್ ಠಾಣೆ ಉಪ ನಿರೀಕ್ಷಕರು, ರಾಜ್ಯ ಮಾಲಿನ್ಯ ನಿಯಂತ್ರಣ ಸಹಾಯಕ ಪರಿಸರ ಅ ಧಿಕಾರಿ, ನಗರಸಭೆ ಪೌರಾಯುಕ್ತರನ್ನು ಒಳಗೊಂಡ ತಂಡ ರಚಿಸಲಾಗಿದೆ. ಹಸಿರು ಪಟಾಕಿ ಬಾಕ್ಸ್‌ಗಳ ಮೇಲೆ ಬಾರ್ ಕೋಡಿಂಗ್ ಲೋಗೋ ಇರುವ ಬಗ್ಗೆ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು. ಹಸಿರು ಪಟಾಕಿಗಳನ್ನು ಅ ಧಿಕೃತ ಉತ್ಪಾದಕರಿಂದ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡು ಉತ್ಪಾದಿಸಲಾಗಿದೆಯೇ ಎಂಬುದರ ಬಗ್ಗೆ ಮತ್ತು ಮಾರಾಟಮಾಡುತ್ತಿರುವ ಬಗ್ಗೆ ತಪಾಸಣೆ ಮಾಡಲಾಗುತ್ತದೆ.
ಹಸಿರು ಪಟಾಕಿಗಳನ್ನು ರಾತ್ರಿ 8 ರಿಂದ 10 ಗಂಟೆಯೊಳಗೆ ಸಿಡಿಸಲು ಸಮಯ ನಿಗದಿ ಮಾಡಲಾಗಿದೆ. ಪಟಾಕಿ ಮಾರಾಟ ಮಾಡುವ ಸ್ಥಳಗಳಲ್ಲಿ ಪ್ರತಿ ಮಳಿಗೆಗೆ 6 ಮೀಟರ್ ಅಂತರವಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತದೆ. ಹಸಿರು ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಕನಿಷ್ಟ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಅಗ್ನಿನಂದಕ ವಾಹನಗಳನ್ನು ಪಟಾಕಿ ಮಾರಾಟ ಮಾಡುವ ಸ್ಥಳದಲ್ಲಿ ಕಾಯ್ದಿರಿಸತಕ್ಕದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ಐಪಿಸಿ 188 ಪ್ರಕಾರ ಪ್ರಕರಣವನ್ನು ದಾಖಲಿಸಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.