Advertisement

ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣಕ್ಕೆ ಆನ್‌ಲೈನ್‌ ವ್ಯವಸ್ಥೆ : ಸುರೇಶ್‌ ಕುಮಾರ್‌

09:21 PM Jan 06, 2021 | Team Udayavani |

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ವಾರ್ಷಿಕ ನವೀಕರಣ ಪ್ರಕ್ರಿಯೆ ಮುಂದಿನ ಶೈಕ್ಷಣಿಕ ಸಾಲಿನಿಂದ ಆನ್‌ಲೈನ್‌ ಮೂಲಕವೇ ನಿರ್ವಹಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ರುಪ್ಸಾ ಸಂಘಟನೆಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳು ಶಿಕ್ಷಣ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಅವು ಅನಗತ್ಯ ಶೋಷಣೆಗೊಳಗಾಗಬಾರದು. ಆಡಳಿತ ವ್ಯವಸ್ಥೆ ಪಾರದರ್ಶಕವಾಗಿರಬೇಕು. ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಮಾರ್ಗದರ್ಶನದಂತೆ ನವೀಕರಣ ಪ್ರಕ್ರಿಯೆಯಲ್ಲಿ ಸುರಕ್ಷತಾ ಕ್ರಮಗಳು ಕಡ್ಡಾಯವಾಗಿದ್ದು ಅವುಗಳನ್ನು ಪಾಲಿಸಬೇಕಾದ್ದು ಆಡಳಿತ ಸಂಸ್ಥೆಗಳ ಜವಾಬ್ದಾರಿಯಾಗಿದೆ. ನ್ಯಾಯಾಲಯದ ಆದೇಶದಂತೆ ನಡೆಯಬೇಕಾದ ಹಿನ್ನೆಲೆಯಲ್ಲಿ ಈಗಾಗಲೇ ಮೂರು ತಿಂಗಳ ಕಾಲಾವಕಾಶ ನೀಡಿ ನವೀಕರಿಸಲು ಅನುಮತಿಸಲಾಗಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸದ ಶಾಲೆಗಳ ವಿರುದ್ಧ ನಿಯಮಗಳ ಅನುಸಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರದಿಂದ 2019-20ನೇ ಸಾಲಿಗೆ ಸಂಬಂಧಿಸಿದಂತೆ ಒದಗಿಸಲಾಗಿರುವ ಆರ್‌ಟಿಇ ಅನುದಾನವನ್ನು ಸಂಪೂರ್ಣವಾಗಿ ಶಾಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಆರ್‌ಟಿಇ ನಿಯಮಗಳ ಪ್ರಕಾರ ಶೈಕ್ಷಣಿಕ ವರ್ಷದ ಸೆಪ್ಟೆಂಬರ್‌ ಮತ್ತು ಜನವರಿ ತಿಂಗಳಲ್ಲಿ ಶುಲ್ಕ ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಶಿಕ್ಷಕರ ಕಲ್ಯಾಣ ನಿಧಿಯಿಂದ ಕೆಲವು ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ ನಿಯಮಗಳ ವ್ಯಾಪ್ತಿಯಲ್ಲಿ ಪರಿಶೀಲಿಸಲಾಗುವುದು ಎಂದರು.

ಕೇಂದ್ರ ವಿತ್ತ ಸಚಿವರಿಗೆ ಪತ್ರ
ಶಿಕ್ಷಣ ಸಂಸ್ಥೆಗಳು ಮಕ್ಕಳ ಹಿತದೃಷ್ಟಿಯಿಂದ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯಗಳನ್ನು ಮಾಡಿಕೊಂಡಿದ್ದು, ಪ್ರಸಕ್ತ ವರ್ಷದಲ್ಲಿ ಒದಗಿಬಂದಿರುವ ದುಸ್ಥಿತಿಯ ಕಾರಣ ಇಎಂಐ ಮುಂದೂಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ, ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿಷಯವಾದ್ದರಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಪತ್ರ ಮುಖೇನ ಕೋರಲಾಗುವುದು ಎಂದು ಭರವಸೆ ನೀಡಿದರು.

Advertisement

ಶಾಲೆಗಳು ಅನುದಾನ ವ್ಯಾಪ್ತಿಗೆ:
1995 ರಿಂದ 2000ರ ಅವಧಿಯಲ್ಲಿ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೊಳಪಡಿಸ ಬೇಕು ಎಂಬುದು ಶಿಕ್ಷಣ ಇಲಾಖೆಯ ನಿಲುವಾಗಿದ್ದು, ಈ ಬಗ್ಗೆ ಬಜೆಟ್‌ ಪೂರ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುತ್ತದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನುºಕುಮಾರ್‌, ರುಪ್ಸಾ ಸಂಘಟನೆಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ, ಸಂಘಟನೆಯ ವಿವಿಧ ಪದಾಧಿಕಾರಿಗಳು, ಇಲಾಖೆಯ ಹಿರಿಯ ಅಧಿಕಾರಿ ಇದ್ದರು.

ರುಪ್ಸಾ ಒಕ್ಕೂಟದಿಂದ ಪ್ರತಿಭಟನೆ
ರಾಜ್ಯದ ಖಾಸಗಿ ಶಾಲಾಡಳಿತ ಮಂಡಳಿಗಳು ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಮಾನ್ಯತೆ ಪಡೆದ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ (ರುಪ್ಸಾ)ದಿಂದ ಪ್ರತಿಭಟನೆ ನಡೆಸಿದರು.

ನಗರದ ಮೌರ್ಯವೃತ್ತದ ಗಾಂಧಿ ಪ್ರತಿಮೆಯಿಂದ ಪ್ರತಿಭಟನಾ ಜಾಥಾ ಆರಂಭಿಸಿದ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರಯ ಫ್ರೀಡಂ ಪಾರ್ಕ್‌ನಲ್ಲಿ ಪೂರ್ಣಗೊಳಿಸಿ, ಬಹಿರಂಗ ಸಭೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಕಳೆದ 9 ತಿಂಗಳಿನಿಂದ ಖಾಸಗಿ ಶಾಲಾ ನೌಕರರು ವೇತನವಿಲ್ಲದೇ ಕಷ್ಟದಲ್ಲಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಕನಿಷ್ಠ ಮಾಸಿಕ 10 ಸಾವಿರ ರೂ.ನಂತೆ 9 ತಿಂಗಳಿಗೆ ಪ್ಯಾಕೇಜ್‌ ನೀಡಬೇಕು. ಕೊರೊನಾದಿಂದ ಸಂಕಷ್ಟಲ್ಲಿರುವ ಖಾಸಗಿ ಶಾಲೆಗಳಿಗೆ ಪರಿಹಾರ ಒದಗಿಸಲು ಕನಿಷ್ಠ 1 ಸಾವಿರ ಕೋಟಿ ರೂ. ಪ್ಯಾಕೇಜ್‌ ಘೋಷಿಸಬೇಕು. 1985ರಿಂದ 2010ರ ವರೆಗಿನ ಎಲ್ಲ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಬೇಕು. ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ಪರಿಹರಿಸಲು ಸರ್ಕಾರ ಮುಂದಾಗಬೇಕು ಎಂದು ಒಕ್ಕೂಟದ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next