ಸಿಂಧನೂರು: ಯಾವುದೇ ವಸ್ತುಗಳನ್ನು ಖರೀದಿಸಬೇಕಾದರೆ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ಕಲ್ಪಿಸಲಾಗಿದ್ದು, ಇನ್ಮುಂದೆ ಗ್ರಾಮ ಪಂಚಾಯಿತಿಗಳು ತಮಗೆ ಅಗತ್ಯ ಬೀಳುವ ವಸ್ತುಗಳನ್ನು ಆನ್‌ಲೈನ್‌ನಲ್ಲೇ ಖರೀದಿಸಬಹುದು. ಸಾರ್ವಜನಿಕ ಪ್ರಕಟಣೆ ಹೊರಡಿಸಿ ಮುಕ್ತ-ನ್ಯಾಯಸಮ್ಮತ ಖರೀದಿ ನಡೆಯಬೇಕೆಂಬ ಹಿನ್ನೆಲೆಯಲ್ಲಿ ರೂಪಿಸಿದ್ದ ಟೆಂಡರ್ ಪಾಲಿಸಿಯಿಂದ ಗ್ರಾಪಂಗಳನ್ನು ಮುಕ್ತಗೊಳಿಸಲಾಗಿದೆ.
ಅಭಿವೃದ್ಧಿ ಕೆಲಸ ಹೊರತುಪಡಿಸಿ ಸೌಲಭ್ಯ ಕಲ್ಪಿಸುವುದಕ್ಕೆ ಅಗತ್ಯವಾಗುವ ಸಾಮಗ್ರಿ ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ನಿರ್ಧಾರದನ್ವಯ ಜೆಮ್ ಪೋರ್ಟಲ್ ನಲ್ಲಿ ನೇರವಾಗಿ ಅಧಿಕಾರಿಗಳು ಬೇಕಾದ ವಸ್ತು ಖರೀದಿಸಬಹುದು.
ಏನಿದು ಹೊಸ ಅವಕಾಶ?: ಬೀದಿ ದೀಪಗಳಿಗೆ ಅಗತ್ಯ ಬೀಳುವ ಬಲ್ಬ್ ಖರೀದಿ, ಶಾಲಾ-ಕಾಲೇಜುಗಳಿಗೆ ಡೆಸ್ಕ್ ವಿತರಣೆ, ಕುಡಿವ ನೀರಿನ ಶುದ್ಧೀಕರಣ ಘಟಕ, ಕಂಪ್ಯೂಟರ್ ಗಳು, ಸೊಳ್ಳೆಗಳ ನಿವಾರಣೆಗೆ ಅಗತ್ಯ ಬೀಳುವ ಫಾಗಿಂಗ್ ಯಂತ್ರ, ಘನತ್ಯಾಜ್ಯ ಘಟಕ ನಿರ್ವಹಣೆ ಸಿಬ್ಬಂದಿಗೆ ಅಗತ್ಯ ಬೀಳುವ ಸುರಕ್ಷತಾ ಸಾಮಗ್ರಿ ಖರೀದಿ, ಆರೋಗ್ಯ ಇಲಾಖೆಗೆ ಸಾಮಗ್ರಿ ಕೊಡಿಸುವುದಕ್ಕೆ ಅನುದಾನ ಮೀಸಲಿಟ್ಟಾಗ ಇದಕ್ಕಾಗಿ ಗ್ರಾಪಂಗಳು ಟೆಂಡರ್ ಕರೆಯಬೇಕಾಗುವುದಿಲ್ಲ. ಇತರ ಯಾವುದೇ ಜನೋಪಯೋಗಿ ವಸ್ತುಗಳನ್ನು ನೀಡಬೇಕಾದರೂ ಟೆಂಡರ್, ಕೊಟೇಶನ್ ಪದ್ಧತಿ ಅನುಸರಿಸಬೇಕಾಗಿಲ್ಲ.
ಕಿರಿಕಿರಿಗಳಿಂದ ಮುಕ್ತ: 10 ಸಾವಿರ ರೂ. ನಿಂದ 5 ಲಕ್ಷ ರೂ.ವರೆಗೂ ಅಗತ್ಯ ಪೀಠೊಪಕರಣ ಖರೀದಿ ಸಂದರ್ಭ ಕೆಟಿಪಿಪಿ ನಿಯಮ ಅನುಸರಿಸಿ, ಪ್ರಕ್ರಿಯೆ ನಡೆಸಬೇಕಿತ್ತು. ಈ ಸಂದರ್ಭದಲ್ಲಿ ನಿಯಮಗಳು ಉಲ್ಲಂಘನೆಯಾದಾಗ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದು ದೂರು ಸಲ್ಲಿಸಲಾಗುತ್ತಿತ್ತು. ಟೆಂಡರ್‌ನಲ್ಲಿ ಸ್ಪರ್ಧೆ ಏರ್ಪಟ್ಟು ರಾಜಕೀಯ ಒತ್ತಡಗಳಿಗೂ ಬಲಿಯಾಗುತ್ತಿದ್ದರು. ಸದ್ಯದ ಜೆಮ್ ಪೋರ್ಟಲ್‌ನಲ್ಲಿ ರಾಜ್ಯ ಸರ್ಕಾರ ನೇರವಾಗಿ ಖರೀದಿಗೆ ಸಮ್ಮತಿ ನೀಡಿದ್ದರಿಂದ ಇಲ್ಲಿ ಕೆಟಿಪಿಪಿ ನಿಯಮವೇ ಅನ್ವಯಾಗುವುದಿಲ್ಲ. ಗ್ರಾಪಂಗಳು ಆನ್ ಲೈನ್‌ನಲ್ಲಿ ಮಾರಾಟಗಾರರು ನಮೂದಿಸಿದ ದರ ಪರಿಶೀಲಿಸಿ, ಅತಿ ಕಡಿಮೆ ದರ ಇರುವುದನ್ನು ಗಮನಿಸಿ ಖರೀದಿ ನಡೆಸಬಹುದು. ಗಮನಾರ್ಹ ಎಂದರೆ ಇಲ್ಲಿ ಯಾವುದಕ್ಕೂ ಕಾಯಬೇಕಿಲ್ಲ. ವಿಳಂಬಕ್ಕೂ ಅವಕಾಶವಿರುವುದಿಲ್ಲ. ಅಂಗನವಾಡಿಗಳಿಗೆ ಟಿವಿ, ಶಾಲೆಗಳಿಗೆ ಕಂಪ್ಯೂಟರ್ ಸೇರಿದಂತೆ ಇತರ ಸಾಮಗ್ರಿ ಕೊಡಲು ಬಯಸಿದ್ದರೆ ತ್ವರಿತವಾಗಿಯೇ ಬೇಡಿಕೆ ಈಡೇರಿಸಬಹುದು ಸಿಬ್ಬಂದಿಗೆ ತರಬೇತಿ ಜೆಮ್ ಪೋರ್ಟಲ್ ಬಳಕೆಗೆ ಯೂಸರ್ ನೇಮ್, ಪಾಸ್‌ವರ್ಡ್ ಹಂಚಿಕೆ ಮಾಡಲಾಗಿದೆ.
ಪಿಡಿಒಗಳು ಖರೀದಿದಾರರಾದರೆ, ಪಾವತಿ ಪ್ರಾಧಿ ಕಾರವನ್ನಾಗಿ ತಾಪಂ ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರನ್ನು ನೇಮಿಸಲಾಗಿದೆ. ಮೇಲ್ ಐಡಿಗಳನ್ನು ಎನ್‌ಐಸಿ ರಚಿಸಲಿದ್ದು, ಇದರಲ್ಲಿ ಜಿಪಂ ಸಿಇಒಗಳಿಗೂ ಲಾಗಿನ್‌ಗೆ ಅವಕಾಶ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಗ್ರಾಪಂ ಪಿಡಿಒಗಳಿಗೆ ತರಬೇತಿ ನೀಡಲಾಗಿದ್ದು, ಜೆಮ್ ಪೋರ್ಟಲ್ ಬಳಕೆ ಕಡ್ಡಾಯಗೊಳಿಸಿ ಆರ್ ಡಿಪಿಆರ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಂಚಾಯ್ತಿಗೆ ಬೇಕಾಗುವ ವಸ್ತುಗಳನ್ನು ಜೆಮ್ ಪೋರ್ಟಲ್‌ನಲ್ಲಿ ಖರೀದಿಸಲು ಆದೇಶವಾಗಿದೆ. ಈ ಬಗ್ಗೆ ತರಬೇತಿ ನೀಡಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ
-ಶಿವಪ್ಪ, ಪಿಡಿಒ, ಆರ್‌ಎಚ್1 ಗ್ರಾಪಂ, ಸಿಂಧನೂರು
-ಯಮನಪ್ಪ ಪವಾರ