Advertisement

ರಟ್ಟಿ ಮುರಿದ ಮುಮ್ಮಿಗಟ್ಟಿ ; ಐದು ಸಾವಿರ ಎಕರೆಯಲ್ಲಿ ಉಳಿದಿದ್ದು ಬರೀ 50 ಎಕರೆ

12:59 PM Jul 09, 2022 | Team Udayavani |

ಧಾರವಾಡ: ಸರ್ಕಾರ ನೀಡಿದ ಭೂ ಪರಿಹಾರ ಈ ಗ್ರಾಮದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಕೈಗಾರಿಕೆಗಳಾಯಿತು, ಶಿಕ್ಷಣ ಸಂಸ್ಥೆಗಳಾಯಿತು, ರಾಷ್ಟ್ರೀಯ ಹೆದ್ದಾರಿ ಆಯಿತು, ಇದೀಗ ರೈಲ್ವೆ ಮಾರ್ಗ ನಿರ್ಮಾಣ. ಒಟ್ಟಿನಲ್ಲಿ ಈ ಗ್ರಾಮದಲ್ಲಿ ಈಗ ಉಳಿದಿದ್ದು ಬರೀ ಮನೆಗಳು ಮಾತ್ರ.
ಹೌದು. ಧಾರವಾಡದಿಂದ ಕೂಗಳತೆ ದೂರದಲ್ಲಿರುವ ಮುಮ್ಮಿಗಟ್ಟಿ ಗ್ರಾಮದ ಕತೆ ಇದು.

Advertisement

ಮಲೆನಾಡು ಮತ್ತು ಬೆಳವಲದ ಸಿರಿ ಮೈದಡವಿಕೊಂಡ ಈ ಗ್ರಾಮ 5 ಸಾವಿರ ಎಕರೆಗೂ ಅಧಿಕ ಫಲವತ್ತಾದ ಕೃಷಿ ಭೂಮಿ ಹೊಂದಿತ್ತು. ಕೇವಲ 30 ವರ್ಷಗಳ ಹಿಂದೆ ಈ ಗ್ರಾಮದ ರೈತರು ಭರಪೂರ ಭತ್ತ, ಹತ್ತಿ, ತೊಗರಿ, ಗೋವಿನಜೋಳ ಸೇರಿದಂತೆ ಎಲ್ಲಾ ಬೆಳೆಗಳನ್ನು ಬೆಳೆದು ಸಿರಿಸಮೃದ್ಧಿಯಲ್ಲಿದ್ದರು.

ಆದರೆ, ಇದೀಗ ಹೇಳಿಕೊಳ್ಳಲು ಕೂಡ ಇಲ್ಲಿನ ಕುಟುಂಬಗಳಿಗೆ ತಲಾ ಆಧಾರದಲ್ಲಿ ಎರಡು ಎಕರೆಗಳಷ್ಟು ಜಮೀನು ಇಲ್ಲವಾಗಿದೆ. 1956ರಲ್ಲಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಭೂಮಿ ಕಳೆದುಕೊಂಡ ಈ ಗ್ರಾಮದ ಕುಟುಂಬಗಳು ಸರ್ಕಾರದ ಪರಿಹಾರಕ್ಕೆ ಆಸೆ ಪಡದೇ ದೇಶ ಕಟ್ಟಲು ರಸ್ತೆಬೇಕೆಂದಷ್ಟೇ ಹೇಳಿ ತಮ್ಮ ಹೊಲದ ಬದುವಿನ ಜಾಗಗಳನ್ನು ದಾನಕೊಟ್ಟಂತೆ ಕೊಟ್ಟು ಬಿಟ್ಟಿದ್ದರು. ಆದರೆ 1980ರ ದಶಕದಿಂದ ಮೇಲಿಂದ ಮೇಲೆ ನಡೆಯುವ ಕೈಗಾರಿಕೆಗಳ ಸ್ಥಾಪನೆ, ಅಭಿವೃದ್ಧಿ, ರಸ್ತೆಗಳ ಅಭಿವೃದ್ಧಿ, ಐಐಟಿ, ಹೈಕೋರ್ಟ್‌ ಸೇರಿದಂತೆ ಕೆಐಎಡಿಬಿಗೆ ಈವರೆಗೂ 4312 ಎಕರೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿದೆ.

ರೈತರು ತಮ್ಮ ಹೊಲಗಳಲ್ಲಿ ಮಾವಿನ ಗಿಡನೆಟ್ಟು ಫಲ ಕೊಡುವ ಸಂದರ್ಭ ಬಂದಿದ್ದರೂ ತಮ್ಮ ಭೂಮಿಯನ್ನು ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದಾರೆ. ಈಗ ಮುಮ್ಮಿಗಟ್ಟಿ ಗ್ರಾಮದಲ್ಲಿನ 450ಕ್ಕೂ ಅಧಿಕ ಕುಟುಂಬಗಳಿಗೆ ಉಳಿದಿರುವುದು ಬರೀ 50-60 ಎಕರೆ ಜಮೀನು ಮಾತ್ರ. ತಲಾ ಲೆಕ್ಕದಲ್ಲಿ ಪ್ರತಿ ಕುಟುಂಬವೊಂದಕ್ಕೆ ಗುಂಟೆ ಲೆಕ್ಕದಲ್ಲಿ ಜಮೀನು ಉಳಿದಂತಾಯಿತು!

ಮತ್ತದೇ ಸ್ವಾಧೀನ ಗುಮ್ಮ
ಪ್ರತಿಮನೆಗೂ ಎತ್ತು, ಎಮ್ಮೆ, ಹೊಲ ಉಳುಮೆಗೆ ಟ್ರ್ಯಾಕ್ಟರ್‌ಗಳು ಸೇರಿ ಭರ್ಜರಿ ಕೃಷಿ ಸಂಸ್ಕೃತಿ ಹೊಂದಿದ್ದ ಮುಮ್ಮಿಗಟ್ಟಿಯಲ್ಲಿ ಮೇಲಿಂದ ಮೇಲೆ ಭೂ ಸ್ವಾಧೀನ ನಡೆಯುವುದು, ಭೂಮಿಯನ್ನು ಸರ್ಕಾರ ಪಡೆದುಕೊಳ್ಳುತ್ತ ಬಂದಿದ್ದರಿಂದ ಗ್ರಾಮದ ರೈತ ಕುಟುಂಬಗಳು ಕೃಷಿಯಿಂದ ಸಂಪೂರ್ಣ ವಿಮುಕ್ತಿ ಹೊಂದಿದಂತಾಗಿವೆ.

Advertisement

ಗ್ರಾಮದ ಯುವಕರು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕಿದ್ದು, ಸಮೀಪದ ಬೇಲೂರು ಕೈಗಾರಿಕೆಗಳಿಗೆ, ಧಾರವಾಡಕ್ಕೆ ಕೆಲಸ ಅರಸಿಕೊಂಡು ಹೋಗುತ್ತಿದ್ದಾರೆ. ಆದರೆ ಭೂಮಿ ಕಳೆದುಕೊಂಡ ಕೆಲವು ಕುಟುಂಬಗಳು ದಿಕ್ಕಾಪಾಲಾಗಿದ್ದು, ಹಣ ಉಳಿಸಿಕೊಳ್ಳಲಾಗದೇ ಕೂಲಿ ಕೆಲಸಕ್ಕೂ ಹೋಗುವಂತಾಗಿದೆ. ಭೂ ಸ್ವಾಧೀನದಿಂದ ಹಣ ಬಂದಿದ್ದು, ಹೆಣ್ಣು ಮಕ್ಕಳ ಮದುವೆ, ಮನೆ ನಿರ್ಮಾಣ, ಆಸ್ಪತ್ರೆ, ಅನಾರೋಗ್ಯಕ್ಕೆ ಖರ್ಚಾಗಿ ಹೋಯಿತು. ಹೀಗಾಗಿ ಈವರೆಗೂ ಭೂಮಿ ಕಳೆದುಕೊಂಡ ಬಡ-ಮಧ್ಯಮ ವರ್ಗದ ಕುಟುಂಬಗಳ ಸ್ಥಿತಿಯೇನು ಬದಲಾಗಿಲ್ಲ, ಬಡತನ ತಪ್ಪಿಲ್ಲ.

ಪರಿಹಾರ ಮರೀಚಿಕ
ಮುಮ್ಮಿಗಟ್ಟಿ ಗ್ರಾಮದ ಬರೋಬ್ಬರಿ 5 ಸಾವಿರ ಎಕರೆ ಭೂಮಿ ಈವರೆಗೂ ಸರ್ಕಾರದಿಂದ ಭೂಸ್ವಾಧೀನವಾಗಿದ್ದು, ಒಂದೇ ಹಂತದ ಪರಿಹಾರ ಮಾತ್ರ ನೀಡಲಾಗಿದೆ. ಕೆಲವು ವರ್ಷಗಳ ನಂತರ ತಮಗೆ ಹೆಚ್ಚಿನ ಪರಿಹಾರ ಬೇಕು ಎಂದು ಕೇಳಿಕೊಂಡರೂ ಸರ್ಕಾರಗಳು ಸೊಪ್ಪು ಹಾಕಿಲ್ಲ. ಇನ್ನು ರೈತರಿಗೆ ನ್ಯಾಯಾಲಯಕ್ಕೆ ಹೋಗಿ ಪರಿಹಾರ ಪಡೆಯುವಷ್ಟು ಶಕ್ತಿಯೂ ಇಲ್ಲ. ವಕೀಲರ ಶುಲ್ಕ, ಹತ್ತು ವರ್ಷಗಳವರೆಗೂ ಕೋರ್ಟು ಕಚೇರಿ ವ್ಯವಹಾರ ಅಸಾಧ್ಯ. ಹೀಗಾಗಿ
ಸರ್ಕಾರ ನೀಡಿದ ಒನ್‌ ಟೈಂ ಸೆಟ್ಲಮೆಂಟ್‌ ಹಣ ಪಡೆದು ರೈತರು ಸುಮ್ಮನಾಗುತ್ತಿದ್ದಾರೆ.

ಅಳಿದುಳಿದಿದ್ದು 50 ಎಕರೆ ಮಾತ್ರ
ಒಂದು ಕಾಲಕ್ಕೆ 5 ಸಾವಿರ ಎಕರೆ ಭೂಮಿ ಹೊಂದಿದ್ದ ಮುಮ್ಮಿಗಟ್ಟಿ ಗ್ರಾಮದಲ್ಲಿ ಇದೀಗ ಉಳಿದಿದ್ದು ಬರೀ 50 ಎಕರೆ ಮಾತ್ರ. ಇದರ ನಟ್ಟನಡುವೆ ರೈಲು ಮಾರ್ಗ ನಿರ್ಮಿಸಲು ಸರ್ಕಾರ ಯೋಜಿಸಿದ್ದು, ಅಧಿಕಾರಿಗಳು ಮಾರ್ಗ ನಿರ್ಮಾಣದ ಸ್ಕೆಚ್‌ ಸಿದ್ಧಪಡಿಸಿದ್ದಾರೆ.

ಆದರೆ, ಈ ಮಾರ್ಗ ನಿರ್ಮಾಣವಾದರೆ ಈಗಿರುವ ಅರ್ಧ ಎಕರೆ ಭೂಮಿಯನ್ನು ಇಲ್ಲಿನ ರೈತರು ಸರಿಯಾಗಿ ಉಳುಮೆ ಮಾಡಲು ಬರಲ್ಲ. ಹೊಲದ ಮಧ್ಯೆ ರೈಲುಮಾರ್ಗ ಬಂದರೆ ಅರ್ಧ ಅತ್ತ ಅರ್ಧಹೊಲ ಇತ್ತ ಆಗಲಿದ್ದು, ಬಿತ್ತನೆ, ಜಾನವಾರುಗಳ ಸಾಗಾಟ, ಬೋರ್‌ವೆಲ್‌ ಗಳ ಬಳಕೆ ಎಲ್ಲವೂ ಸಮಸ್ಯೆಯಾಗಲಿದೆ. ಹೀಗಾಗಿ ಈ ಗ್ರಾಮದ ರೈತರು ಸರ್ಕಾರಕ್ಕೆ ಇಷ್ಟೆಲ್ಲ ತ್ಯಾಗ ಮಾಡಿದ್ದೇವೆ. ಇನ್ನುಳಿದ ಜಮೀನನ್ನಾದರೂ ನಮಗೆ ಬಿಟ್ಟು ಬಿಡಿ. ರೈಲು ಮಾರ್ಗವನ್ನು ಈಗಾಗಲೇ ವಶಪಡಿಸಿಕೊಂಡಿರುವ ಸರ್ಕಾರದ ಭೂಮಿಯಲ್ಲೇ ನಿರ್ಮಿಸಿ ಎಂದು ಹೋರಾಟಕ್ಕೆ ಅಣಿಯಾಗಿದ್ದಾರೆ ಎನ್ನುತ್ತಾರೆ ಗ್ರಾಮದ ಮುಖಂಡ ಪುಂಡಲೀಕ

ಈಗಾಗಲೇ ಕುತ್ತಿಗೆವರೆಗೂ ನುಂಗಿಯಾಗಿದೆ. ಇನ್ನುಳಿದಿದ್ದು ಬರೀ ತಲೆ ಮಾತ್ರ. ಹಾಗೂ ಹೀಗೂ ಉಸಿರಾಡಿಕೊಂಡು ಬದುಕಲು ಬಿಡುತ್ತಿಲ್ಲ. ಅಳಿದುಳಿದ 50 ಎಕರೆ ಭೂಮಿಯಲ್ಲಿ ಮಾವಿನ ತೋಟ, ಬೋರ್‌ವೆಲ್‌ ಗಳು, ದನಕರುಗಳನ್ನು ಸಾಕಿಕೊಂಡು ಬದುಕಿದ್ದೇವೆ. ಈಗ ಅದನ್ನೂ ಕಿತ್ತುಕೊಂಡರೆ ಹೇಗೆ?
*ಬಸವರಾಜ ಮರಿತಮ್ಮನವರ,
ಮುಮ್ಮಿಗಟ್ಟಿ ಗ್ರಾಮಸ್ಥ

ಮುಮ್ಮಿಗಟ್ಟಿ ಸಮೀಪ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿ ಪಡೆಯಲು ಈಗಾಗಲೇ ಪ್ರಾಥಮಿಕ ನೋಟಿಸ್‌ ನೀಡಲಾಗಿದೆ. ಇದಕ್ಕೆ ಗ್ರಾಮಸ್ಥರು ಮಾರ್ಗ ಬದಲಾವಣೆ ಮಾಡುವಂತೆ ಮನವಿ ಕೂಡ ಕೊಟ್ಟಿದ್ದಾರೆ. ಸ್ಥಳ ಪರಿಶೀಲನೆ ಮಾಡಿದ್ದು, ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ವರದಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.
*ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

*ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next