Advertisement
ಸದ್ಯ ಇಡೀ ದೇಶದಲ್ಲಿ ಕೇರಳ ರಾಜ್ಯದಲ್ಲಿ ಮಾತ್ರ ಆನ್‌ಲೈನ್ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಯಲ್ಲಿದ್ದು, ಅದಕ್ಕಿಂತಲೂ ಪರಿಣಾಮಕಾರಿ ಹಾಗೂ ಬಳಕೆ ಸ್ನೇಹಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಬಲ್ಲ ವ್ಯವಸ್ಥೆಯನ್ನು ರೂಪಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ “ನೀಲ ನಕಾಶೆ’ ಸಿದ್ಧಗೊಂಡಿದ್ದು, ಅದನ್ನು ಕಾರ್ಯಾಗತಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ.
Related Articles
Advertisement
“ಕೈಚಳಕ’ಗಳಿಗೆ ಕಡಿವಾಣ:ತೆರಿಗೆ ಸಂಗ್ರಹಕ್ಕೆ ಗ್ರಾಮ ಪಂಚಾಯಿತಿಗಳಲ್ಲಿ ವಿಪುಲ ಅವಕಾಶಗಳಿವೆ. ಮೇಲಾಗಿ ಕಾನೂನು ಸಹ ಇದೆ. ಆದರೆ, ಸ್ಥಳೀಯ ವ್ಯವಸ್ಥೆಯ ಲೋಪಗಳು ಮತ್ತು ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಗ್ರಾಮ ಪಂಚಾಯಿತಿಗಳು ಆದಾಯದ ಅವಕಾಶಗಳನ್ನು ಕೈಚೆಲ್ಲಬೇಕಾಗುತ್ತಿದೆ. ಅಲ್ಲದೇ ತೆರಿಗೆ ಬೇಡಿಕೆ ಪಟ್ಟಿ ಸರಿಯಾಗಿ ಅಂದಾಜು ಮಾಡುವುದಿಲ್ಲ. 500 ರೂ. ತೆರಿಗೆ ಇದ್ದರೆ ಅದಕ್ಕಿಂತ ಕಡಿಮೆ ಮೊತ್ತದ ರಸೀದಿ ನೀಡಲಾಗುತ್ತದೆ. ವಸೂಲಿ ಮಾಡಿದ ತೆರಿಗೆಯನ್ನು ಜಮಾ ಮಾಡದೇ ತಮ್ಮಲ್ಲೇ ಉಳಿಸಿಕೊಳ್ಳಲಾಗುತ್ತದೆ. ಈ ರೀತಿ ತೆರಿಗೆ ವಸೂಲಿಯಲ್ಲಿ ಸ್ಥಳೀಯ ಸಿಬ್ಬಂದಿ ನಾನಾ “ಕೈಚಳಕ’ಗಳನ್ನು ತೋರುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಿ ಪಾರದರ್ಶಕತೆ ತಂದು ಗ್ರಾಮ ಪಂಚಾಯಿತಿಗಳ ಆದಾಯ ಹೆಚ್ಚಿಸುವುದು ಆನ್‌ಲೈನ್ ತೆರಿಗೆ ಸಂಗ್ರಹ ವ್ಯವಸ್ಥೆ ಜಾರಿಗೆ ತರುವ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಬೇಡಿಕೆ-ವಸೂಲಿಯಲ್ಲಿ ಅಂತರ
ಈಗಿನ “ಹಸ್ತಚಾಲಿತ’ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿವೆ. ತೆರಿಗೆ ಬೇಡಿಕೆ ಮತ್ತು ವಸೂಲಿಯಲ್ಲಿ ಅಜಗಜಾಂತರ ಅಂತರವಿದೆ. ಕೆಲವು ಕಡೆ ಬೇಡಿಕೆಯ ಶೇಕಡ 40ರಷ್ಟೂ ತೆರಿಗೆ ಸಂಗ್ರಹವಾಗುವುದಿಲ್ಲ. ಇದರಿಂದಾಗಿ ಆದಾಯ ಖೋತಾ ಆಗಿ ಇದೇ ನೇರವಾಗಿ ಗ್ರಾಮೀಣ ಭಾಗದ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ವರ್ಷ ಕೋಟಿಗಟ್ಟಲೇ ತೆರಿಗೆ ಬಾಕಿ ಉಳಿಯುತ್ತದೆ. ಅದು ಮುಂದಿನ ವರ್ಷಕ್ಕೆ “ಕ್ಯಾರಿಓವರ್’ ಆಗುತ್ತದೆ. ಹಿಂದಿನ ಬಾಕಿ, ಹಾಲಿ ವರ್ಷದ ಹೊಸ ಅಂದಾಜು ಸೇರಿ ಮೊತ್ತ ಹೆಚ್ಚಾಗುತ್ತದೆ. ವಸೂಲಿ ಆಗುವುದಿಲ್ಲ. ಬಾಕಿ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಒಂದಿಷ್ಟು ಉತ್ತಮವಾಗಿದ್ದರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಕಲಬುರಗಿ, ಯಾದಗಿರಿ ಜಿಲ್ಲೆಗಳು ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತೆರಿಗೆ ಸಂಗ್ರಹ ತೀರಾ ಕಳಪೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. “ಹಸ್ತಚಾಲಿತ’ ತೆರಿಗೆ ವಸೂಲಿ ಪದ್ದತಿಯಿಂದ ಆಗುತ್ತಿರುವ ಅನಾನುಕೂಲಗಳನ್ನು ಗಮನಿಸಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದೇವೆ. ಈಗಾಗಲೇ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಏಕಕಾಲದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು’
– ಎಂ.ಕೆ. ಕೆಂಪೇಗೌಡ, ನಿರ್ದೇಶಕರು, ಗ್ರಾಮೀಣಭಿವೃದ್ಧಿ-ಪಂಚಾಯತ್‌ರಾಜ್ ಇಲಾಖೆ. – ರಫೀಕ್ ಅಹ್ಮದ್