ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೋಂದಣಿಗೆ ರೈತರು ತೀವ್ರ ನಿರಾಸಕ್ತಿ ತೋರಿದ್ದು, ಜಿಲ್ಲೆಯಲ್ಲಿ ಇಲ್ಲಿವರೆಗೂ ಕೆಲವೇ ರೈತರು ಮಾತ್ರ ಹಿಂಗಾರು ಹಂಗಾಮಿಗೆ ಬೆಳೆ ವಿಮೆ ನೋಂದಣಿ ಮಾಡಿಸಿದ್ದು, ವಿಮೆ ಕಂಪನಿಗಳಿಗೆ ಒಂದು ರೀತಿ ಮುಖಭಂಗ ಉಂಟಾದಂತೆ ಆಗಿದೆ.
ಹೌದು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 38 ಸಾವಿರಕ್ಕೂ ಅಧಿಕ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಹಿಂಗಾರು ಹಂಗಾಮಿನಲ್ಲೂ ಬೆಳೆ ವಿಮೆಗೆ ಅವಕಾಶ ಇದ್ದರೂ, ವಿಮೆ ಕಂಪನಿಗಳ ಆಟೋಟಗಳನ್ನು ನೋಡಿ ರೈತರು ಬೆಳೆ ವಿಮೆ ನೋಂದಣಿಗೆ ಆಸಕ್ತಿ ತೋರದೇ ಇರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ.
ಕೇವಲ 85 ರೈತರು ನೋಂದಣಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಕೇವಲ 85 ರೈತರು ನೋಂದಣಿ ಮಾಡಿಸಿದ್ದು, ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ ಮಾತ್ರ 85 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ ತಾಲೂಕುಗಳಲ್ಲಿನ ಒಬ್ಬ ರೈತರು ಕೂಡ ಹಿಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಮಾಡಿಸಿಲ್ಲ. ಕಳೆದ ವರ್ಷ 200 ಕ್ಕೂ ಹೆಚ್ಚು ರೈತರು ಹಿಂಗಾರು ಬೆಳೆ ವಿಮೆ ಮಾಡಿಸಿದ್ದರು. ಆದರೆ ಈ ಬಾರಿ ಜಿಲ್ಲೆಯಲ್ಲಿ ಬರಗಾಲ ಇದ್ದು ಮಳೆ ಕೈಕೊಟ್ಟಿದ್ದರೂ ಬೆಳೆ ವಿಮೆ ನೋಂದಣಿಗೆ ರೈತರು ಮುಂದಾಗಿಲ್ಲ.
ಇದಕ್ಕೆ ಮುಖ್ಯ ಕಾರಣ ಬೆಳೆ ವಿಮೆ ಮಾಡಿಸಿದರೂ ವಿಮಾ ಕಂಪನಿಗಳು ರೈತರಿಗೆ ಸಕಾಲದಲ್ಲಿ ನ್ಯಾಯಯುತವಾದ ಪರಿಹಾರ ಕೊಡಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ರೈತರು ಈ ಹಿಂಗಾರು ಹಂಗಾಮಿನ ಬೆಳೆ ವಿಮೆಗೆ ಮುಂದಾಗಿಲ್ಲ. ಹಿಂಗಾರು ಬೆಳೆ ವಿಮೆಗೆ ಸೂರ್ಯಕಾಂತಿ, ನೆಲಗಡಲೆಗೆ ಅವಕಾಶ ಇದೆ. ಕೆಲವೊಂದು ತೋಟಗಾರಿಕಾ ಬೆಳೆಗಳಿಗೂ ವಿಮೆ ಮಾಡಿಸಿಕೊಳ್ಳಲು ಅವಕಾಶ ಇದ್ದರೂ ಜಿಲ್ಲೆಯ ರೈತರಿಂದ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಜೊತೆಗೆ ವಿಮೆ ನೋಂದಣಿಗೆ ರೈತರಿಗೆ ವಿಧಿಸುವ ವಂತಿಗೆ ಕೂಡ ಸಾಕಷ್ಟು ದುಬಾರಿ ಎನ್ನುವ ಕಾರಣಕ್ಕೆ ಜಿಲ್ಲೆಯ ರೈತರು ಬೆಳೆ ವಿಮೆಗೆ ಆಸಕ್ತಿ ತೋರಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಕೈ ಹಿಡಿಯದ ಬೆಳೆ ವಿಮೆ ಯೋಜನೆ: ಪ್ರತಿ ವರ್ಷ ಬೆಳೆ ವಿಮೆ ಯೋಜನೆಯಡಿ ವಿವಿಧ ಖಾಸಗಿ ಕಂಪನಿಗಳು ರೈತರಿಂದ ಕೊಟ್ಯಾಂತರ ರೂ. ವಿಮೆ ಶುಲ್ಕವನ್ನು ಪಡೆಯುತ್ತೇವೆ. ಆದರೆ ಬೆಳೆ ನಷ್ಟವಾದಾಗ ಸಮಯಕ್ಕೆ ಸರಿಯಾಗಿ ಪರಿಹಾರ ಕೊಡುವುದಿಲ್ಲ. ಜೊತೆಗೆ ವಿಮಾ ಕಂಪನಿಗಳು ವಿಧಿಸುವ ವಂತಿಗೆ ಕೂಡ ದುಬಾರಿ ಎನ್ನುವ ಮಾತು ರೈತರಿಂದ ಕೇಳಿ ಬರುತ್ತಿದೆ. ಕೃಷಿ ಇಲಾಖೆ ಹಿಂಗಾರು ಬೆಳೆ ವಿಮೆ ನೋಂದಣಿಗೆ ಪ್ರಚಾರ ಕೈಗೊಂಡಿದ್ದರೂ ರೈತರು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸದೇ ಇರುವುದು ಜಿಲ್ಲೆಯಲ್ಲಿ ಎದ್ದು ಕಾಣುತ್ತಿದೆ.
ನೋಂದಣಿಗೆ ಇನ್ನೂ ಅವಕಾಶ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ಡಿಸೆಂಬರ್ ಕೊನೆವರೆಗೂ ಅವಕಾಶ ಇದ್ದು, ಬೆಳೆ ವಿಮೆ ನೋಂದಣಿಗೂ ಇನ್ನೂ ಅವಕಾಶ ಇದೆ. ಆದರೆ ಜಿಲ್ಲೆಯಲ್ಲಿ ಇಲ್ಲಿವರೆಗೂ ಕೇವಲ 85 ರೈತರು ಮಾತ್ರ ಚಿಂತಾಮಣಿಯಲ್ಲಿ ಬೆಳೆ ವಿಮೆ ಮಾಡಿಸಿದ್ದಾರೆಂದು ಕೃಷಿ ಇಲಾಖೆ ಅಧಿಕಾರಿಯೊಬ್ಬರು ಉದಯವಾಣಿಗೆ ಮಾಹಿತಿ ನೀಡಿದರು.
-ಕಾಗತಿ ನಾಗರಾಜಪ್ಪ