Advertisement

Online Fraud; ಬಳ್ಳಾರಿ ಮಹಿಳೆಗೆ 17 ಲಕ್ಷ ರೂ.ವಂಚನೆ

12:15 AM May 20, 2024 | Team Udayavani |

ಬಳ್ಳಾರಿ: ಆನ್ ಲೈನ್ ಮೂವಿ ರೇಟಿಂಗ್ ಮಾರ್ಕೆಟಿಂಗ್ ಹೆಸರಲ್ಲಿ ಮಹಿಳೆಯೊಬ್ಬರಿಗೆ ಆನ್ ಲೈನ್ ನಲ್ಲಿ 17 ಲಕ್ಷ ರೂ ವಂಚನೆಯಾಗಿದ್ದು, ಜಿಲ್ಲೆಯ ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಜಿಂದಾಲ್‌ ವಿ.ವಿ ನಗರ ಟೌನ್‌ಶಿಪ್‌ ನಿವಾಸಿಯಾಗಿರುವ ಮಹಿಳೆಯೇ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಸದ್ಯ ಜಿಂದಾಲ್‌ ಸಂಜೀವಿನಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಆನ್ ಲೈನ್ ಮೂವಿ ರೇಟಿಂಗ್ ಮಾರ್ಕೆಟಿಂಗ್ ಸಂಬಂಧಿಸಿದಂತೆ ಮಹಿಳೆಯ ಮೊಬೈಲ್‌ಗೆ ಟೆಲಿಗ್ರಾಮ್‌ ಸಂದೇಶವೊಂದು ಬಂದಿತ್ತು. ಅದರಲ್ಲಿ ನೀಡಲಾಗಿದ್ದ ಸೂಚನೆಗಳನ್ನೆಲ್ಲ ಪಾಲಿಸಿದ್ದ ಮಹಿಳೆ ಆನ್‌ಲೈನ್‌ ‘ಮೂವಿ ರೇಟಿಂಗ್‌ ಮಾರ್ಕೆಟಿಂಗ್‌’ ಆರಂಭಿಸಿದ್ದರು.

ವಂಚಕರ ಸೂಚನೆಯಂತೆ ‘ಮೂವಿ ರೇಟಿಂಗ್‌‘ ಮಾಡಿದಾಗಲೆಲ್ಲ ಅವರಿಗೆ ಹಣ ಸಂದಾಯವಾಗಿರುವುದಾಗಿ ಮೊಬೈಲ್‌ಗೆ ಸಂದೇಶ ಬಂದಿದೆ. ಆ ಹಣವನ್ನು ಪಡೆಯಬೇಕಿದ್ದರೆ, ಇಂತಿಷ್ಟು ಹಣ ಪಾವತಿಸಬೇಕು ಎಂದು ಹೇಳಲಾಗಿದೆ. ಅದನ್ನು ನಂಬಿದ ಮಹಿಳೆ ಹಣ ಹಾಕಿದ್ದಾರೆ. ಇದೇ ರೀತಿ ಹಲವು ಕಂತುಗಳಲ್ಲಿ ಲಕ್ಷಾಂತರ ಹಣ ಪಾವತಿ ಮಾಡಿದ್ದಾರೆ.

ಇತ್ತೀಚೆಗೆ ‘ಮೂವಿ ರೇಟಿಂಗ್‌‘ ಮಾಡಿದಾಗ ಅವರಿಗೆ 26,42,770 ರೂ. ಹಣ ಸಂದಾಯವಾಗಿರುವುದಾಗಿ ಸಂದೇಶ ಬಂದಿದ್ದು, ಅದನ್ನು ಪಡೆಯಬೇಕಿದ್ದರೆ 12,01,560 ರೂ. ಪಾವತಿಸಬೇಕು ಎಂದು ತಿಳಿಸಲಾಗಿದೆ. ಆದರೆ, ಹಿಂದೆಲ್ಲ ಹಣ ಪಾವತಿಸಿದಾಗ ಹಿಂದಿರುಗಿ ತಮಗೆ ಹಣ ಬಂದಿರಲಿಲ್ಲ. ಇದರಿಂದ ಎಚ್ಚೆತ್ತ ಮಹಿಳೆ ಹಣ ಕೊಡಲು ನಿರಾಕರಿಸಿದ್ದಾರೆ. ಜತೆಗೆ ಹಿಂದೆ ಪಾವತಿಸಿದ ಹಣ ಕೊಡುವಂತೆ ಆಗ್ರಹಿಸಿದ್ದಾರೆ. ಆದರೆ, ವಂಚಕರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

Advertisement

ಮಹಿಳೆಗೆ ತಿಳಿಯದೇ ಲೋನ್‌: ಈ ಮಧ್ಯೆ ಮಹಿಳೆ ನಿವೇಶನ ಖರೀದಿಗೆಂದು 5.50 ರೂ.ಲಕ್ಷವನ್ನು ಬ್ಯಾಂಕ್‌ನಿಂದ ಸಾಲ ಪಡೆದು ಅದನ್ನು ಖಾತೆಯಲ್ಲೇ ಉಳಿಸಿದ್ದರು. ಬಳಿಕ ಚಿನ್ನ ಅಡವಿಟ್ಟ 3.62 ಲಕ್ಷವನ್ನು ಖಾತೆಯಲ್ಲೇ ಇಟ್ಟಿದ್ದರು. ಆನ್‌ಲೈನ್‌ ವಂಚಕರೂ ಈ ಹಣವನ್ನೂ ಕಬಳಿಸಿದ್ದಾರೆ. ಜತೆಗೆ ಮಹಿಳೆ ಹೆಸರಲ್ಲಿ 2.50 ಲಕ್ಷ ರೂ. ಬ್ಯಾಂಕ್‌ ಸಾಲ ಪಡೆದು ಅದನ್ನೂ ಬೇರೆ ಬ್ಯಾಂಕ್‌ಗೆ ವರ್ಗಾಯಿಸಿಕೊಳ್ಳಲಾಗಿದೆ.

ಮತ್ತೊಂದು ಖಾತೆಯಲ್ಲೂ ಮಹಿಳೆ ಹೆಸರಲ್ಲಿ 1.18 ಲಕ್ಷ ರೂ. ಬಾಂಕ್‌ ಸಾಲ ಪಡೆದು ಅದನ್ನೂ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಇದೇ ರೀತಿ ತಮ್ಮ ವಿವಿಧ ಖಾತೆಗಳಿಂದಲೂ, ವಿವಿಧ ದಿನ ಹಣ ಕಬಳಿಸಲಾಗಿದೆ. ತಮ್ಮ ಮೊಬೈಲ್‌ ಅನ್ನು ಹ್ಯಾಕ್‌ ಮಾಡಿ, ಒಟಿಪಿಗಳನ್ನು ಆಟೋ ಫಾರ್ವಡ್‌ ಮಾಡಿಕೊಂಡು ಒಟ್ಟಾರೆ 17,02,365 ರೂ. ಹಣವನ್ನು ತಮಗೆ ವಂಚಿಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತರ ವಿರುದ್ಧ ತೋರಣಗಲ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next