ನವದೆಹಲಿ: ಐಪಿಎಲ್ ಪ್ಲೇಆಫ್ ವೇಳೆ ನಡೆಯುವ ಮಹಿಳಾ ಟಿ20 ಚಾಲೆಂಜಿಂಗ್ ಸರಣಿಯಲ್ಲಿ ಮೂರೇ ತಂಡಗಳು ಪಾಲ್ಗೊಳ್ಳಲಿವೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಕಳೆದ ವರ್ಷ 4 ತಂಡಗಳ ನಡುವೆ ಶಾರ್ಜಾದಲ್ಲಿ ಮಹಿಳಾ ಸರಣಿ ಏರ್ಪಡಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಈ ಬಾರಿ ಮತ್ತೆ ಮೂರೇ ತಂಡಗಳ ನಡುವೆ ಸರಣಿ ನಡೆಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:ಕೆಕೆಆರ್ ವಿರುದ್ಧ ಗೆಲುವಿನ ಕೇಕೆ ಹಾಕೀತೇ ಮುಂಬೈ?
ಈ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳ ಜತೆ ಮಾತುಕತೆ ಪ್ರಗತಿಯಲ್ಲಿದ್ದು, ಇಲ್ಲಿನ ಆಟಗಾರ್ತಿಯರ ಲಭ್ಯತೆ ಬಗ್ಗೆ ವಿಶ್ವಾಸ ಹೊಂದಲಾಗಿದೆ. ಹಾಗೆಯೇ ಈ ಪಂದ್ಯಗಳು ನವದೆಹಲಿಯಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಏ.16ರಂದು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ ನಡೆಯಲಿದ್ದು, ಇಲ್ಲಿ ಮಹಿಳಾ ಚಾಲೆಂಜಿಂಗ್ ಸರಣಿ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರಾಹುಲ್‌ಗೆ ಮಣಿದ ಸ್ಯಾಮ್ಸನ್ : ರಾಜಸ್ಥಾನ್ ವಿರುದ್ಧ ಪಂಜಾಬ್ ಗೆ 4 ರನ್ ಗಳ ಗೆಲುವು