ಲೋಕಾಪುರ: ಕಳೆದ ಮೂರು ವರ್ಷಗಳಿಂದ ಪ್ರವಾಹ, ಅತಿವೃಷ್ಟಿ, ಕೋವಿಡ್‌ಗೆ ಸಿಲುಕಿ ರೈತರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಪ್ರಸಕ್ತ ವರ್ಷ ಈರುಳ್ಳಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ಕೈಗೆ ಬರುವ ಮುಂಚೆ ಮುಗುಚಿ ಬೀಳುತ್ತಿದ್ದು, ರೈತನನ್ನು ಮಕಾಡೆ ಮಲಗಿಸಿದೆ.
ಲೋಕಾಪುರ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರೈತರು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈರುಳ್ಳಿ ಬಿತ್ತನೆ ಮಾಡಿ ಬೆಳೆಗಾಗಿ ಸಾಕಷ್ಟು ಶ್ರಮ ವಹಿಸಿ ಬೆಳೆ ಕಾಳಜಿ ವಹಿಸುತ್ತಿದ್ದಾರೆ. ಲೋಕಾಪುರ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 7500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಬಿದ್ದ ಭಾರಿ ಮಳೆಗೆ ಈರುಳ್ಳಿ ಬೆಳೆ ಸಂಪೂರ್ಣ ನೆಲ ಕಚ್ಚಿ ಹಳದಿ ರೋಗ ಮತ್ತು ಟ್ವಿಸ್ಟಿಂಗ್ ರೋಗಕ್ಕೆ ತುತ್ತಾಗಿತ್ತು. ಅಂದಾಜು ಸುಮಾರು 4000 ಸಾವಿರ ಹೆಕ್ಟೇರ್ ಪ್ರದೇಶ ಈರುಳ್ಳಿ ಮಳೆಗೆ ಹಾನಿಯಾಗಿದೆ.
ಬಹುತೇಕ ಈರುಳ್ಳಿಗೆ ಹಳದಿ ರೋಗ ಕಾಡುತ್ತಿದೆ. ಕಳೆದ ಬಾರಿ ಪ್ರವಾಹಕ್ಕೆ ಈರುಳ್ಳಿ ಬೆಳೆ ಹಾನಿಯಾಗಿತ್ತು. ಈ ಬಾರಿಯೂ ಈರುಳ್ಳಿ ಹೊಲದಲ್ಲಿಯೇ ರೋಗಕ್ಕೆ ತುತ್ತಾಗಿ ಹಳದಿ ಬಣ್ಣಕ್ಕೆ ತಿರುಗಿ ಒಣಗಿ ಕೊಳೆತು ಹೋಗುತ್ತಿದೆ. ಬೆಳೆಗೆ ಔಷಧ ಸಿಂಪಡಣೆ ಮಾಡಿದರೂ ಹತೋಟಿಗೆ ಬಾರದೆ ರೈತ ಕಂಗಾಲಾಗಿದ್ದಾನೆ. ಚೌಡಾಪುರ ಗ್ರಾಮದ ರೈತರಾದ ಶೆಟ್ಟೆಪ್ಪ ಮಾಳಿ, ಹೊಳೆಪ್ಪ ಮಾಳಿ, ಹಣಮಂತ ಹೂಗಾರ, ಲೋಕಣ್ಣ ಬಾಳಿಕಾಯಿ ಬೆಳೆ ಪರಿಹಾರ ಶೀಘ್ರ ನೀಡಬೇಕೆಂದು ಒತ್ತಾಯಿಸಿದ್ದಾರೆ.
1 ಎಕರೆ ಈರುಳ್ಳಿ ಬೆಳೆಯಲು ಅಂದಾಜು 40 ರಿಂದ 50 ಸಾವಿರ ಖರ್ಚಾಗುತ್ತದೆ. ಮಳೆಗೆ ಸಂಪೂರ್ಣ ಈರುಳ್ಳಿ ಬೆಳೆ ಹಾಳಾಗಿದ್ದರಿಂದ ಸರ್ಕಾರ ತುರ್ತು ಪರಿಹಾರ ನೀಡಿ, ರೈತರನ್ನು ಸಂಕಷ್ಟದಿಂದ ಪಾರಾಗುವಂತೆ ಮಾಡಬೇಕು.
ರಮೇಶ ಯರಗಟ್ಟಿ,
ರೈತ ಮುಖಂಡ
ಲೋಕಾಪುರ ಹೋಬಳಿಯಲ್ಲಿ ಭಾರಿ ಮಳೆಯಾಗಿದ್ದರಿಂದ ಈರುಳ್ಳಿ ಬೆಳೆಗೆ ಹಳದಿ ರೋಗ ಮತ್ತು ಟೆಸ್ಟಿಂಗ್ ರೋಗ ತುತ್ತಾಗಿದೆ. ಈರುಳ್ಳಿ ಬೆಳೆ ಹಾಳಾಗಿದ್ದು ತಹಶೀಲ್ದಾರ್ ನೇತೃತ್ವದಲ್ಲಿ ಜಂಟಿ ಸರ್ವೇ ಸಮಿತಿ ನೇಮಿಸಿದ್ದಾರೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮೀಕ್ಷೆ ಕೈಗೊಂಡು ಸರಕಾರಕ್ಕೆ ವರದಿ ನೀಡಲಾಗುವುದು.
ಮಹೇಶ ದಂಡನ್ನವರ
ಹಿರಿಯ ಸಹಾಯಕ ತೋಟಗಾರಿಕೆ
ನಿರ್ದೇಶಕ, ಮುಧೋಳ