ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ದಾಸನಾಗಿ ಅಣ್ಣನ ಮನೆಯಲ್ಲಿದ್ದ ಚಿನ್ನ-ಬೆಳ್ಳಿ ಆಭರಣ ಕದ್ದ ಸಹೋದರ ಸಿದ್ದಾಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಸೋಮೇಶ್ವರ ನಗರದ ನಿವಾಸಿ ಮೊಹಮ್ಮದ್ ಅರ್ಜಾನ್ (22) ಬಂಧಿತ. ಆರೋಪಿಯಿಂದ 78.3 ಗ್ರಾಂ ಚಿನ್ನ, 288 ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ.
ಅರ್ಜಾನ್ ತನ್ನ ಸಹೋದರ ಮಿಜಾನ್ ಜತೆಗೆ ವಾಸಿಸುತ್ತಿದ್ದ. ಮಿಜಾನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರೆ, ಆರೋಪಿ ಅರ್ಜಾನ್ ಮೆಡಿಕಲ್ ರೆಪ್ರಸೆಂಟಿವ್ ಆಗಿದ್ದ. ಅರ್ಜಾನ್ ಆನ್ ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ. ಬೆಟ್ಟಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದ. ಬೆಟ್ಟಿಂಗ್ ಚಪಲಕ್ಕೆ ಸಿಲುಕಿದ ಆರೋಪಿಯು ಕಳೆದ ದುಡ್ಡನ್ನು ಬೆಟ್ಟಿಂಗ್ ಮೂಲಕ ಮರಳಿ ಪಡೆಯ ಬೇಕೆಂದುಕೊಂಡಿದ್ದ. ಬೆಟ್ಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಲೂ ಆತನ ಬಳಿ ದುಡ್ಡಿರಲಿಲ್ಲ. ಆಗ ಆರೋಪಿ ಅರ್ಜಾನ್ ತನ್ನ ಸಹೋದರನ ಗಮನಕ್ಕೆ ಬಾರದಂತೆ ಜುಲೈ 4ರಂದು ಮನೆಯಲ್ಲಿದ್ದ 86 ಗ್ರಾಂ ಚಿನ್ನ-ಬೆಳ್ಳಿ ಆಭರಣ, 45 ಸಾವಿರ ರೂ. ನಗದು ತೆಗೆದುಕೊಂಡು ಹೋಗಿದ್ದ. ಕಳ್ಳತನ ಮಾಡಿದ ಚಿನ್ನದ ಪೈಕಿ 18 ಗ್ರಾಂ ಚಿನ್ನ ಸ್ನೇಹಿತನಿಗೆ ಕೊಟ್ಟರೆ, ಉಳಿದ ಚಿನ್ನವನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದ. ಮಿಜಾನ್ ಸಂಜೆ ಕೆಲಸ ಮುಗಿಸಿಕೊಂಡು ಬಂದು ಕಬೋರ್ಡ್ ಲಾಕರ್ ಪರಿಶೀಲಿಸಿದಾಗ ಕಳ್ಳತನವಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಕೂಡಲೇ ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಕೃತ್ಯ ನಡೆದ ಸ್ಥಳಕ್ಕೆ ತರಳಿ ಸುತ್ತ-ಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕಳ್ಳರ ಸುಳಿವು ಸಿಕ್ಕಿರಲಿಲ್ಲ. ಅನುಮಾನದ ಮೇರೆಗೆ ಅರ್ಜಾನ್‌ನನ್ನು ವಿಚಾರಣೆ ನಡೆಸಿದಾಗ ತನಗೆ ಏನು ಗೊತ್ತಿಲ್ಲವೆಂದು ಹೇಳಿದ್ದ. ಪೊಲೀಸರ ವಿಚಾರಣೆ ವೇಳೆ ಗೊಂದಲದ ಹೇಳಿಕೆ ಕೊಟ್ಟಿರುವುದನ್ನು ಗಮನಿಸಿದಾಗ ಆತನೇ ಕಳ್ಳತನ ಮಾಡಿರುವ ಸುಳಿವು ಸಿಕ್ಕಿತ್ತು. ಮತ್ತೆ ಅರ್ಜಾನ್‌ನನ್ನು ವಿಚಾರಣೆ ನಡೆಸಿದಾಗ ಆತ ಕದ್ದಿರುವ ವಿಚಾರ ತಿಳಿಸಿದ್ದ.