Advertisement

ಆನ್‌ಲೈನ್‌ ಆಸ್ತಿ ತೆರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ ಬಿಡಿಎ

12:52 AM May 08, 2019 | Team Udayavani |

ಬೆಂಗಳೂರು: ಆಸ್ತಿ ತೆರಿಗೆ ಪರಿಷ್ಕರಣೆ ಸೇರಿದಂತೆ ಹಲವು ಕಾರಣಗಳಿಗಾಗಿ ಬಿಡಿಎ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಎರಡು ತಿಂಗಳಿಂದ ಸ್ಥಗಿತಗೊಳಿಸಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

Advertisement

ಕಳೆದ ಮಾ. 30 ರಿಂದಲೇ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಮಾಡುವ ವ್ಯವಸ್ಥೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಐಟಿ ವಿಭಾಗ ಸ್ಥಗಿತಗೊಳಿಸಿದ್ದು, ತೆರಿಗೆ ಪಾವತಿದಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಜತೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಬೇಕಾದ ಇಲಾಖೆಯ ಹಿರಿಯ ಅಧಿಕಾರಿಗಳು ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿದ್ದು, ಇದು ಕೂಡ ವೆಬ್‌ಸೈಟ್‌ನ ಆಸ್ತಿ ತೆರಿಗೆ ವಿಭಾಗದ ಜಾಲತಾಣ ಸ್ಥಗಿತಗೊಂಡಿರುವುದಕ್ಕೆ ಒಂದು ಕಾರಣ ಎಂದು ಹೇಳಲಾಗುತ್ತಿದೆ.

ತೆರಿಗೆ ಪಾವತಿ ಬಗ್ಗೆ ಅಧಿಕಾರಿಗಳು ಐಟಿ ವಿಭಾಗಕ್ಕೆ ಸಂಪೂರ್ಣ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೆ ಆಸ್ತಿ ತೆರಿಗೆ ಪರಿಷ್ಕರಣೆ ಬಗ್ಗೆಯೂ ವಿವರವನ್ನು ನೀಡಬೇಕಾಗುತ್ತದೆ. ಈ ಅಧಿಕಾರಿಗಳು ಪೂರಕ ಮಾಹಿತಿ ನೀಡಿದ ಮೇಲೆ ಐಟಿ ಅಧಿಕಾರಿಗಳು ವೆಬ್‌ಸೈಟ್‌ಗೆ ಸಂಬಂಧ ಪಟ್ಟ ಮಾಹಿತಿಗಳನ್ನು ಅಪ್‌ಡೇಟ್‌ ಮಾಡುತ್ತಾರೆ.

ಆದರೆ ಇಲಾಖಾವಾರು ಅಧಿಕಾರಿಗಳು ಲೋಕಸಭಾ ಚುನಾವಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‌ ಪಾವತಿಯ ಬಗ್ಗೆ ಪೂರಕ ಮಾಹಿತಿ ನೀಡುವಿಕೆಯಲ್ಲಿ ಹಿನ್ನಡೆ ಉಂಟಾಗಿತ್ತು ಎಂದು ಪ್ರಾಧಿಕಾರದ ತಾಂತ್ರಿಕ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಅಪ್‌ಡೇಟ್‌ ಕಾರ್ಯ ಸಾಗಿದೆ: ಇದೀಗ ಲೋಕಸಭಾ ಚುನಾವಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ವಾಪಸ್‌ ಆಗಿದ್ದು, ತೆರಿಗೆ ಸಂಬಂಧಿಸಿದ ಮಾಹಿತಿ ಅಪ್‌ಡೇಟ್‌ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬ್ಯಾಂಕ್‌ನಲ್ಲಿ ಆಸ್ತಿ ತೆರಿಗೆ ಪಾವತಿಯಾದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣವಾದ ವಿವರವನ್ನು ತಾಂತ್ರಿಕ ವಿಭಾಗದ ಅಧಿಕಾರಿಗಳಿಗೆ ನೀಡುತ್ತಾರೆ. ಈ ಎಲ್ಲಾ ಮಾಹಿತಿ ಬಂದ ಮೇಲೆ ಅದನ್ನು ವೆಬ್‌ ಸೈಟ್‌ನಲ್ಲಿ ಹಾಕಲಾಗುತ್ತದೆ. ಆ ಕೆಲಸ ಈಗಾಗಲೇ ನಡೆದಿದೆ ಎಂದು ಬಿಡಿಎನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್‌ಸೈಟ್‌ಗೆ ವೇಗ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಐಟಿ ವಿಭಾಗದ ಅಧಿಕಾರಿಗಳು ಬಿಡಿಎ ವೆಬ್‌ಸೈಟ್‌ಗೆ ತಾಂತ್ರಿಕವಾಗಿ ಮತ್ತಷ್ಟು ವೇಗ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ ತಾಂತ್ರಿಕವಾಗಿ ಕೆಲವು ಬದಲಾವಣೆಯೊಂದಿಗೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ.

ಮೇ 15 ರಿಂದ ಬಿಡಿಎನ ಅಂತರ್‌ಜಾಲ ತಾಣದ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಬಿಡಿಎನ ತಾಂತ್ರಿಕ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.

ಅಂತರ್‌ಜಾಲ ತಾಣದ ಮೂಲಕ ಸಾರ್ವಜನಿಕರು ಆಸ್ತಿ ತೆರಿಗೆ ಮಾಡುವ ವ್ಯವಸ್ಥೆ ಸ್ಥಗಿತಗೊಳಿಸಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಮಾಹಿತಿ ಪಡೆದು ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡಲಾಗುವುದು.
-ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next