ಹುಬ್ಬಳ್ಳಿ: ಲಾಕ್‌ಡೌನ್ ಕಾರಣದಿಂದಾಗಿ 1ರಿಂದ 12ನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ಸೂಕ್ತವಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ದೇಶದೆಲ್ಲೆಡೆ ಆನ್‌ಲೈನ್ ಮೂಲಕ ಶಿಕ್ಷಣ ಒದಗಿಸಲು ಹಲವು ಶಿಕ್ಷಣ ಸಂಸ್ಥೆಗಳು ಮುಂದಾಗಿವೆ. ಆದರೆ ಈ ವ್ಯವಸ್ಥೆ ಪದವಿ ಹಂತದವರಿಗೆ ಹಾಗೂ ಶಹರ ವಲಯಗಳಲ್ಲಿನ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೂಕ್ತವಾಗಿದೆ.
1ರಿಂದ 12ನೇ ತರಗತಿಯವರಿಗೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿವೆ. ಗ್ರಾಮೀಣ ಭಾಗಗಳಲ್ಲಿ ಎಲ್ಲ ಮಕ್ಕಳಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್ ಸೌಲಭ್ಯ ಇರುವುದಿಲ್ಲ. ಸ್ಮಾರ್ಟ್ ಫೋನ್‌ಗಳಿದ್ದರೂ ಸಮರ್ಪಕವಾಗಿ ನೆಟ್‌ವರ್ಕ್ ಇರುವುದಿಲ್ಲ. ಅನೇಕ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅರ್ಥವಾಗುವುದಿಲ್ಲ. ನಿರಂತರವಾಗಿ ಆನ್‌ಲೈನ್ ಪಾಠ ಮಾಡಿದರೆ ಅದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೊಬೈಲ್ ನೆಟ್‌ವರ್ಕ್ ದೂರದ ಮಾತು,
ಹಲವು ಗ್ರಾಮಗಳಿಗೆ ಸರಿಯಾದ ಬಸ್ ವ್ಯವಸ್ಥೆ ಕೂಡ ಇಲ್ಲ. ಕೆಲ ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರಿರುವುದಿಲ್ಲ. ಅಂಥ ಹಳ್ಳಿಗಳಲ್ಲಿ ಆನ್‌ಲೈನ್ ಶಿಕ್ಷಣ ಫಲಕಾರಿಯಾಗಲಾರದು. ಶಿಕ್ಷಕರ ನೇಮಕಾತಿ ಮಾಡದೇ ಆರ್ಥಿಕ ಉಳಿತಾಯ ಮಾಡಲು ಆನ್‌ಲೈನ್ ಶಿಕ್ಷಣ ನೀಡುವ ಸರಕಾರದ ಉದ್ದೇಶ ಸಾಧುವಲ್ಲ. ಹಳ್ಳಿಗಳಲ್ಲಿ ಬಹಳಷ್ಟು ಬಡ ಜನರು ಜೀವನ ನಿರ್ವಹಣೆಗೆ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ.
ಆದ್ದರಿಂದ ಗ್ರಾಮೀಣ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅಸಾಧ್ಯವಾಗಿದೆ. 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಕೈಬಿಡುವುದು ಸೂಕ್ತ ಎಂದು ತಿಳಿಸಿದ್ದಾರೆ.