Advertisement

ಗಂಜಿಮಠ: ವಿಶಾಲ ಪ್ರದೇಶದಲ್ಲಿ ಬೆರಳೆಣಿಕೆಯಷ್ಟೇ ಕೈಗಾರಿಕೆಗಳು

10:20 AM Sep 04, 2022 | Team Udayavani |

ಮಂಗಳೂರು: ಒಂದೂವರೆ ದಶಕದ ಹಿಂದೆ ಮಂಗಳೂರು ನಗರದ ಹೊರವಲಯದ ಗಂಜಿಮಠ ಪರಿಸರ ದಲ್ಲಿ ಆರಂಭ ಗೊಂಡ ಗಂಜಿಮಠ ರಫ್ತು ಉತ್ತೇಜನಾ ಪಾರ್ಕ್‌ (ಇಪಿಐಪಿ) ನಲ್ಲಿ ಹೂಡಿಕೆಗೆ ಉತ್ತಮ ಅವಕಾಶ ಇದೆ. ಆದರೆ ಉದ್ಯಮಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ.

Advertisement

2006ರಲ್ಲಿ ಆರಂಭಗೊಂಡ ಈ ಕೈಗಾರಿಕಾ ಪ್ರದೇಶದೊಳಗೆ ಸುಮಾರು 205 ಎಕ್ರೆ ವಿಶಾಲ ಪ್ರದೇಶವಿದೆ. ಆರಂಭಗೊಂಡ ಉದ್ದಿಮೆ ಮಾತ್ರ ಬೆರಳೆಣಿಕೆಯಷ್ಟು. ನಗರದಿಂದ ತುಸು ಹೊರ ಭಾಗ ದಲ್ಲಿರುವುದೂ ಒಂದು ಕಾರಣ ವಾದರೆ, ಕಾಲಕ್ಕೆ ತಕ್ಕಂತೆ ಮೂಲ ಸೌಕರ್ಯ ವೃದ್ಧಿಸದಿರುವುದೂ ಹಿನ್ನ ಡೆಗೆ ಇನ್ನೊಂದು ಕಾರಣವಾಗಿದೆ.

ಗಂಜಿಮಠ ಪ್ರದೇಶ ದಿಂದ ಕೈಗಾರಿಕಾ ವಲಯ ಪ್ರವೇಶಕ್ಕೆ ಎರಡು ಮುಖ್ಯ ದ್ವಾರಗಳಿವೆ. ಈ ಎರಡೂ ದ್ವಾರಗಳಲ್ಲಿ ಯಾವುದೇ ಸೂಚನಾ ಫಲಕವಿಲ್ಲ. ಮೊದಲನೇ ಪ್ರವೇಶ ದ್ವಾರದಲ್ಲಿದ್ದ ಒಂದು ಸೂಚನಾ ಫಲಕ ರಸ್ತೆ ಬದಿ ಬಿದ್ದಿದೆ. ಕೈಗಾರಿಕಾ ವಲಯವನ್ನು ಸೂಚಿಸುವ ಪ್ರತ್ಯೇಕ ಫಲಕದಲ್ಲಿರುವ ಹೆಸರುಗಳೆಲ್ಲಾ ಮಾಸಿ ಹೋಗಿ ವರ್ಷಗಳೇ ಕಳೆದಿವೆ. ರಸ್ತೆಗಳು ಅಗಲವಾಗಿದ್ದರೂ ರಸ್ತೆ ಬದಿ ಸ್ವಚ್ಛವಾಗಿಲ್ಲ. ಹುಲ್ಲು ಬೆಳೆದಿದ್ದು, ಕಟಾವು ಮಾಡದೆ ಹಲವು ಸಮಯವಾಗಿದೆ. ಸಣ್ಣ ತೋಡಿನಲ್ಲಿ ಕೆಸರು, ಮಣ್ಣು ತುಂಬಿ ಮಳೆ ನೀರು ಹರಿಯಲು ಕಷ್ಟವಾಗುತ್ತಿದೆ. ಈ ಭಾಗದಲ್ಲಿ ಸ್ವಚ್ಛತೆಗೆ ಆದ್ಯತೆಯನ್ನೇ ನೀಡಲಾಗಿಲ್ಲ. ಹೊರಗಿನ ಮಂದಿ ಇಲ್ಲಿನ ರಸ್ತೆ ಬದಿಗಳಲ್ಲಿ ಕಸ ಹಾಕುತ್ತಿದ್ದು ರಾಶಿ ಬೀಳುತ್ತಿದೆ.

ಕೈಗಾರಿಕಾ ವಲಯದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಗುರುಪುರ ನದಿಯಿಂದ ಪಂಪ್‌ ಮಾಡಿ ನೀರನ್ನು ಪೂರೈಸಲಾ ಗುತ್ತಿದೆ. ಆದರೆ ಬೇಸಗೆ ವೇಳೆ ನೀರಿನ ಸಮಸ್ಯೆ ಬಾರದಂತೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಭಾಗದಲ್ಲಿ ಮೆಸ್ಕಾಂನಿಂದ ವಿದ್ಯುತ್‌ ಸಬ್‌ ಸ್ಟೇಷನ್‌ ಆರಂಭಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳದ್ದು. ಈಗಾಗಲೇ ಸಂಬಂಧಿಸಿದ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಬೇಡಿಕೆ ಈಡೇರಿಲ್ಲ.

Advertisement

ಉರಿಯದ ಬೀದಿ ದೀಪ

ಗಂಜಿಮಠ ಕೈಗಾರಿಕಾ ಪ್ರದೇಶದ ರಸ್ತೆಯುದ್ದಕ್ಕೂ ಡಿವೈಡರ್‌ಗಳಲ್ಲಿ 60ಕ್ಕೂ ಮಿಕ್ಕಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಇನ್ನೂ, ವಿದ್ಯುತ್‌ ಸಂಪರ್ಕ ನೀಡಿಲ್ಲ. ಪರಿಣಾಮ, ಇಲ್ಲಿನ ಉದ್ಯೋಗಿಗಳು ಕತ್ತಲಲ್ಲೇ ಸಂಚರಿಸಬೇಕಿದೆ. ಕೈಗಾರಿಕಾ ಪ್ರದೇಶದೊಳಗೆ ಯಾವುದೇ ಬಸ್‌ ಸೇವೆ ಇಲ್ಲ. ಗಂಜಿಮಠದಿಂದ ನಡೆದೇ ಬರಬೇಕು.

ಕೆಲವೊಂದು ಕೈಗಾರಿಕೆ ರಾತ್ರಿಯೂ ಕಾರ್ಯಾಚರಿಸುವ ಪರಿಣಾಮ, ಮಹಿಳೆಯರು ಸೇರಿದಂತೆ ಉದ್ಯೋಗಿಗಳು ರಾತ್ರಿ ಮುಖ್ಯ ರಸ್ತೆ ತಲುಪಲು ಕತ್ತಲಿನಲ್ಲಿ ಹರಸಾಹಸ ಪಡಬೇಕು.

45 ಉದ್ದಿಮೆಗೆ ಹಂಚಿಕೆ; 16 ಕಾರ್ಯಾಚರಣೆ

ಗಂಜಿಮಠ ರಫ್ತು ಉತ್ತೇಜನಾ ಪಾರ್ಕ್‌ (ಇಪಿಐಪಿ) ಭೂಮಿಯನ್ನು ಸದ್ಯ 45 ಉದ್ದಿಮೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಸುಮಾರು 16 ಉದ್ದಿಮೆಗಳು ಕಾರ್ಯಾ ಚರಿಸುತ್ತಿವೆ. ಕೆಲವು ಕಾಮಗಾರಿಯ ಹಂತದಲ್ಲಿದ್ದು, ಕೆಲ ತಿಂಗಳಲ್ಲಿ ಆರಂಭ ಗೊಳ್ಳಲಿದೆ. ಕಾರ್ಯಾಚರಿಸುತ್ತಿರುವ ಉದ್ದಿಮೆಗಳಲ್ಲಿ ರಫ್ತು ಸಂಬಂಧಿತ ಉದ್ದಿಮೆಯೇ ಹೆಚ್ಚು. ಮುಖ್ಯವಾಗಿ ಚಿಪ್ಸ್‌, ಗೋಡಂಬಿ, ಪ್ಲಾಸ್ಟಿಕ್‌, ಮೆಡಿಸಿನ್‌, ಹಾಳೆಪಟ್ಟೆ, ಬ್ಯಾಗ್‌ ಸಂಬಂಧಿ ಉದ್ಯಮಗಳಿವೆ. ಒಟ್ಟಾರೆ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 4 ಸಾವಿರದಷ್ಟು ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.

ಹೆದ್ದಾರಿ ಕಿರಿದು; ಟ್ರಕ್‌ ಓಡಾಟಕ್ಕೆ ಸಂಕಷ್ಟ

ಗುರುಪುರ ಕೈಗಾರಿಕಾ ವಲಯಕ್ಕೆ ಹೊಂದಿಕೊಂಡು ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಇದ್ದರೂ ಈ ರಸ್ತೆ ದೊಡ್ಡ ಟ್ರಕ್‌ಗಳ ಓಡಾಟಕ್ಕೆ ಸೂಕ್ತವಿಲ್ಲ ಎಂಬ ಮಾತು ಕೈಗಾರಿಕೋದ್ಯಮಿಗಳದ್ದು. ಕೈಗಾರಿಕಾ ವಲಯದಿಂದ ಎನ್‌ಎಂಪಿಟಿಗೆ ಟ್ರಕ್‌ ಹೋಗಬೇಕಾದರೆ, ಈ ರಸ್ತೆ ಕಿರಿದಾಗಿದ್ದು, ಎದುರಿನಿಂದ ಬೇರೆ ವಾಹನ ಬಂದರೆ ಟ್ರಾμಕ್‌ ಜಾಮ್‌ ಆಗುತ್ತಿದೆ. ಇದೇ ಕಾರಣಕ್ಕೆ ಟ್ರಕ್‌ ಗಳಿಗೆ ಲೋಡ್‌ ಆಗಿದ್ದರೂ ವಾಹನ ದಟ್ಟನೆ ಇರದ ವೇಳೆ ಅಂದರೆ, ರಾತ್ರಿ, ಬೆಳಗಿನ ಜಾವದಲ್ಲೇ ಕಳುಹಿಸ ಬೇಕಾದ ಅನಿವಾರ್ಯ ಇದೆ.

ಪ್ಲಾಸಿಕ್‌ ಪಾರ್ಕ್‌ ನಿರೀಕ್ಷೆಯಲ್ಲಿದೆ ಗಂಜಿಮಠ

ಗಂಜಿಮಠ ಪರಿಸರದಲ್ಲಿ ಅನುಷ್ಟಾನಗೊಳ್ಳಲಿರುವ ಮೇಕ್‌ ಇನ್‌ ಇಂಡಿಯಾ ಯೋಜನೆಯ ಅಂಗವಾದ ʼಪ್ಲಾಸ್ಟಿಕ್‌ ಪಾರ್ಕ್‌’ ಯೋಜನೆಗೆ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಹಸಿರು ನಿಶಾನೆ ತೋರಿಸಿದೆ. ಸುಮಾರು 104 ಎಕ್ರೆ ಜಾಗದಲ್ಲಿ ಸುಮಾರು 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಾಕಾರಗೊಳ್ಳುತ್ತಿದೆ. ಪ್ಲಾಸ್ಟಿಕ್‌ ತಯಾರಿಕೆಯ ಜತೆಗೆ, ಪ್ಲಾಸ್ಟಿಕ್‌ನ ಮರುಬಳಕೆ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡುವ ಉದ್ದೇಶವಿದೆ. ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸುವಂತೆ ಕೆನರಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಆ್ಯಂಡ್‌ ಟ್ರೇಡರ್ಸ್‌ ಅಸೋಸಿಯೇಶನ್‌ ಹಲವು ವರ್ಷದ ಹಿಂದೆಯೇ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಸದ್ಯ ಗಂಜಿಮಠದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ಪೂರಕ ಸಿದ್ಧತೆ ನಡೆಯಬೇಕಿದೆ.

ಇತ್ತೀಚಿನ ದಿನಗಳಲ್ಲಿ ಹೊಸ ಉದ್ದಿಮೆ ಸ್ಥಾಪನೆಗೆ ಹೆಚ್ಚಿನ ಉದ್ಯಮಿ ಗಳು ಮುಂದೆ ಬರುತ್ತಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಹಕಾರ ಇನ್ನಷ್ಟು ಸಿಗಬೇಕಿದೆ. ಇದಕ್ಕಾಗಿ ಇಲಾಖೆಯನ್ನು ಇನ್ನಷ್ಟು ಉದ್ಯಮ ಸ್ನೇಹಿ ಮಾಡಬೇಕಿದೆ. –ಸುಭಾಷ್‌, ಯುವ ಉದ್ಯಮಿ

ಗಂಜಿಮಠ ರಫ್ತು ಉತ್ತೇಜನಾ ಪಾರ್ಕ್‌ನಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳಿವೆ. ಆದರೆ ಇಲ್ಲಿ ಉತ್ಪಾದನೆಯಾದ ವಸ್ತುಗಳ ರಫ್ತು ವಹಿವಾಟಿಗೆ ಅಗಲವಾದ ರಸ್ತೆ ಸೇರಿದಂತೆ ಪೂರಕ ಸೌಲಭ್ಯ ಕಲ್ಪಿಸಬೇಕಿದೆ. ನೀರು, ವಿದ್ಯುತ್‌ ಸೇರಿದಂತೆ ಮೂಲ ಸೌಕರ್ಯ ಸದ್ಯಕ್ಕೆ ಉತ್ತಮವಾಗಿದೆ. – ಹರ್ಷ, ಉದ್ಯಮಿ

-ನವೀನ್‌ ಭಟ್‌, ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next