Advertisement

Malpe ಫಿಶರೀಸ್‌ ಕಾಲೇಜು: ದುರ್ವಾಸನೆಯಲ್ಲೇ ಪಾಠ

05:26 PM Nov 05, 2024 | Team Udayavani |

ಮಲ್ಪೆ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರಿನ ಆವರಣ ಗೋಡೆಯ ಬದಿಯ ತೋಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕೊಳಚೆ ನೀರು ಹರಿಯುತ್ತಿದ್ದು ಸಮಸ್ಯೆಗೆ ಇನ್ನು ಪರಿಹಾರಿ ಸಿಕ್ಕಿಲ್ಲ. ಈ ವಿದ್ಯಾಸಂಸ್ಥೆಯಲ್ಲಿ 1ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕೊಳಚೆ ನೀರಿನಿಂದ ಶಾಲಾ ವಿದ್ಯಾರ್ಥಿಗಳು ತೊಂದರೆಗೊಳಗಾಗುತ್ತಿದ್ದು, ಈ ಗಲೀಜು ನೀರನ್ನು ಮೆಟ್ಟಿಕೊಂಡು ಕಾಲೇಜು ಪ್ರವೇಶಿಸ ಬೇಕಾಗಿದೆ. ಪರಿಸರದ ಸುತ್ತಲೂ ಸೊಳ್ಳೆ ಕಾಟ ಹೆಚ್ಚಾಗುತ್ತಿದ್ದು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

Advertisement

ಜಿಲ್ಲೆಯ ಪ್ರಮುಖ ವಾಣಿಜ್ಯ
ಮತ್ತು ಪ್ರವಾಸಿ ಕೆಂದ್ರ ವಾದ ಮಲ್ಪೆ ನಗರದ ನಿತ್ಯ ಸಾವಿರಾರು ಜನರು ಬರುತ್ತಾರೆ. ಸಾವಿರಾರು ವಾಹನ ಗಳು ಓಡಾಡುತ್ತವೆ. ಈ ಭಾಗದಲ್ಲಿ ಅಸಹ್ಯ ವಾಸನೆ ಬರುವುದರಿಂದ ರಸ್ತೆ ಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಅನೈರ್ಮಲ್ಯದ ತಾಣ
ಶಾಲೆ ಮುಂಭಾಗದಲ್ಲಿರುವ ಚರಂಡಿಗೆ ಕೊಳಚೆ ನೀರು ಹರಿದು ಬಂದು ಹೂಳಿನೊಂದಿಗೆ ಕಸಕಡ್ಡಿಯಿಂದ ಚರಂಡಿ ಮುಚ್ಚಿ ಹೋಗಿದೆ. ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಶೇಖರಣೆ ಗೊಳ್ಳುತ್ತಿದೆ. ಶಾಲೆಯ ಆವರಣದೊಳಗೆ ಚರಂಡಿ ನೀರಿನಿಂದ ಹೊರಸೂಸುವ ದುರ್ವಾಸನೆಯಿಂದ ಮಕ್ಕಳು ನರಕ ಯಾತನೆ ಅನುಭವಿಸುವಂತಾಗಿದೆ. ಇದರ ಹತ್ತಿರದಲ್ಲಿರುವ ಪ.ಪೂ ಕಾಲೇಜಿನ ವಿದ್ಯಾರ್ಥಿ ದಿನ ಪೂರ್ತಿ ಸಂಕಟಪಡುವಂತಾಗಿದೆ.

ಕೊಳಚೆ ನೀರು ನಿಂತ ಪರಿಣಾಮ ರೋಗ ಹರಡುವ ಅಪಾಯ ಎದುರಾಗಿದೆ. ಶಾಲಾ ಮಕ್ಕಳು ಚರಂಡಿ ಗಬ್ಬುವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೆ ಪಾಠ ಕೇಳಬೇಕಾದ ಸ್ಥಿತಿಯೂ ಬಂದಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಈ ಹಿಂದೆ ಬಹಳಷ್ಟು ಬಾರಿ ದೂರು ಕೊಟ್ಟಿದ್ದೇವೆ. ಮತ್ತೆ ಪತ್ರ ಮುಖೇನ ದೂರು ನೀಡಲಾಗುವುದು. ಸಂಬಂಧಿಸಿದವರು ಕೂಡಲೇ ಸಮಸ್ಯೆ ಬಗೆಹರಿಸಲು ಮನಮಾಡಬೇಕು ಎಂದು ಮಲ್ಪೆ ಸರಕಾರಿ ಪ. ಪೂ. ಕಾಲೇಜಿನ ಪ್ರಾಂಶುಪಾಲ ಪಿ. ವರ್ಗೀಸ್‌ ಅವರು ಹೇಳಿದ್ದಾರೆ

ನಿಯಮ ಬಾಹಿರದಿಂದ ವಸತಿ ಕಟ್ಟಡಗಳಿಗೆ ಅನುಮತಿ ಸಮಸ್ಯೆ
ಶಾಲೆ ಮುಂದೆ ಚರಂಡಿಯಲ್ಲಿ ನೀರು ನಿಂತು ಗಬ್ಬು ವಾಸನೆ ಎದ್ದಿದೆ. ಕೊಳಚೆ ನೀರು ಸರಾಗವಾಗಿ ಹರಿಯದೇ ಚರಂಡಿಯಲ್ಲಿ ನಿಂತು ರೋಗಕ್ಕೆ ಕಾರಣವಾಗಿದೆ. ಆಸುಪಾಸಿನಲ್ಲಿ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇದು ಸಂಬಂಧ‌ಪಟ್ಟ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಸ್ಯೆ ಹುಟ್ಟಿಕೊಳ್ಳಲು ಕಾರಣವಾಗಿದೆ. ನಿಯಮ ಬಾಹಿರವಾಗಿ ವಸತಿ ಕಟ್ಟಡಗಳಿಗೆ ಅನುಮತಿಯನ್ನು ನೀಡುವುದರಿಂದ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ.
-ಕರುಣಾಕರ ಬಂಗೇರ ಪ್ರಧಾನ ಕಾರ್ಯದರ್ಶಿ, ಹಳೆವಿದ್ಯಾರ್ಥಿ ಸಂಘ, ಫಿಶರೀಸ್‌ ಶಾಲೆ, ಮಲ್ಪೆ

Advertisement

ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
ಇಲ್ಲಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರಿಂದ ಈಗಾಗಲೇ ದೂರು ಬಂದಿರತ್ತದೆ. ನಗರಸಭೆಯ ಆರೋಗ್ಯ ಅಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಕುರಿತು ಪರಿಶೀಲನೆ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು.
– ಪ್ರಭಾಕರ ಪೂಜಾರಿ, ಅಧ್ಯಕ್ಷರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next