7618774529
Advertisement
ಕೊರೊನಾದಿಂದಾಗಿ ಇಂದು ಮಕ್ಕಳು ಆನ್‌ಲೈನ್ ಮೂಲಕ ಮನೆಯಿಂದಲೇ ಕಲಿಯುವಂತಾಗಿದೆ. ಶಾಲೆ ಕಾಲೇಜು ಬಂದ್ ಆಗಿ ಮಕ್ಕಳ ಆಟ, ಓಟ, ತಿರುಗಾಟ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಸಹಪಾಠಿಗಳ ಜತೆ ಪ್ರತೀ ದಿನವೂ ಶಾಲೆಗೆ ಹೋಗಿ ನಕ್ಕು – ನಲಿದು ಶಿಕ್ಷಕರ ಒಡನಾಟದಲ್ಲಿ ಪಾಠ ಕಲಿಯುತ್ತಿದ್ದ ಮಕ್ಕಳಿಗೆ ಇಂದು ಶಾಲೆ ಎಂಬುದು ಕನಸಾಗಿ ಉಳಿದಿದೆ. ಶಾಲೆಯ ಗೌಜು – ಗದ್ದಲವಿಲ್ಲದೆ ಮಕ್ಕಳ ಪಾಡು ಹೇಳ ತೀರದಾಗಿದೆ.
ಒಂದೆಡೆ ಕೊರೊನಾ ಭಯ, ಮತ್ತೂಂದು ಕಡೆ ಮನೆಯಿಂದಲೇ ಕೆಲಸ ಮಾಡುವ ಒತ್ತಡ, ಇನ್ನೊಂದು ಕಡೆ ಮಕ್ಕಳನ್ನು ನಿಭಾಯಿಸುವ ಹೊಣೆ. ಇವೆಲ್ಲವನ್ನು ನಿಭಾಯಿಸುವ ಮಹತ್ತರ ಜವಾಬ್ದಾರಿ ಈಗ ಪೋಷಕರದ್ದು. ಅದರಲ್ಲೂ ಆಟ, ಓಟ, ಶಾಲೆಯ ಚಟುವಟಿಕೆಯಿಂದ ದೂರವಿರುವ ಮಕ್ಕಳ ಬಗ್ಗೆ ಪೋಷಕರು ಹಿಂದೆಂದಿಗಿಂತ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದು ಅವಶ್ಯ. ಪೋಷಕರು ಎಲ್ಲ ವಿಚಾರದಲ್ಲೂ ಮಕ್ಕಳಿಗೆ ತುಂಬಾ ಸಹಕಾರಿಯಾಗಿರಬೇಕು. ತುಂಬಾ ಕಟ್ಟುನಿಟ್ಟಾಗಿ ಮಕ್ಕಳನ್ನು ಅಭ್ಯಾಸ ಮಾಡುವಂತೆ ಒತ್ತಡ ಹೇರಬೇಡಿ. ಇದರಿಂದ ನಿಮ್ಮ ಮಗುವಿಗೆ ಮಾನಸಿಕವಾಗಿ ಹೆಚ್ಚಿನ ಒತ್ತಡ, ಆತಂಕ ಆರಂಭವಾಗುತ್ತದೆ. ಇದು ಓದು ಸಹಿತ ಎಲ್ಲದರ ಮೇಲೂ ಪರಿಣಾಮ ಬೀರಬಹುದು.
Related Articles
ಈಗ ಪೋಷಕರು ಮಕ್ಕಳಿಗೆ ಓದು, ಓದು ಅಂತ ಬರೀ ಓದಿನ ಬಗ್ಗೆಯೇ ಹೆಚ್ಚು ಒತ್ತಡ ಹಾಕುತ್ತಾರೆ. ಆದರೆ ಉತ್ತಮವಾಗಿ ಓದುವುದಕ್ಕೆ ಮಕ್ಕಳು ರಿಲ್ಯಾಕ್ಸ್ ಆಗುವುದು ಅತ್ಯಂತ ಆವಶ್ಯಕ. ಈಗಾಗಲೇ ಮಕ್ಕಳಿಗೆ ಒತ್ತಡ ಜಾಸ್ತಿಯಿದೆ. ಹಾಗಾಗಿ ಆದಷ್ಟು ಮಕ್ಕಳನ್ನು ಖುಷಿಯಿಂದ ಇರುವಂತೆ ನೋಡಿಕೊಳ್ಳಬೇಕು.
Advertisement
ಸಲಹೆಗಳೇನು?ಮಕ್ಕಳು ದಿನವಿಡೀ ಮನೆಯಲ್ಲಿಯೇ ಇರುವುದ ರಿಂದ ಒಂದು ವೇಳಾಪಟ್ಟಿ ತಯಾರಿಸಿ. ಒಂದು ಗಂಟೆ ಆನ್‌ಲೈನ್ ತರಗತಿ, ಮತ್ತೂಂದು ಗಂಟೆ ಪುಸ್ತಕ ಓದುವಿಕೆ, ಮತ್ತೂಂದು ಗಂಟೆ ಕತೆ, ಇನ್ನಿತರ ವ್ಯಕ್ತಿ ಪರಿಚಯ ಪುಸ್ತಕಗಳ ಓದುವಿಕೆ, ಮತ್ತೆ ಒಂದು ಗಂಟೆ ಮೊಬೈಲ್, ಟಿವಿ ನೋಡುವುದು – ಹೀಗಿರಲಿ. ಆಟಕ್ಕೆ ಇಂತಿಷ್ಟು ಸಮಯ ಕೊಡಿ. ಜನರೊಂದಿಗೆ ಹೆಚ್ಚು ಬೆರೆಯುವುದನ್ನು ಕಲಿಸಿ. ಸಂಬಂಧಗಳ ಮಹತ್ವವನ್ನು ತಿಳಿಸಿ. ಮಕ್ಕಳೊಂದಿಗೆ ಮುಕ್ತವಾಗಿ ಎಲ್ಲ ವಿಚಾರಗಳ ಬಗ್ಗೆಯೂ ಮಾತನಾಡಿ. ಜನ ಸಮೂಹ ಕಡಿಮೆ ಇರುವ ಕಡೆ, ಹತ್ತಿರದ ಯಾವುದಾದರೂ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿ. ಮಕ್ಕಳಿಗೆ ಈಗ ದೈಹಿಕ ವ್ಯಾಯಾಮ ಕಡಿಮೆ. ಶಾಲೆ ಇದ್ದಾಗ ಆಟ, ನಡಿಗೆ, ಇನ್ನಿತರ ವ್ಯಾಯಾಮ ಗಳು ಸಿಗುತ್ತಿದ್ದವು. ಅವರು ದೈಹಿಕವಾಗಿ ಸಕ್ರಿಯ ರಾಗಿರು ವಂತೆ ನೋಡಿಕೊಳ್ಳಿ. ಮನೆಯಲ್ಲಿ ಅಂಗಳ, ಗಾರ್ಡನ್ ಇದ್ದರೆ ಒಂದಷ್ಟು ಹೊತ್ತು ಆಟ ಆಡಲು ಬಿಡಿ. ಯೋಗ, ಧ್ಯಾನ, ಭಜನೆ ಮಾಡಲು ಹೇಳಿ ಕೊಡಬಹುದು. ಚೆಸ್, ಕೇರಂ ಮತ್ತಿತರ ಒಳಾಂಗಣ ಆಟಗಳು ಅವರನ್ನು ಬೌದ್ಧಿಕವಾಗಿ ಸುದೃಢ ರನ್ನಾಗಿಸುತ್ತವೆ. ನೃತ್ಯ ಕಲಿಸಬಹುದು. ಮನೆಯನ್ನೇ ಶಾಲೆಯಂತೆ ಕಟ್ಟುನಿಟ್ಟಾಗಿಸಬೇಡಿ. ಶಾಲೆಯ ವ್ಯವಸ್ಥೆಯೇ ಬೇರೆ, ಮನೆಯೇ ಬೇರೆ. ಪ್ರತೀ ದಿನ ಮಕ್ಕಳಿಗೆ ಏನಾದರೊಂದು ಹೊಸತನ್ನು ಕಲಿಸಿ ಕೊಡಿ. ಕೃಷಿಯಿದ್ದರೆ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ತಿಳಿಸಿಕೊಡಿ. ಅವರನ್ನು ಭಾಗಿಯಾಗುವಂತೆ ಮಾಡಿ. ಹೂವಿನ ಗಿಡಗಳಿದ್ದರೆ ಅವುಗಳಿಗೆ ನೀರು ಹಾಕುವುದು, ಬುಡದ ಹುಲ್ಲು ತೆಗೆಯುವುದು ಈ ರೀತಿಯ ಸಣ್ಣಪುಟ್ಟ ಕೆಲಸವನ್ನು ಮಾಡಲು ಹೇಳಿ.
ಮನೆಯ ಸ್ವತ್ಛತೆ, ಕಸ ಗುಡಿಸುವುದು, ನೆಲ ಒರೆಸುವುದು, ಇನ್ನಿತರ ಕೆಲಸಗಳನ್ನು ಮಾಡಲು ಹೇಳಿ ಕೊಡಿ. ಅದಕ್ಕೀಗ ಬಹಳಷ್ಟು ಸಮಯವೂ ಇದೆ. ಸ್ವಲ್ಪ ದೊಡ್ಡವರಾದರೆ ಅಡುಗೆ ಕೆಲಸ ಕೂಡ ಹೇಳಿಕೊಡಬಹುದು. ಈಗ ಆನ್‌ಲೈನ್ ತರಗತಿಯಿಂದಾಗಿ ಹೆಚ್ಚಿನ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿದ್ದು, ಅವುಗಳಿಂದ ಕೆಲವು ಒಳ್ಳೆಯ ವಿಚಾರಗಳು ಸಿಗುತ್ತಿವೆ. ಅವುಗಳನ್ನು ಪೋಷಕರು ಹೇಳಿ ಕೊಡಿ. ಯೂಟ್ಯೂಬ್‌ಗಳಲ್ಲಿ ಗುರುರಾಜ ಕರ್ಜಗಿ ಅವರಂಥವರು ಮಾತನಾಡಿರುವ ಉತ್ತಮ ವೀಡಿಯೋಗಳಿವೆ. ಅವುಗಳನ್ನು ವೀಕ್ಷಿಸಬಹುದು. ಜಾಸ್ತಿ ಕಟ್ಟುನಿಟ್ಟು ಬೇಡ
ಮಕ್ಕಳು ಸೂಕ್ಷ್ಮ ಮನಸ್ಸಿನವ ರಾಗಿರು ತ್ತಾರೆ. ಪೋಷಕರು ಗದರಿ, ಹೆದರಿಸಿ ಯಾವುದೇ ವಿಚಾರದ ಬಗ್ಗೆ ಒತ್ತಡ ಹೇರಬಾರದು. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಎಲ್ಲವನ್ನೂ ಪ್ರೀತಿಯಿಂದ, ಶಾಂತ ರೀತಿಯಲ್ಲಿ ಹೇಳಿಕೊಡಿ. ಮಕ್ಕಳೆದರು ನಿಮ್ಮ ಸಿಟ್ಟನ್ನು ತೋರ್ಪಡಿಸಬೇಡಿ. ಹೊಡೆಯುವುದು ಕೂಡ ತರವಲ್ಲ. ಹೆಚ್ಚು ಕಟ್ಟುನಿಟ್ಟು ಈ ಸಮಯದಲ್ಲಿ ಬೇಡ.
– ಡಾ| ಪಿ.ವಿ. ಭಂಡಾರಿ, ಡಾ| ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು, ಉಡುಪಿ