Advertisement
ಸೈಬರ್‌ಕ್ರೈಂ ಮಾಡುವವರು ಹೆಚ್ಚಾಗಿ ಜನರನ್ನು ವಂಚಿಸಲು ಬಳಸುವ ಪ್ರಮುಖ ವಿಷಯಗಳು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಇದರ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿರುವುದು ಅಗತ್ಯ.1. ನಕಲಿ ದಾಖಲೆ ಸೃಷ್ಟಿಸುವುದು
ಸೈಬರ್ ವಂಚಕರು ಕೆಲವು ಪ್ರತಿಷ್ಠಿತ ಸಂಸ್ಥೆಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಉದ್ಯೋಗ ಸಹಿತ ನಾನಾ ಆಸೆ ತೋರಿಸಿ ವಂಚನೆ ಎಸಗುತ್ತಾರೆ. ಪ್ರತಿಷ್ಠಿತ ಸಂಸ್ಥೆಗಳ ವೆಬ್‌ಸೈಟ್‌ನ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಜನರನ್ನು ಯಾಮಾರಿಸುವುದೂ ಇದೆ.
2. ಲಾಟರಿ ಮತ್ತು ಬಹುಮಾನ
ದೊಡ್ಡ ಮೊತ್ತದ ಬಹುಮಾನ ಗೆದ್ದಿದ್ದೀರಿ ಅಥವಾ ನಿಮಗೆ ಲಾಟರಿ ಬಂದಿದೆ ಮುಂತಾದವುಗಳ ಮೂಲಕ ಜನರನ್ನು ನಂಬಿಸುತ್ತಾರೆ. ಕೆಲವರು ತಾವು ಬಹುಮಾನ ಗೆದ್ದಿದ್ದೇವೆ ಎನ್ನುವ ಸಂದೇಶಗಳನ್ನು ಸ್ವೀಕರಿಸುತ್ತಾರೆ. ಆಗಾಗ ಈ ಬಗ್ಗೆ ಶುಲ್ಕ ನೀಡಬೇಕೆಂಬ ಬೇಡಿಕೆಗಳನ್ನೂ ಒಡ್ಡುತ್ತಾರೆ. ಇಂತಹ ನಕಲಿ ಸಂದೇಶಗಳನ್ನು ನಿರ್ಲಕ್ಷಿಸಿ.
3. ಭಾವನಾತ್ಮಕ ವಂಚನೆ
ಡೇಟಿಂಗ್ ಆ್ಯಪ್‌ನಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಜನರನ್ನು ವಂಚಿಸಲಾಗುತ್ತದೆ. ಫಂಡ್‌ಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ.
4.ಉದ್ಯೋಗ ಆಮಿಷ
ಉದ್ಯೋಗಾವಕಾಶಗಳ ಬಗ್ಗೆ ಸಂದೇಶಗಳು ಬಂದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸುವುದು ಉತ್ತಮ. ತರಬೇತಿ ಹಾಗೂ ಶುಲ್ಕ ಪಾವತಿ ಬಗ್ಗೆ ವ್ಯವಹರಿಸುವಾಗ ಜಾಗರೂಕರಾಗಿರ ಬೇಕು. ಸಂಸ್ಥೆಗಳ ಮೂಲ ವೆಬ್‌ಸೈಟ್ ಅಥವಾ ಇನ್ಯಾವುದಾದರೂ ಮೂಲಗಳಿಂದ ಖಚಿತಪಡಿಸಿಕೊಂಡೇ ಮುಂದುವರಿಯಬೇಕು.
5. ಟೆಕ್ ಬೆಂಬಲಿತ ವಂಚನೆ
ಕೆಲವು ಮಂದಿ ಸಂತ್ರಸ್ತರು ಟೆಕ್ ಸಪೋರ್ಟ್ ಮೂಲಕ ವಂಚನೆ ಕರೆಗಳನ್ನು ಸ್ವೀಕರಿಸುತ್ತಾರೆ. ಅನಂತರ ಅವರನ್ನು ರಿಮೋಟ್ ಆಕ್ಸೆಸ್‌ಗೆ ಒಳಪಡಿಸಿ ಡಾಟಾ ಕದ್ದಾಲಿಕೆಯನ್ನು ಮಾಡಲಾಗುತ್ತದೆ.
6. ಹೂಡಿಕೆ ವಂಚನೆ
ನಕಲಿ ಬಂಡವಾಳ ಕಾರ್ಯ ಕ್ರಮಗಳನ್ನು ಬಿಂಬಿಸಿ ಜನರನ್ನು ತಪ್ಪು ದಾರಿಗೆ ಎಸಗಲಾಗುತ್ತದೆ. ಮುಖ್ಯವಾಗಿ ಅಧಿಕ ಲಾಭಾಂಶದ ಆಸೆ ತೋರಿಸುವುದು ಇವುಗಳಲ್ಲೊಂದು.
7. ಕ್ಯಾಶ್‌ಆಬ್-ಡೆಲಿವರಿ ವಂಚನೆ
ಆನ್‌ಲೈನ್ ಸ್ಟೋರ್‌ಗಳು ಗ್ರಾಹಕರಿಂದ ಮುಂಗಡ ಹಣ ಖರೀದಿಸಿ ಅವರಿಗೆ ವಸ್ತುಗಳನ್ನು ನೀಡದೆ ವಂಚಿಸಲಾಗುತ್ತಿದೆ.
8. ನಕಲಿ ಟ್ರಸ್ಟ್‌ಗಳು
ವಂಚಕರು ಚಾರಿಟೆಬಲ್ ಸಂಸ್ಥೆಗಳ ಹೆಸರನ್ನು ಹೇಳಿಕೊಂಡು ನೆರವು ಯಾಚಿಸುವ ಘಟನೆಗಳೂ ನಡೆಯುತ್ತಿವೆ.
9. ಡಿಜಿಟಲ್ ಅರೆಸ್ಟ್ ಬೆದರಿಕೆ
ಅಕ್ರಮ ಚಟುವಟಿಕೆ ಎಸಗಿದ್ದೀರಿ ಅಥವಾ ನಿಮಗೆ ವಿದೇಶದಿಂದ ಡ್ರಗ್ಸ್ ಸಹಿತ ಮಾದಕ ವಸ್ತುಗಳಿರುವ ಪಾರ್ಸೆಲ್ ಬಂದಿದೆ ಎಂದು ನಂಬಿಸುವ ಜತೆಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕೆಂದು ಹೇಳುತ್ತಾರೆ. ಡಿಜಿಟಲ್ ವ್ಯವಸ್ಥೆಯಲ್ಲೇ ನಿಮ್ಮನ್ನು ಅವರ ಕಪಿಮುಷ್ಠಿಗೆ ಪಡೆಯುತ್ತಾರೆ. ಅಧಿಕಾರಿಗಳ ಸೋಗಿನಲ್ಲಿ, ಸಮವಸ್ತ್ರ ಧರಿಸಿಯೇ ಹೀಗೆ ಮಾಡುತ್ತಾರೆ.
10. ಸಾಲ ಹಾಗೂ ಕಾರ್ಡ್ ವಂಚನೆ
ನಿರ್ದಿಷ್ಟ ಅವಧಿಗೆ ವಿವಿಧ ರೀತಿಯ ಸಾಲ ನೀಡುವ ಆಮಿಷವನ್ನು ನಕಲಿ ಸಾಲಗಾರರು ಒಡ್ಡುತ್ತಾರೆ.
-ಹಣಕಾಸಿನ ವಹಿವಾಟು ನಿಗಾ ಇರಲಿ ಯಾವುದೇ ಅನಧಿಕೃತ ಚಟುವಟಿಕೆಗಳಿಗಾಗಿ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವುದು ಅಗತ್ಯ.
-ಉದ್ಯೋಗ ಆಫರ್ ಬಗ್ಗೆ ಜಾಗರೂಕರಾಗಿರಿ. ಕಂಪೆನಿಯ ವಿವರಗಳನ್ನು ಪರಿಶೀಲಿಸಿ ಉದ್ಯೋಗ ಅರ್ಜಿಗಳು ಅಥವಾ ತರಬೇತಿ ಬಗ್ಗೆ ಪುನರ್‌ಪರಿಶೀಲನೆ ನಡೆಸುವುದು ಉತ್ತಮ.
-ಕ್ಯೂಆರ್ ಕೋಡ್‌ಗಳನ್ನು ಪರಿಶೀಲಿಸಿ. ಯಾವುದೇ ಕ್ಯೂ ಆರ್‌ಕೋಡ್ ಆಧಾರಿತ ವಹಿವಾಟುಗಳನ್ನು ಪೂರ್ಣಗೊಳಿಸುವ ಮೊದಲು ಸ್ವೀಕರಿಸುವವರ ಬ್ಯಾಂಕಿಂಗ್ ವಿವರಗಳನ್ನು ಎರಡು ಬಾರಿ ಪರಿಶೀಲನೆ ನಡೆಸುವುದು ಉತ್ತಮ.
-ಉಪಕರಣಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಸಾಧನಗಳನ್ನು ಅಪರಿಚಿತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು. ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ನಾವೇ ಬಗೆಹರಿಸಿಕೊಳ್ಳುವುದು ಉತ್ತಮ. ಈ ರೀತಿಯ ಭದ್ರತಾ ನಿಯಮಾವಳಿಗಳನ್ನು ಅನುಸರಿಸಿದರೆ ಆನ್‌ಲೈನ್ ವಂಚನೆಗೆ ತಕ್ಕಮಟ್ಟಿಗೆ ಕಡಿವಾಣ ಹಾಕಲು ಸಾಧ್ಯ.