Advertisement

ಗೊಂದಲದ ಹಂತ ದಾಟಿ ಮುನ್ನಡೆದಿದೆ ಒಂದು ದೇಶ-ಒಂದು ತೆರಿಗೆ

12:30 AM Jun 30, 2018 | Team Udayavani |

“ಒಂದು ದೇಶ; ಒಂದು ತೆರಿಗೆ’ ಎಂಬ ಪ್ರಧಾನಿ ಮೋದಿಯವರ ಕನಸು, ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಜೂ.30ರ ಮಧ್ಯರಾತ್ರಿಗೆ ಸರಿಯಾಗಿ ಒಂದು ವರ್ಷ. ಹಲವಾರು ವಿರೋಧ-ಆಕ್ಷೇಪಗಳ ನಡುವೆ ಎಲ್ಲಾ ರಾಜ್ಯ ಸರ್ಕಾರಗಳ ಜತೆಗೆ ಸಮನ್ವಯತೆ ಸಾಧಿಸಿ ಅದನ್ನು ಜಾರಿ ಮಾಡಿದ್ದು ಹೆಗ್ಗಳಿಕೆಯೇ. ಆರಂಭದಲ್ಲಿ ಒಂದಿಷ್ಟು ಗೊಂದಲಗಳು ಉಂಟಾಗಿದ್ದರೂ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ.  ಇದರ ಹೊರತಾಗಿಯೂ ಹೊಸ ವ್ಯವಸ್ಥೆಯಲ್ಲಿ ಬಗೆಹರಿಯಬೇಕಾದ ವಿಚಾರಗಳು ಇವೆ. 

Advertisement

ಜಿಎಸ್‌ಟಿ ಜಾರಿ ಮೂಲಕ ಸಾಧಿಸಿದ್ದೇನು?
ಏರದ ಹಣದುಬ್ಬರ: ಜಿಎಸ್‌ಟಿ ಜಾರಿಯಿಂದ ಹಣದುಬ್ಬರ ಏರಿಕೆಯಾಗಲಿದೆ ಎಂದು ವಿಶ್ಲೇಷಿಸಲಾಗಿತ್ತು. ಇತರ ದೇಶಗಳಲ್ಲಿ ಅದು ಪ್ರತಿಕೂಲ ಪರಿಣಾಮ ಬೀರಿದ್ದರೂ, ಭಾರತದಲ್ಲಿ ಅಂಥದ್ದೇನೂ ಆಗಿರಲಿಲ್ಲ. ಇತ್ತೀಚೆಗೆ ಗ್ರಾಹಕ ಹಣದುಬ್ಬರ ಪ್ರಮಾಣದಲ್ಲಿ ಏರಿದ್ದು, ತೈಲ ಮತ್ತು ಆಹಾರದ ಬೆಲೆಯಲ್ಲಿ ಹೆಚ್ಚಳವಾದ ಕಾರಣ. ಹಳೆ ವ್ಯವಸ್ಥೆಯಲ್ಲಿದ್ದಂತೆಯೇ ಜಿಎಸ್‌ಟಿಯಲ್ಲಿ ಲೆವಿ ಜಾರಿ ಮಾಡಲಾಗಿತ್ತು. ಇದರ ಜತೆಗೆ ಹೊಸ ವ್ಯವಸ್ಥೆ ಲಾಭಕೋರತನ ತಡೆ ಪ್ರಾಧಿಕಾರ  ಅಸ್ತಿತ್ವಕ್ಕೆ ಬಂತು. ಆದರೆ ಸಂಪೂರ್ಣವಾಗಿ ಈ ವ್ಯವಸ್ಥೆ ಅಸ್ತಿತ್ವಕ್ಕೆ ಬಾರದೇ ಇದ್ದರೂ, ಸುಗಮವಾಗಿ ವ್ಯವಸ್ಥೆ ಜಾರಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

2ನೇ ಹಂತದಲ್ಲಿ ಇ ವೇ ಬಿಲ್‌: ಮೊದಲ ಹಂತದಲ್ಲಿ ಇ ವೇ ಬಿಲ್‌ ವ್ಯವಸ್ಥೆ ಜಾರಿಯಾಗಿದ್ದರೂ, ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿರಲಿಲ್ಲ. ಹೀಗಾಗಿ ಕೇಂದ್ರ ಅದನ್ನು ಪುನಾರಚಿಸಿ ಜಾರಿ ದಿನಾಂಕ ಮುಂದೂಡಿತ್ತು. ನಂತರ ಅದನ್ನು ದೇಶವ್ಯಾಪಿಯಾಗಿ ಜಾರಿಗೊಳಿಸಲಾಯಿತು. ಅದನ್ನು ಜಾರಿಗೊಳಿಸಿದ ಬಳಿಕ ತೆರಿಗೆ ವಂಚನೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ.

ಚೆಕ್‌ಪೋಸ್ಟ್‌ಗಳಿಲ್ಲ: ವಿವಿಧ ಅಂತಾರಾಜ್ಯ ಗಡಿ ಪ್ರದೇಶಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗೆಂದು ಟ್ರಕ್‌ಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಜಿಎಸ್‌ಟಿ ಬಂದ ಮೇಲೆ ಚೆಕ್‌ಪೋಸ್ಟ್‌ ವ್ಯವಸ್ಥೆ ರದ್ದಾಗಿದ್ದು, ಟ್ರಕ್‌ಗಳ ಈ ಸಾಲು ಮಾಯವಾಯಿತು. ಚೆಕ್‌ಪೋಸ್ಟ್‌ನಿಂದಾಗಿ ದೇಶದ ವಿವಿಧ ಭಾಗಗಳಿಗೆ ಸರಕುಗಳನ್ನು ವಿತರಿಸುವಲ್ಲಿ ವಿಳಂಬವಾಗುತ್ತಿತ್ತು. ಇದರಿಂದಾಗಿ ವ್ಯಾಪಾರ ವಹಿವಾಟಿಗೆ ನಷ್ಟ ಉಂಟಾಗುತ್ತಿತ್ತು. ಇದು ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಇದೀಗ ತಪ್ಪಿದೆ.

ದೇಶಕ್ಕೊಂದೇ ತೆರಿಗೆ: ಕಾಶ್ಮೀರದಲ್ಲಿ ಗ್ರಾಹಕ ಯಾವ ರೀತಿಯಲ್ಲಿ ಜಿಎಸ್‌ಟಿ ಪಾವತಿ ಮಾಡುತ್ತಾನೋ ಅದನ್ನೇ ಕನ್ಯಾಕುಮಾರಿಯಲ್ಲಿರುವ ಗ್ರಾಹಕ ನೀಡುತ್ತಿದ್ದಾನೆ. ಜಿಎಸ್‌ಟಿ ಜಾರಿಯಿಂದಾಗಿ ವ್ಯಾಪಾರ ವಹಿವಾಟು, ವಸ್ತುಗಳ ಉತ್ಪಾದನೆ, ವಿತರಣೆ, ಸಂಗ್ರಹಣಾ ವ್ಯವಸ್ಥೆ ಹಿಂದಿಗಿಂತ ಉತ್ತಮವಾಗಿದೆ. 

Advertisement

ವಿಸ್ತರಣೆಯಾಗಲಿದೆ ತೆರಿಗೆ ವ್ಯವಸ್ಥೆ: ಹೊಸ ವ್ಯವಸ್ಥೆ ಜಾರಿಯಾಗಿರುವುದರಿಂದ ತೆರಿಗೆ ವ್ಯವಸ್ಥೆಯ ವ್ಯಾಪ್ತಿ ವಿಸ್ತರಣೆಯಾಗಲಿದೆ. ಜತೆಗೆ ಎಲ್ಲವೂ ಕೂಡ ಅಧಿಕೃತವಾಗಿಯೇ ಇರಲಿದೆ. ಇನ್‌ವಾಯ್ಸ ಮ್ಯಾಚಿಂಗ್‌ ಮತ್ತು ಇನ್‌ಪುಟ್‌ ಕ್ರೆಡಿಟ್‌ (ಹುಟ್ಟುವಳಿ ತೆರಿಗೆ)ನಲ್ಲಿ ಡಿಜಿಟಲ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಿದೆ.  

ತೆರಿಗೆ ಸಮ್ಮಿಳನ: ದೇಶದ ಅರ್ಥ ವ್ಯವಸ್ಥೆ ಜಾಗತಿಕ ತೆರಿಗೆ ಪದ್ಧತಿ ಜತೆಗೆ ಸ್ಪರ್ಧಿಸುವಂತಾಗಲು ಹೆಚ್ಚಾ ಕಡಿಮೆ ಎಲ್ಲಾ ತೆರಿಗೆಗಳನ್ನು ವಿಲೀನಗೊಳಿಸಲಾಗಿದೆ. ಕೇಂದ್ರೀಯ ತೆರಿಗೆಗಳು ಮತ್ತು ರಾಜ್ಯ ಸರ್ಕಾರಗಳ ತೆರಿಗೆಗಳು ಏಕೀಕೃತಗೊಂಡಿವೆ. ತೆರಿಗೆ ಪದ್ಧತಿ ಸುಗಮವಾಗಿ ಜಾರಿಯಾಗುತ್ತಿದೆ. 

ಜಾರಿ ವೇಳೆಯ ತಪ್ಪುಗಳೇನು?
ಆರಂಭಿಕ ತೊಡಕು:
ಹೊಸ ತೆರಿಗೆ ವ್ಯವಸ್ಥೆ ಸಂಪೂರ್ಣವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತವಾದ್ದರಿಂದ ಅದನ್ನು ಅನುಸರಿಸಿ ಜಾರಿಗೆ ತರುವಲ್ಲಿ ವಿಳಂಬವಾಗಿದೆ. ಆರಂಭದಲ್ಲಿ ಜಾರಿಯಾಗಿದ್ದ ತೆರಿಗೆ ಪಾವತಿ ಮಾಡುವ ವ್ಯವಸ್ಥೆಯನ್ನು ಉದ್ದಿಮೆ ವಲಯ ತಿರಸ್ಕರಿಸಿತ್ತು. ಅಗತ್ಯಕ್ಕಿಂತ ಹೆಚ್ಚಿನ ಪ್ರಕ್ರಿಯೆಗಳು ಇದ್ದಿದ್ದರಿಂದ ಸರಳವಾದ ಹೊಸ ವ್ಯವಸ್ಥೆ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗಿದೆ. ಅದೂ ಶೀಘ್ರದಲ್ಲಿಯೇ ನಿವಾರಣೆಯಾಗಲಿದೆ.

ನೋಂದಣಿಯ ಕಷ್ಟ: ಹಲವು ಹಂತದಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ತೊಡಕಾಗಿ ಪರಿಣಮಿಸಿದೆ. ಇದು ಕೈಗಾರಿಕೆ ಮತ್ತು ಉದ್ದಿಮೆ ವಲಯದ ಆಕ್ಷೇಪವೂ ಆಗಿದೆ. ವಿವಿಧ ರಾಜ್ಯಗಳಲ್ಲಿ ನೋಂದಣಿ ಮಾಡಬೇಕಾದ ಅಗತ್ಯ ಇರುವುದರಿಂದ ಅದಕ್ಕೆ ಹಲವು ಬಾರಿ ಅಡಿಟ್‌ ನಡೆಸಬೇಕಾಗುತ್ತದೆ. ಹೀಗಾಗಿ ಉದ್ದಿಮೆಯಲ್ಲಿ ಮುಂದೆ ಸಾಗುವುದು ಕಷ್ಟ ಸಾಧ್ಯ ಎನ್ನುತ್ತದೆ ಉದ್ದಿಮೆ ವಲಯ.

ಹೊಸ ಸೆಸ್‌ಗಳ ಜಾರಿ: ತೆರಿಗೆ ನಷ್ಟ ಪರಿಹಾರ ಕೊಡಬೇಕೆನ್ನುವ ನಿಟ್ಟಿನಲ್ಲಿ ಜಾರಿಯಾಗಿದೆ. ಐಷಾರಾಮಿ ವಸ್ತುಗಳು ಮತ್ತು ಸಿನ್‌ ಗೂಡ್ಸ್‌ (ಫಾಸ್ಟ್‌ ಪುಡ್‌, ಡ್ರಗ್ಸ್‌, ತಂಬಾಕು ಉತ್ಪನ್ನಗಳು)ಗಳ ಮೇಲೆ ಅನ್ವಯವಾಗುತ್ತದೆ. ಅದನ್ನು ವಾಹನೋದ್ಯಮಕ್ಕೆ ಕೂಡ ವಿಸ್ತರಿಸಲು ಯೋಚಿಸಲಾಗಿತ್ತು. ಸಕ್ಕರೆ ಮೇಲೆಯೂ  ಹೊಸ ಮಾದರಿ ಸೆಸ್‌ ಜಾರಿಗೆ ಪರಿಶೀಲನೆ ನಡೆಸಲಾಗುತ್ತಿದೆ. 

ಹೆಚ್ಚಿನ ತೆರಿಗೆ ಸ್ಲಾಬ್‌ಗಳು: ಇದನ್ನು ಪರಿಹರಿಸುವಲ್ಲಿ ಸರ್ಕಾರ ಇನ್ನೂ ಮುಂದಾಗಿಲ್ಲ. ಹೆಚ್ಚಿನ ಸಂಖ್ಯೆಯ ತೆರಿಗೆ ಸ್ಲಾéಬ್‌ಗಳು ಇದ್ದಾಗ ಕಾನೂನು ಹೋರಾಟಕ್ಕೂ ಕಾರಣವಾಗುತ್ತದೆ. ಇದು ಒಂದು ದೇಶ, ಒಂದು ತೆರಿಗೆ ಎಂಬ ಕಲ್ಪನೆಗೆ ಧಕ್ಕೆ ತಂದೊಡ್ಡುತ್ತದೆ.

ರಫ್ತುದಾರರಿಗೆ ಮರು ಪಾವತಿ ಸಮಸ್ಯೆ: ರಫ್ತು ಕ್ಷೇತ್ರದಲ್ಲಿ ತೊಡಗಿಸಿ ಕೊಂಡವರಿಗೆ ಮರು ಪಾವತಿ, ಮಾಹಿತಿ ಹೊಂದಾಣಿಕೆ ಕಾನೂನು ಮತ್ತು ಸರ್ಕಾರದ ಕಾನೂನು ಪ್ರಕ್ರಿಯೆಗಳಿಂದ ತೊಂದರೆಯಾಗಿದೆ.

ಮುಂದೇನು ಮಾಡಲಿದೆ ಸರ್ಕಾರ?
ತೆರಿಗೆ ವ್ಯವಸೆ ವ್ಯಾಪ್ತಿ ವಿಸ್ತರಣೆ: ಇನ್ನೂ ಕೂಡ ಹಲವು ಸರಕುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಟ್ಟಿರುವುದರಿಂದ ಹುಟ್ಟುವಳಿ ತೆರಿಗೆ ಸರಾಗವಾಗಿ ಸಾಗುತ್ತಿದೆ. ವಿದ್ಯುತ್‌, ಮದ್ಯ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್‌ ಎಸ್ಟೇಟ್‌ ಹೊಸ ತೆರಿಗೆ ವ್ಯಾಪ್ತಿಗಿಂತ ಹೊರಗೆ ಇವೆ. ನೈಸರ್ಗಿಕ ಅನಿಲ ಮತ್ತು ವೈಮಾನಿಕ ಇಂಧನ (ಎಟಿಎಫ್)ವನ್ನು ಈ ವ್ಯಾಪ್ತಿಗೆ ತರುವ ಬಗ್ಗೆ ಯೋಚನೆ ಇದೆ. ಆದರೆ ಪೆಟ್ರೋಲ್‌, ಡೀಸೆಲ್‌ ಮತ್ತು ಸೀಮೆ ಎಣ್ಣೆಯನ್ನು ಹೊಸ ವ್ಯವಸ್ಥೆ ವ್ಯಾಪ್ತಿಗೆ ತರುವ ಬಗ್ಗೆ ರಾಜ್ಯ ಸರ್ಕಾರಗಳು ವಿರೋಧ ಮಾಡಿವೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ.

ತೆರಿಗೆ ಸ್ಲಾಬ್‌ (ಹಂತ) ಮರು ಪರಿಶೀಲನೆ: ಸದ್ಯ ಒಟ್ಟು ಆರು ತೆರಿಗೆ ಹಂತಗಳು ಇವೆ. ಹೆಚ್ಚಿನ ಸರಕುಗಳು ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸುವ ವ್ಯಾಪ್ತಿಯಲ್ಲಿ ಬರುತ್ತವೆ. ಶೇ.12 ಮತ್ತು ಶೇ.18ರ ವಿಭಾಗಗಳನ್ನು ವಿಲೀನಗೊಳಿಸುವ ಬಗ್ಗೆ ಚಿಂತನೆಗಳಿವೆ. ಅದರ ಮೂಲಕ ಶೇ.14-ಶೇ.16ರ ಹೊಸ ವ್ಯವಸ್ಥೆ ಬರುವ ಸಾಧ್ಯತೆ ಇದೆ. 

ಕಡಿಮೆ ತೆರಿಗೆ ಪ್ರಮಾಣ: ಸಿನ್‌ ಗೂಡ್ಸ್‌ಗಳನ್ನು ಹೊರತು ಪಡಿಸಿ ಇತರ ವಸ್ತುಗಳಿಗೆ ವಿಧಿಸಲಾಗುವ ತೆರಿಗೆ ಪ್ರಮಾಣ ಕಡಿಮೆ ಮಾಡುವ ಅವಕಾಶ ಇದೆ. ಶೇ.28ರ ತೆರಿಗೆ ಹಂತದಲ್ಲಿರುವವುಗಳನ್ನು ಶೇ.18ರ ವ್ಯಾಪ್ತಿಗೆ ತರಲಾಗಿದೆ. ಸಿಮೆಂಟ್‌, ಬಣ್ಣಗಳು,  ಏರ್‌ ಕಂಡೀಷನರ್‌ಗಳು, ವಾಷಿಂಗ್‌ ಮಷಿನ್‌, ರೆಫ್ರೀಜರೇಟರ್‌ ಇತ್ಯಾದಿ ವಸ್ತುಗಳನ್ನು ಶೇ.28ರಿಂದ ಶೇ.18ಕ್ಕೆ ಇಳಿಕೆ ಮಾಡಲಾಗುತ್ತದೆ.

ಸರಳ ರಿಟನ್ಸ್‌ ಸಲ್ಲಿಕೆ: ಹೊಸ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಉದ್ದಿಮೆ ವಲಯದ ಪ್ರಮುಖ ಬೇಡಿಕೆಯೇ ಇದು. ಎಲ್ಲಾ ಸಾವಧಿ ರಿಟರ್ನ್ಸ್ ಸಲ್ಲಿಕೆಯನ್ನು ಒಂದೇ ಬಾರಿಗೆ ಸಲ್ಲಿಕೆ ಮಾಡುವಂಥ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಮುಂದಾಗಿದೆ. ಇದಕ್ಕಾಗಿ ಸಮಿತಿ ರಚನೆಯಾಗಿದ್ದು, ಅದು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಮುಂದಿನ 6 ತಿಂಗಳಲ್ಲಿ ಅದು ಜಾರಿಯಾಗುವ ನಿರೀಕ್ಷೆ.

ಕಾನೂನಾತ್ಮಕ ಬದಲಾವಣೆ: ಹುಟ್ಟುವಳಿ ತೆರಿಗೆ, ತೆರಿಗೆ ಪಾವತಿ ಮಾಡುವ ವಿಚಾರ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ಬದಲಾವಣೆ ತರಲಾಗಿದೆ. ರಫ್ತು ಕ್ಷೇತ್ರದಲ್ಲಿನ ಮರು ಪಾವತಿಗೆ ಸಂಬಂಧಿಸಿದಂತೆ ಇರುವ ಕೆಲ ಸಮಸ್ಯೆಗಳಿಗೆ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಚರ್ಚೆಯಾಗಿ ನಿರ್ಧಾರವಾಗುವ ನಿರೀಕ್ಷೆ.

ಹೆಚ್ಚಿನ ಮಾಹಿತಿ ಪರಿಶೀಲನೆ: ಸಲ್ಲಿಕೆಯಾಗಿರುವ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಕೇಂದ್ರ ಪರಿಶೀಲನೆಗೆ ಮುಂದಾಗಿದೆ. ಸರ್ಕಾರಕ್ಕೆ ಸಲ್ಲಿಕೆಯಾಗಲಿರುವ ಕಂದಾಯದ ವಿವರವನ್ನು ಸಂಗ್ರಹಿಸಲು ಇ ವೇ ಬಿಲ್‌ನಲ್ಲಿ ಇನ್‌ವಾಯ್ಸನ ಮಾಹಿತಿ  ಪಡೆಯುವ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next