ಗುವಾಹಟಿ: ಅಸ್ಸಾಂನ ಬಂಡುಕೋರ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ -ಇಂಡಿಪೆಂಡೆಂಟ್(ಉಲ್ಫಾ-ಐ) ಸಂಘಟನೆಯ ಮುಖ್ಯಸ್ಥ ಪರೇಶ್ ಬರುವಾ ಏಕಪಕ್ಷೀಯ ಕದನ ವಿರಾಮ ಘೋಷಿಸಿದ ಒಂದು ವಾರದ ನಂತರ ಕಳೆದ ತಿಂಗಳು ಅಪಹರಿಸಲ್ಪಟ್ಟ ಒಎನ್ ಜಿಸಿ ಉದ್ಯೋಗಿ ರಿತುಲ್ ಸೈಕಿಯಾ ಅವರನ್ನು ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯನವರೇ ಪದೇ ಪದೇ ಚಾಮರಾಜಪೇಟೆಗೆ ಭೇಟಿ ನೀಡುವ ಉದ್ದೇಶವೇನು? ಬಿಜೆಪಿ
ಅಪ್ಪರ್ ಅಸ್ಸಾಂನ ಜೋಹ್ರಾತ್ ಜಿಲ್ಲೆಯ ಟಿಟಾಬೋರ್ ನಿವಾಸಿ ಸೈಕಿಯಾ ಸಿವ್ ಸಾಗರ್ ನ ಒಎನ್ ಜಿಸಿ ಪ್ರದೇಶದಿಂದ ಸೈಕಿಯಾ ಹಾಗೂ ಇಬ್ಬರು ಉದ್ಯೋಗಿಗಳನ್ನು ಏಪ್ರಿಲ್ ನಲ್ಲಿ ಯುಎಲ್ ಎಫ್ ಎ ಬಂಡುಕೋರರು ಅಪಹರಿಸಿದ್ದರು. ಕೆಲವು ದಿನಗಳ ನಂತರ ಭಾರತೀಯ ಸೇನೆ ಮತ್ತು ನಾಗಾಲ್ಯಾಂಡ್ ಪೊಲೀಸರು ಮೋನ್ ಜಿಲ್ಲೆಯ ಗ್ರಾಮದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಒಎನ್ ಜಿಸಿಯ ಸಿಬಂದಿಗಳಾದ ಮೋಹಿನಿ ಮೋಹನ್ ಗೋಗೊಯಿ ಮತ್ತು ಅಲಾಕೇಶ್ ಸೈಕಿಯಾ ಅವರನ್ನು ರಕ್ಷಿಸಿತ್ತು.
ಕಳೆದ ಒಂದು ತಿಂಗಳನಿಂದ ಯುಎಲ್ ಎಫ್ ಎ ಬಂಡುಕೋರರ ವಶದಲ್ಲಿದ್ದ ಸೈಕಿಯಾ ಅವರನ್ನು ಶನಿವಾರ(ಮೇ 22) ನಾಗಲ್ಯಾಂಡ್ ನಲ್ಲಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬಿಡುಗಡೆಗೊಳಿಸಿರುವುದಾಗಿ ವರದಿ ತಿಳಿಸಿದೆ. ಇಂದು ಬೆಳಗ್ಗೆ ನಾಗಲ್ಯಾಂಡ್ ನ ಮೋನ್ ಜಿಲ್ಲೆಯ ಅಸ್ಸಾಂ ರೈಫಲ್ಸ್ ಪೋಸ್ಟ್ ಗೆ ಸೈಕಿಯಾ ಬಂದು ತಲುಪಿರುವುದಾಗಿ ವರದಿ ಹೇಳಿದೆ.
ಉತ್ತಮ ವಿಶ್ವಾಸದ ಹಿನ್ನೆಲೆಯಲ್ಲಿ ಒಎನ್ ಜಿಸಿ ಸಿಬಂದಿ ಸೈಕಿಯಾ ಅವರನ್ನು ಒಂದು ಅಥವಾ ಎರಡು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಬರುವಾ ಗುರುವಾರ ಘೋಷಿಸಿರುವುದಾಗಿ ವರದಿ ತಿಳಿಸಿತ್ತು.