Advertisement

ಯೋಗ್ಯ ಬೆಲೆ ಸಿಗದೆ ಈರುಳ್ಳಿ ಬೆಳೆಗಾರರು ಕಂಗಾಲು

03:52 PM Apr 28, 2022 | Team Udayavani |

ಹೊಸಪೇಟೆ: ಕಳೆದ ಭಾರಿ ಮಳೆ ಪರಿಣಾಮದಿಂದ ಸಂಕಷ್ಟಕ್ಕೀಡಾಗಿದ್ದ ವಿಜಯನಗರ ಜಿಲ್ಲೆಯ ಈರುಳ್ಳಿ ಬೆಳೆಗಾರರು ಇದೀಗ ಹಿಂಗಾರು ಹಂಗಾಮಿನಲ್ಲಿಯೂ ಬೆಳೆದ ಈರುಳ್ಳಿಗೆ ಯೋಗ್ಯ ಬೆಲೆ ಸಿಗದೇ ಕೈಸುಟ್ಟುಕೊಂಡಿದ್ದಾರೆ.

Advertisement

ಹೌದು! ಈರುಳ್ಳಿ ಬೆಳೆದು, ಕೈತುಂಬ ಹಣ ಸಿಗುವ ಆಸೆ ಕಣ್ಣಿನಿಂದ ನೋಡುತ್ತಿದ್ದ ರೈತರಿಗೆ ಕಳೆದ ಬಾರಿ ಸುರಿದ ಮಳೆಗೆ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಕೊನೆಯ ಪಕ್ಷ ಹಿಂಗಾರು ಹಂಗಾಮಿನಲ್ಲಿ ಒಂದಷ್ಟು ಹಣ ನೋಡಬಹುದು ಎಂಬ ರೈತರ ನಿರೀಕ್ಷೆ ಇದೀಗ ಹುಸಿಯಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಯೋಗ್ಯ ಬೆಲೆ ಸಿಗದಂತಾಗಿ ರೈತರ ಕಣ್ಣಲ್ಲಿ ನೀರು ತರಿಸಿದೆ.

ಒಂದು ಕ್ವಿಂಟಲ್‌ ಈರುಳ್ಳಿಗೆ ಸುಮಾರು 2 ಸಾವಿರ ರೂ. ಖರ್ಚು ಮಾಡಿದ ರೈತರ ಮಾರುಕಟ್ಟೆಯಲ್ಲಿ ಕೇವಲ ಒಂದು ಕ್ವಿಂಟಲ್‌ 500-600 ರೂ ಕೇಳುತ್ತಿದ್ದಾರೆ. ಇದರಿಂದ 1300ರಿಂದ 1400 ರೂಗಳಷ್ಟು ದರ ರೈತರ ಜೇಬಿಗೆ ಕತ್ತರಿ ಬೀಳಲಿದೆ. ಇದರಿಂದ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದು ಸರ್ಕಾರದ ನೆರವಿಗಾಗಿ ಹಾದಿ ಕಾಯುತ್ತಿದ್ದಾರೆ.

ಸಾಲದ ಸುಳಿಯಲ್ಲಿ ರೈತ

ಒಂದು ಎಕರೆಗೆ ಜಮೀನಿನಲ್ಲಿ ಈರುಳ್ಳಿ ಬೆಳೆಯ ಬೇಕು ಎಂದರೆ ಉಳ್ಳುವವರಿಂದ ಹಿಡಿದು ಬೆಳೆ ತಗೆದು, ಮಾರುಕಟ್ಟೆಗೆ ಮಾರುವವರೆಗೆ ಸಾಲ ಸೂಲ ಮಾಡಿ ಒಂದು ಎಕರೆಗೆ ಅಂದಾಜು 50ರಿಂದ 60 ಸಾವಿರ ರೂ. ರೈತರು ಖರ್ಚು ಭರಿಸಬೇಕು. ಆದರೆ ಬೆಲೆ ಕುಸಿತದಿಂದ ಒಂದು ಎರಕೆಗೆ 20ರಿಂದ 30 ಸಾವಿರ ರೂ. ನಷ್ಟ ಅನುಭವಿಸುವಂತಾಗಿದೆ. ಇತ್ತ ಮಾಡಿದ ಸಾಲ ತಿರಿಸಲಾಗದೇ ಪರದಾಡಿ ಸಾಲದ ಸುಳಿಯಲ್ಲಿ ರೈತರು ಸಿಲುಕುವಂತಾಗಿದೆ.

Advertisement

ಈ ಬಾರಿ ಉತ್ತಮ ಇಳುವರಿ

ಕಳೆದ ಬಾರಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ಕೂಡ ಉತ್ತಮ ಇಳುವರಿ ಬಂದಿದೆ. ಒಂದು ಎಕರೆಗೆ 70 ರಿಂದ 160 ಕ್ವಿಂಟಲ್‌ವರೆಗೆ ಈರುಳ್ಳಿ ಬೆಲೆ ಬಂದಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಈರುಳಿ ಬೆಲೆ ಕುಸಿದಿದೆ. ಇಳುವರಿ ಹೆಚ್ಚಾದರೂ ಬೆಲೆ ಕುಸಿತದಿಂದ ಈರುಳಿ ಬೆಲೆ ಪಾತಳಾಕ್ಕೆ ಇಳಿದಿದೆ. ಇದರಿಂದ ಕೆಲವರು ಅನಿವಾರ್ಯವಾಗಿ ಕೂಲಿಗಾಗಿ ನಷ್ಟದಲ್ಲಿ ಮಾರಾಟ ಮಾಡಿದರೆ, ಇನ್ನೂ ಕೆಲ ರೈತರು ಹೊಲದಲ್ಲೆ ಈರುಳ್ಳಿ ಬಿಡುತ್ತಿದ್ದಾರೆ.

ಬೆಂಬಲ ಬೆಲೆಗೆ ಒತ್ತಾಯ

ಕಳೆದ ಎರಡು ತಿಂಗಳಿಂದ ಈರುಳ್ಳಿ ಬೆಲೆ ಪಾತಾಳಕ್ಕೆ ಇಳಿದ್ದಿದ್ದು, ರೈತರು ಕಂಗಾಲಾಗಿದ್ದಾರೆ. ರೈತರಿಗೆ ಸಹಕಾರ ನೀಡುವಂತೆ ಈರುಳ್ಳಿ ಬೆಳೆಗಾರ ಸಂಘದಿಂದ ಬೆಂಗಳೂರಿಗೆ ಬಿಡು ಬಿಟ್ಟಿದ್ದಾರೆ. ಈರುಳ್ಳಿಗೆ ಬೆಂಬಲ ಬೆಲೆ ನೀಡಿದರೆ ರೈತ ಸ್ವಲ್ಪ ಉಸಿರಾಡಬಹುದು. ಇಲ್ಲವೆಂದರೆ ಅನಾಹುತಗಳಿಗೆ ಮುಂದಾಗಬಹುದು. ಆದ್ದರಿಂದ ಸರಕಾರ ಕೂಡಲೇ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈರುಳ್ಳಿ ಬೆಳೆಗಾರರಿಗೆ ಹಾನಿಯಾದ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಮಾತ್ರ ಯಾವುದೇ ಸ್ಪಂದನೆ ಮಾಡಿಲ್ಲ. ಜನಪ್ರತಿನಿಧಿ ಗಳು ತಮ್ಮ ಸಂಬಳ ಹೆಚ್ಚಳ ಮಾಡಿಕೊಳ್ಳುತ್ತಾರೆ ಹೊರತು ಅನ್ನದಾತನ ಸಂಕಷ್ಟಕ್ಕೆ ನೆರವಾಗುತ್ತಿಲ್ಲ. ಜಾಣ ಕುರಡುತನ ಪ್ರದರ್ಶನ ಮಾಡುತ್ತಿದ್ದಾರೆ. -ಎನ್‌.ಎಂ.ಸಿದ್ದೇಶ್‌ ಉತ್ತಂಗಿ, ರಾಜ್ಯಾಧ್ಯಕ್ಷರು, ಈರುಳ್ಳಿ ಬೆಳೆಗಾರರ ಸಂಘ

ಇತ್ತೀಚಿಗಷ್ಟೆ ಬೆಂಗಳೂರಿಗೆ ಈರುಳ್ಳಿ ಮಾರಲು ಹೋಗಿದ್ದೆ. ಆದರೆ ಅಲ್ಲಿ 300 ರೂಪಾಯಿಗೆ ಒಂದು ಚೀಲ ಈರುಳ್ಳಿ ಮಾರಿದೆ. ಆದರೆ ದಾರಿ ಖರ್ಚು ಕೂಡ ಬರಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆ ಕಡೆ ಬಂದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು. -ಈರುಳ್ಳಿ ಬೆಳೆಗಾರ, ಹರಪನಹಳ್ಳಿ

ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next