Advertisement
ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಜೋಡಿಸಿಕೊಂಡು ತರಗತಿಗಳಿಗೆ ಸಿದ್ಧವಾಗುವಾಗಲೇ, ಲಾಕ್‌ಡೌನ್ ಘೋಷಣೆಯಾದ್ದರಿಂದ, “ಸಮಯ ಕಳೆಯುವ ಕಷ್ಟ’ದ ಯೋಚನೆಯೂ ಬರಲಿಲ್ಲ. ಮೊದಲ ದಿವಸ, ಅಂತರ್ಜಾಲ ಸಂಪರ್ಕದ ಮೂಲಕ ನನ್ನ ಗುರುತಿನ ಸಂಕೇತವನ್ನು ಟೈಪಿಸಿ, “ಇಂಟರ್ನೆಟ್ ತರಗತಿ’ಗೆ ಪ್ರವೇಶ ಪಡೆದೆ. ತನ್ನಿಂತಾನಾಗಿಯೇ “ಝೂಮ್’ ವೇದಿಕೆಗೆ ಬಂದಿದ್ದೆ. ಅದನ್ನು ಕ್ಲಿಕ್ ಮಾಡಿ, ತರಗತಿಯ ಒಳಗೆ ಅಧಿಕೃತ ಪ್ರವೇಶ ಪಡೆದೆ. ಶಿಕ್ಷಕಿಯ ಸುಮಧುರ ಸ್ವರ ಕೇಳಿ, ಎಲ್ಲವೂ ಸರಿಯಾಗಿರಬಹುದೆಂಬ ಭರವಸೆ ಮೂಡಿಸಿತು.
Related Articles
Advertisement
ಮುಂದಿನ ಗೋಳು ಹೇಳತೀರದು. ಕೆಲವರಿಗೆ ಇಂಟರ್ನೆಟ್ ಸಂಪರ್ಕ ತಪ್ಪಿಹೋದರೆ, ಇನ್ನು ಕೆಲವರಿಗೆ ಕರೆಂಟ್ ಕೈಕೊಟ್ಟು ಲ್ಯಾಪ್‌ಟಾಪ್ ನಿಷ್ಕ್ರಿಯವಾ ಗುತ್ತಿತ್ತು. ತರಗತಿಗಳ ಆರಂಭದ ದಿನದಂದೇ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕಿಯನ್ನೊಳಗೊಂಡ ವಾಟ್ಸಾಪ್ ಗುಂಪೊಂದು ತಯಾರಾಗಿತ್ತು. ಏನೇ ತೊಂದರೆಯಾದರೂ ಅದರಲ್ಲಿ ಸಂದೇಶ ಹಾಕಬಹುದಾಗಿತ್ತು. ನಾವು ಕಲಿತ ಹೊಸ ಪದಗಳನ್ನು ಹಂಚಿಕೊಳ್ಳಬಹುದಾಗಿತ್ತು.
ಮೊದಮೊದಲಿಗೆ ತರಗತಿಗಳನ್ನು ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು. ಯಾರಾದರೂ ತರಗತಿಗೆ ಹಾಜರಾಗದಿದ್ದಲ್ಲಿ, ಬಿಡುವಾದಾಗ ನೋಡಬಹುದಾಗಿತ್ತು. ಮುಂದಿನ ದಿನಗಳಲ್ಲಿ “ಝೂಮ್’ನ ಸುರಕ್ಷತೆಯ ಬಗೆಗಿನ ಸಂಶಯಗಳಿಂದಾಗಿ ಈ ಸೌಲಭ್ಯದಿಂದ ವಂಚಿತರಾದೆವು. ಕೆಲವು ದಿನಗಳ ನಂತರ ವಿದ್ಯಾರ್ಥಿಗಳನ್ನು ಎರಡು ಮೂರು ಗುಂಪುಗಳಾಗಿ ವಿಂಗಡಿಸಿ, ನಮ್ಮ ನಮ್ಮೊಳಗೇ ಮಾತಾಡುವ, ಅಭ್ಯಾಸಗಳನ್ನು ಮಾಡುವ ಅವಕಾಶ ಕಲ್ಪಿಸಲಾಯಿತು. ಗುಂಪುಗಳಿಗೆ “ಬ್ರೇಕ್ ಔಟ್ ರೂಮ್ಸ್’ ಎಂದು ಹೆಸರು.
ನಾವು ಮುಖತಃ ಪರಿಚಿತರಲ್ಲದಿದ್ದರೂ “ಎಷ್ಟೋ ವರ್ಷಗಳಿಂದ ಒಬ್ಬರನ್ನೊಬ್ಬರು ಅರಿತಿದ್ದೇವೆ’ ಎಂಬ ಭಾವನೆಯನ್ನು ಮೂಡಿಸುವಲ್ಲಿ ಇದು ಸಮರ್ಥವಾಯಿತು. ಪ್ರತಿದಿನವೂ ಏನಾದರೊಂದು ಅಡಚಣೆ ಎದುರಾದರೂ, ನನ್ನ “ಮರಳಿ ಶಾಲೆಗೆ’ ಅನುಭವದ ರಸಗಳಿಗೆಗಳು ಹೆಚ್ಚುತ್ತಲೇ ಹೋದವು. ಭಾಷಾ ಕಲಿಕೆಯ ಜೊತೆಗೆ ಇಂಟರ್ನೆಟ್, ಲ್ಯಾಪ್‌ಟಾಪ್ ಉಪಯೋಗಗಳ ಹಲವಾರು ಆಯಾಮಗಳ ಪರಿಚಯವಾಯಿತು. ಇದಕ್ಕೆಲ್ಲ ಅನುವು ಮಾಡಿಕೊಟ್ಟ ಲಾಕ್‌ಡೌನ್ ಸಮಯಕ್ಕೆ ಥ್ಯಾಂಕ್ಸ್
* ಡಾ. ಉಮಾಮಹೇಶ್ವರಿ ಎನ್.