Advertisement

ಒಂದೇ ವರ್ಷ 1,397 ಶಾಲೆಗಳಿಗೆ ಬೀಗ! ಕರಾವಳಿಯಲ್ಲಿ 100ಕ್ಕೂ ಅಧಿಕ ಶಾಲೆ ಬಂದ್

10:10 AM Mar 15, 2022 | Team Udayavani |

ಉಡುಪಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗದಿರುವ ರಾಜ್ಯದ 1,397 ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ.

Advertisement

ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಹಲವು ಪ್ರಯೋಗಗಳು ಜಾರಿಯಲ್ಲಿವೆ. ಕೊರೊನಾದ ಬಳಿಕ ಸರಕಾರಿ ಶಾಲೆಗಳಲ್ಲಿ ದಾಖಲಾತಿಯೂ ಹೆಚ್ಚಾಗಿದೆ. ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ ಒದಗಿಸುವ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನು ಷ್ಠಾನಕ್ಕೂ ಸಿದ್ಧತೆ ನಡೆಯುತ್ತಿದೆ. ಇವೆಲ್ಲದರ ನಡುವೆಯೂ 2021-22ನೇ ಸಾಲಿನಲ್ಲಿ 285 ಸರಕಾರಿ ಪ್ರಾಥಮಿಕ, 2 ಸರಕಾರಿ ಪ್ರೌಢಶಾಲೆಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ.

ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಿರ್ವಹಣೆ ಕೊರತೆ, ಮಕ್ಕಳ ದಾಖಲಾತಿ ಇಲ್ಲದೆ 721 ಖಾಸಗಿ ಪ್ರಾಥಮಿಕ, 245 ಪ್ರೌಢಶಾಲೆ, 101 ಅನುದಾನಿತ ಪ್ರಾಥಮಿಕ, 37 ಪ್ರೌಢಶಾಲೆಗಳು ಹಾಗೂ ಇತರ 6 ಶಾಲೆಗಳು ಸ್ಥಗಿತಗೊಂಡಿವೆ.

ಕಲಬುರಗಿಯಲ್ಲೇ ಹೆಚ್ಚು
ಇಡೀ ರಾಜ್ಯದಲ್ಲೇ ಕಲಬುರಗಿಯಲ್ಲಿ 181 ಪ್ರಾಥಮಿಕ ಹಾಗೂ 52 ಪ್ರೌಢಶಾಲೆಗೆ ಬೀಗ ಹಾಕಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ 130 ಪ್ರಾಥಮಿಕ, 56 ಪ್ರೌಢಶಾಲೆ, ಬೆಂಗಳೂರು ಉತ್ತರದಲ್ಲಿ 83 ಪ್ರಾಥಮಿಕ ಹಾಗೂ 48 ಪ್ರೌಢಶಾಲೆ, ಉಡುಪಿಯಲ್ಲಿ 79 ಪ್ರಾಥಮಿಕ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ತಲಾ 63 ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಹೀಗೆ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲೂ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಉತ್ತರ ಕನ್ನಡದಲ್ಲಿ 3, ಕೊಡಗಿನಲ್ಲಿ 4, ಧಾರವಾಡದಲ್ಲಿ 5, ಗದಗ, ಚಿಕ್ಕೋಡಿ, ಶಿರಸಿಯಲ್ಲಿ ತಲಾ 6 ಸರಕಾರಿ ಶಾಲೆ ಮುಚ್ಚಿದ್ದು, ಅತಿ ಕಡಿಮೆ ಶಾಲೆ ಮುಚ್ಚಿರುವ ಪಟ್ಟಿಯಲ್ಲಿವೆ.

ಶಾಲೆ ಮುಚ್ಚಲು ಕಾರಣ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಯನ್ನು ಸ್ಥಳೀಯ ಶಾಲೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕೆಲವು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಅನುದಾನಿತ ಹಾಗೂ ಖಾಸಗಿ ಶಾಲೆಗಳು ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ಅನುಭವಿಸಿವೆ. ನಿರ್ವಹಣೆ ಕೊರತೆ, ಬೋಧಕ, ಬೋಧಕೇತರ ಸಿಬಂದಿ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿಯೂ ಕುಸಿದಿರುವುದರಿಂದ ಶಾಶ್ವತವಾಗಿ ಮುಚ್ಚುವಂತಾಗಿದೆ.

Advertisement

ಕರಾವಳಿಯಲ್ಲಿ 100ಕ್ಕೂ ಅಧಿಕ
ಉಡುಪಿ ಜಿಲ್ಲೆಯಲ್ಲಿ 12 ಸರಕಾರಿ, 19 ಅನುದಾನಿತ ಹಾಗೂ 48 ಅನು ದಾನ ರಹಿತ ಶಾಲೆ ಸಹಿತ ಒಟ್ಟು 79 ಪ್ರಾಥಮಿಕ ಶಾಲೆ ಹಾಗೂ 1 ಅನುದಾನಿತ ಪ್ರೌಢ ಶಾಲೆ ಯನ್ನು ಈ ವರ್ಷ ಮುಚ್ಚಲಾಗಿದೆ. ದ.ಕ. ದಲ್ಲಿ 2 ಸರಕಾರಿ, 5 ಅನುದಾನಿತ ಹಾಗೂ 4 ಖಾಸಗಿ ಶಾಲೆ ಸಹಿತ 11 ಪ್ರಾಥಮಿಕ ಶಾಲೆ, 2 ಅನುದಾನಿತ, 6 ಖಾಸಗಿ ಶಾಲೆ ಸಹಿತ 8 ಪ್ರೌಢಶಾಲೆಗಳನ್ನು ಮುಚ್ಚಲಾಗಿದೆ.

ಮಕ್ಕಳ ದಾಖಲಾತಿಯೇ ಇಲ್ಲದಾಗ ಶಾಲೆ ಮುಚ್ಚುವುದು ಅನಿವಾರ್ಯ. ಗ್ರಾಮಗಳಲ್ಲಿ ಸರಕಾರಿ ಶಾಲೆಗೆ ಬರುವ ಮಕ್ಕಳೇ ಇಲ್ಲದಾಗ ಶಾಲೆ ನಡೆಸಲು ಸಾಧ್ಯವಿಲ್ಲ. ಮುಚ್ಚಿದ ಶಾಲೆಗಳ ಶಿಕ್ಷಕರನ್ನು ಬೇರೆ ಕಡೆಗೆ ನಿಯೋಜಿಸುತ್ತಿದ್ದೇವೆ.
-ಡಾ| ವಿಶಾಲ್‌ ಆರ್‌., ಆಯುಕ್ತ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

ಒಂದೂ ಮಗುವೂ ದಾಖಲಾಗದೆ ಇರುವ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲೇ ಬೇಕಾಗುತ್ತದೆ. ಹೀಗಾಗಿಯೇ ಗ್ರಾಮ ಕ್ಕೊಂದು ಮಾದರಿ ಶಾಲೆ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಮೊದಲ ಹಂತದಲ್ಲ ಹೋಬಳಿಗೆ ಒಂದು ಮಾದರಿ ಶಾಲೆ ಆರಂಭಿಸಲಿದ್ದೇವೆ.
– ಬಿ.ಸಿ. ನಾಗೇಶ್‌, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next