ಬ್ರಹ್ಮಾವರ: ಗ್ರಾಮೀಣ ಯುವಕರಿಗೆ ಆರು ದಿನಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಸಹ್ಯಾದ್ರಿ ತ್ರಿಶೂಲ್ (ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ) ಉತ್ಪನ್ನದ ಅನಾವರಣ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಕುಲಪತಿ ಡಾ| ಮಂಜುನಾಥ ನಾಯಕ್ ಅವರು ಸಮ್ಮಿಶ್ರಣವನ್ನು ಅನಾವರಣಗೊಳಿಸಿ ಮಾತನಾಡಿ, ಲಾಕ್‌ಡೌನ್‌ನಿಂದ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಉನ್ನತ ಮಟ್ಟಕ್ಕೆ ತಲುಪಿದೆ. ಕೋವಿಡ್ ಪರಿಸ್ಥಿತಿಯಲ್ಲೂ ಕೂಡ ಆಹಾರ ವ್ಯವಸ್ಥೆ ಶೇ.10 ಹೆಚ್ಚಾಗಿ ಧಾನ್ಯಗಳ ಪ್ರಮಾಣ ಶೇ.7ರಷ್ಟು ಹೆಚ್ಚಾಗಿದೆ ಎಂದರು.
ಕೆ.ವಿ.ಕೆ.ಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ ಬಿ. ಅವರು ಮಾತನಾಡಿ, ಅರ್ಕಾ ಮೈಕ್ರೋಬಿಯಲ್ ಐ.ಐ.ಎಚ್.ಆರ್. ಬೆಂಗಳೂರಿನಿಂದ ತರಿಸಬೇಕಾಗಿತ್ತು. ಈಗ ಅದನ್ನು ನಾವೇ ತಯಾರಿಸಿ ಬಿಡುಗಡೆ ಮಾಡುತ್ತಿರುವುದು ಸಂಸ್ಥೆಗೆ ಒಂದು ಹೆಮ್ಮೆಯ ವಿಷಯ ಎಂದರು.
ಅತಿಥಿಗಳಾಗಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ| ಶಶಿಧರ್ ಕೆ.ಸಿ. ಮಾತನಾಡಿ, ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ ಉಪಯೋಗ ಪಡೆದುಕೊಂಡು ಕಡಿಮೆ ಖರ್ಚಿನಲ್ಲಿ ತಾವೇ ಸ್ವತಃ ಈ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ತಯಾರಿಸುವಂತೆ ರೈತರಿಗೆ ಪ್ರೇರೇಪಿಸಿದರು. ಸಹವಿಸ್ತರಣಾ ನಿರ್ದೇಶಕ ಡಾ| ಎಸ್.ಯು. ಪಾಟೀಲ್ ಅವರು ಮಾತನಾಡಿ, 3 ಸೂಕ್ಷ್ಮಾಣು ಜೀವಿಗಳಿದ್ದು ಎಲ್ಲಾ ಶೂಲವನ್ನು ದೂರ ಮಾಡುವಂತಹ ಒಂದು ಸಮ್ಮಿಶ್ರಣ ಸಹ್ಯಾದ್ರಿ ತ್ರಿಶೂಲ್ ಎಂದು ತಿಳಿಸಿದರು.
ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕಿ ಭುವನೇಶ್ವರಿ, ಸಹ ಸಂಶೋಧನಾ ನಿರ್ದೇಶಕ ಡಾ| ಲಕ್ಷ್ಮಣ ಮತ್ತು ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಧೀರ್ ಕಾಮತ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಗುರುರಾಜ್ ಗಂಟಿಹೊಳೆ ಅನುಭವ ಹಂಚಿಕೊಂಡರು. ವಿಜ್ಞಾನಿಗಳಾದ ಡಾ| ಎನ್.ಈ ನವೀನ್ ಕಾರ್ಯಕ್ರಮವನ್ನು ನಿರೂಪಿಸಿ, ಎಚ್.ಎಸ್. ಚೈತನ್ಯ ವಂದಿಸಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, (ವಿಸ್ತರಣಾ ನಿರ್ದೇಶನಾಲಯ), ಬ್ರಹ್ಮಾವರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಮತ್ತು ಗ್ರಾಮ ವಿಕಾಸ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪೋಷಕಾಂಶಗಳ ಲಭ್ಯತೆ
ಮಣ್ಣಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ದೊರಕಿಸುವ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣ ಇದಾಗಿದೆ. ಕಸದಿಂದ ರಸ ಮಾಡಬೇಕು ಎಂದರೆ ಸೂಕ್ಷ್ಮಾಣು ಜೀವಿಗಳನ್ನು ಬೆಳೆಸುವುದು ಅತ್ಯಾವಶ್ಯಕ. ಇದು ಸಸ್ಯಗಳನ್ನು ಪ್ರಚೋದಿಸುವ ಹಾಗೂ ರೋಗಗಳ ತಡೆಗಟ್ಟುವ ಕೆಲಸವನ್ನು ಮಾಡುತ್ತದೆ. ಸಾವಯವ ಕೃಷಿ, ಪರಂಪರಾಗತ ಕೃಷಿಯನ್ನು ಉಳಿಸಬೇಕಾದರೆ ರಾಸಾಯನಿಕ ಗೊಬ್ಬರಗಳ ಜೊತೆಗೆ ಈ ಸೂಕ್ಷ್ಮಾಣು ಜೀವಿಗಳ ಸಮ್ಮಿಶ್ರಣವನ್ನು ಉಪಯೋಗಿಸುವುದು ಒಳ್ಳೆಯದು ಎಂದು ಡಾ| ಮಂಜುನಾಥ ನಾಯಕ್ ಹೇಳಿದರು.