Advertisement
ಉಡುಪಿ: ಉಡುಪಿ ಶಿರಿಬೀಡುವಿನ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ಕಟ್ಟಡದ ಮಾಲಕ, ವಿದೇಶದಲ್ಲಿ ಬಹುಕೋಟಿ ಉದ್ಯಮ ನಡೆಸುತ್ತಿದ್ದ ಇಂದ್ರಾಳಿ ನಿವಾಸಿ ಭಾಸ್ಕರ್ ಶೆಟ್ಟಿ (52) ಅವರನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಹಾಕಿ ಸುಟ್ಟ ಪ್ರಕರಣಕ್ಕೆ ಜುಲೈ 28 ರಂದು ಒಂದು ವರ್ಷ ತುಂಬುತ್ತದೆ. ಪ್ರಕರಣದ ವಿಚಾರಣೆ ಉಡುಪಿ ನ್ಯಾಯಾಲಯದಲ್ಲಿ ನಡೆಯುತ್ತಿದೆಯಾದರೂ ಆರೋಪಿಗಳ ಜಾಮೀನು ಅರ್ಜಿ ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಹಾಗೂ ಹೆಚ್ಚು ವರಿ ಚಾರ್ಜ್‌ಶೀಟ್ ಸಲ್ಲಿಕೆಯೂ ಬಾಕಿ ಇದೆ. ಪ್ರಕರಣದಲ್ಲಿ ಭಾಸ್ಕರ್ ಶೆಟ್ಟಿ ಅವರನ್ನು ಸ್ವಯಂಘೋಷಿತ ಜೋತಿಷಿ ನಂದಳಿಕೆ ನಿರಂಜನ ಭಟ್ಟ (26) ಅವರೊಂದಿಗೆ ಸೇರಿಕೊಂಡು ಶೆಟ್ಟಿ ಯವರ ಪತ್ನಿ ರಾಜೇಶ್ವರಿ ಶೆಟ್ಟಿ (50), ಮಗ ನವನೀತ ಶೆಟ್ಟಿ (20) ಕೊಲೆ ಮಾಡಿದ್ದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ಸಾಗುತ್ತಲೇ ಇದೆ.
ತೀವ್ರ ಕುತೂಹಲ ಕೆರಳಿಸಿದ್ದ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಗೊಂಡ ಸಿಐಡಿಯವರು ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸುತ್ತೇವೆ ಎಂದು ಹೇಳಿದ್ದರು. ಆದರೆ ಪ್ರಕರಣಕ್ಕೆ ವರ್ಷವಾಗುತ್ತಾ ಬಂದರೂ ಹೆಚ್ಚುವರಿ ಚಾರ್ಜ್ ಶೀಟ್ ಮಾತ್ರ ಇನ್ನೂ ಸಲ್ಲಿಕೆಯಾಗಲಿಲ್ಲ.
Related Articles
ತಾಯಿ ಗುಲಾಬಿ ಶೆಡ್ತಿ ಅವರು ಮಗನ ಅಪಹರಣವೆಂದರೂ ಮೊದಲಿಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಬಳಿಕ ಪ್ರತಿಭಟನ ಒತ್ತಡಗಳಿಂದ ಕೊಲೆ ಪ್ರಕರಣವಾಗಿ ದಾಖಲುಗೊಂಡು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. ಅನಂತರದಲ್ಲಿ ತನಿಖಾಧಿಕಾರಿ ಎಸ್.ವಿ. ಗಿರೀಶ್ ಅವರನ್ನು ಬದಲಾಯಿಸಿ ಎಎಸ್‌ಪಿ ಡಾ| ಸುಮನಾ ಡಿ.ಪಿ. ಅವರನ್ನು ತನಿಖಾಧಿಕಾರಿಯನ್ನಾಗಿ ಮಾಡಲಾಗಿತ್ತು. ಸಿಐಡಿ ತನಿಖೆಗೆ ಒತ್ತಡ ಹೆಚ್ಚಿದ ಕಾರಣ ಗೃಹಸಚಿವರಿಗೆ ಸಚಿವ ಪ್ರಮೋದ್ ಮಧ್ವರಾಜ್ ಅವರು ಪತ್ರ ಬರೆದಿದ್ದರು. ಬಳಿಕ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿ ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದರು.
Advertisement
ಹೋಮಕುಂಡದಿಂದ ಪ್ರಸಿದ್ಧಿಗೆಪತ್ನಿ, ಮಗ ಸೇರಿಕೊಂಡು ನಂದಳಿಕೆಯ ನಿರಂಜನನ ಮನೆಯಲ್ಲಿ ಭಾಸ್ಕರ್ ಶೆಟ್ಟಿಯವರನ್ನು ಜು. 28ರ ರಾತ್ರಿ ಸುಟ್ಟಿದ್ದರು. ಬಳಿಕ ಸಮೀಪದೂರಿನ ಹಲವು ನದಿಗಳಿಗೆ ಮೂಳೆ, ಬೂದಿ ಇತರ ಪರಿಕರಗಳನ್ನು ಎಸೆದಿದ್ದರು. ಇದನ್ನು ಅಂದಿನ ತನಿಖಾಧಿಕಾರಿ ಎಎಸ್‌ಪಿ ಸುಮನಾ ಡಿ.ಪಿ. ಅವರ ತಂಡ ಪತ್ತೆ ಮಾಡಿದ್ದು, ಅನಂತರದಲ್ಲಿ ಸಿಐಡಿ ತಂಡವೂ ಹಲವು ಸಾಕ್ಷ್ಯ ಪತ್ತೆ ಮಾಡಿತ್ತು. ಒಂದು ಕಡೆ ಪತ್ನಿ, ಮಗ ಕೊಲೆಯಲ್ಲಿ ಭಾಗಿಯಾಗಿದ್ದು, ಹೋಮಕುಂಡಕ್ಕೆ ಹಾಕಿ ಸುಟ್ಟ ಕಾರಣದಿಂದ ಈ ಪ್ರಕರಣ ಸ್ಥಳೀಯ ಮಾತ್ರವಲ್ಲದೆ ದೇಶ-ವಿದೇಶಗಳ ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಆಗಿದ್ದವು. ಸಾಕ್ಷ್ಯನಾಶಕ್ಕೆ ನಡೆದಿತ್ತು ವ್ಯವಸ್ಥಿತ ಸಂಚು
ಕೊಲೆ ನಡೆಸಿದ ಬಳಿಕ ಸಾಕ್ಷ್ಯಗಳ ನಾಶಕ್ಕೆ ವ್ಯವಸ್ಥಿತವಾದ ಸಂಚು ನಡೆಸಿದ್ದರು. ಮೊದಲು ದೇಹವನ್ನು ಹೋಮಕುಂಡದಲ್ಲಿ ಸುಟ್ಟು ಅನಂತರ ಮೂಳೆ, ಬೂದಿ, ಹೊಡೆದ ರಾಡು, ಬಟ್ಟೆ ಇನ್ನಿತರ ಅವಶೇಷಗಳನ್ನು ಹಲವು ನದಿಗಳಿಗೆ ಎಸೆದಿದ್ದರು. ಈ ವೇಳೆ ಮೂಳೆಗಳನ್ನು ಸಿಮೆಂಟಿನ ಗೋಣಿ ಚೀಲದಲ್ಲಿ ಕಟ್ಟಿ ಹಾಕಿದ್ದ ಕಾರಣ ಮೂಳೆಗಳಲ್ಲಿ ಜೀವಕಣದ ಅಂಶ ಇತ್ತು. ಇದರಿಂದಾಗಿ ಡಿಎನ್‌ಎ ಪರೀಕ್ಷೆಯಲ್ಲಿ ಸಂಬಂಧಿಕರ ರಕ್ತ ಹೊಂದಾಣಿಕೆಯಾಗಿತ್ತು. ದೇಹ ಸುಡುವುದಕ್ಕಾಗಿ ಕೃತಕ ಹೋಮಕುಂಡವನ್ನು ಇಟ್ಟಿಗೆಯಿಂದ ರಚಿಸಿ, ಅನಂತರದಲ್ಲಿ ಅದನ್ನು ತೆಗೆದು ಹೊಸತಾದ ಸಣ್ಣ ಹೋಮಕುಂಡವನ್ನೂ ರಚಿಸಿದ್ದರು. ತನಿಖೆಯಲ್ಲಿ ಈ ಎಲ್ಲ ಅಂಶ ಬೆಳಕಿಗೆ ಬಂದಿದ್ದವು. ನಡೆದಿತ್ತು ನಾಟಕೀಯ ಬೆಳವಣಿಗೆ
ಘಟನೆ ನಡೆದ 10 ದಿನಗಳ ಬಳಿಕ ನಿರಂಜನ ಭಟ್ಟನನ್ನು ಪೊಲೀಸರು ಬಂಧಿಸಿದ್ದರು. ಆಗ ಆತ ವಜ್ರಖಚಿತ ಉಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಜಿಲ್ಲಾಸ್ಪತ್ರೆಗೆ ಕರೆದೊಯ್ದು ಹೊಟ್ಟೆಯಿಂದ ಉಂಗುರ ಹೊರತೆಗೆಯಲಾಗಿತ್ತು. ಇದೊಂದು ನಾಟಕೀಯ ಬೆಳವಣಿಗೆಯಂತೆ ಕಂಡುಬಂದಿತ್ತು. ಪ್ರಕರಣದಲ್ಲಿ ಗೊಂದಲಗಳು ಹೆಚ್ಚಾಗಿದ್ದ ಕಾರಣ ಮೊದಮೊದಲಿಗೆ ಊಹಾಪೋಹಗಳು ಹೆಚ್ಚಾಗಿದ್ದವು.
(ಮುಂದುವರಿಯುವುದು) ಆಸ್ತಿಗಾಗಿ ಮಗನಿಂದಲೇ ಕೊಲೆ
ಹಲವು ವಿಚಾರಗಳಿಗೆ ಸಂಬಂಧಿಸಿ ಭಾಸ್ಕರ್ ಶೆಟ್ಟಿ ಹಾಗೂ ರಾಜೇಶ್ವರಿ ಮಧ್ಯೆ ಹಣಕಾಸಿನ ತಕರಾರು ಉದ್ಭವಿಸಿತ್ತು. ತನ್ನ ಪತ್ನಿ, ಮಗನಿಗೆ ಇನ್ನು ಮುಂದಕ್ಕೆ ಹಣ, ಆಸ್ತಿಯನ್ನು ನೀಡುವುದಿಲ್ಲ. ಎಲ್ಲವನ್ನೂ ತಾಯಿ ಮನೆಯವರಿಗೆ ನೀಡುವೆನೆಂದು ವಿಲ್ ಬರೆಯಲು ಸಿದ್ಧತೆ ನಡೆಸಿದ್ದು, ಅದಕ್ಕಾಗಿ ವಕೀಲರ ಭೇಟಿಗೆ ದಿನ ನಿಗದಿಪಡಿಸಿರುವುದು ಪುತ್ರ ನವನೀತ ತಂದೆಯ ಕಚೇರಿಯಲ್ಲಿ ಇರಿಸಿದ್ದ ರೆಕಾರ್ಡರ್ ಮೂಲಕ ಗೊತ್ತಾಗಿತ್ತು. ಇನ್ನು ನಮ್ಮ ಆಸ್ತಿ ಕೈತಪ್ಪಿ ಹೋಗುವುದೆಂದು ಭಾವಿಸಿಕೊಂಡು ತಂದೆಯನ್ನು ಮುಗಿಸಲು ಹಾಕಿದ ಸ್ಕೆಚ್‌ನಂತೆ ಇಂದ್ರಾಳಿಯ ಮನೆಯಲ್ಲಿ ಸ್ನಾನ ಮಾಡಿ ಬರುತ್ತಿದ್ದಾಗ ಪೆಪ್ಪರ್ ಸ್ಪ್ರೆà ಮುಖಕ್ಕೆ ಹಾಕಿ ರಾಡಿನಿಂದ ಹೊಡೆದು ಕೊಲೈಗೈದು ಭಾಸ್ಕರ್ ಶೆಟ್ಟಿಯವರನ್ನು ನಂದಳಿಕೆಗೆ ಸಾಗಿಸಿ ಹೋಮಕುಂಡಕ್ಕೆ ಹಾಕಿ ಸುಡಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಪೊಲೀಸರ ಮೇಲೆಯೇ ಇತ್ತು ಆರೋಪ
ತನಿಖೆಗಾಗಿ ಭಾಸ್ಕರ್ ಶೆಟ್ಟಿಯವರ ಇಂದ್ರಾಳಿಯ ಮನೆಗೆ ಹೋಗಿದ್ದ ಪೊಲೀಸರು ಬಿರಿಯಾನಿ ಸವಿದಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ತನಿಖೆ ಸಂದರ್ಭ ಆರೋಪಿ ನವನೀತ್ ಶೆಟ್ಟಿಯನ್ನು ಜೀಪಿನಲ್ಲಿ ಕರೆದೊಯ್ಯುವಾಗ ಇನ್ಸ್‌ಪೆಕ್ಟರ್ ಕೂರುವ ಜೀಪಿನ ಮುಂಭಾಗದ ಸೀಟಿನಲ್ಲಿ ಕುಳ್ಳಿರಿಸಿ ಕರೆದೊಯ್ದದ್ದು ಆರೋಪಿಗಳಿಗೆ ‘ರಾಜಾತಿಥ್ಯ’ ನೀಡಲಾಗಿದೆ ಎನ್ನುವ ಟೀಕೆ ವ್ಯಕ್ತವಾಗಿತ್ತು. ಪ್ರಕರಣ ಸಂಭವಿಸಿದ ಸಂದರ್ಭ ಎಸ್‌ಪಿ ಆಗಿದ್ದ ಅಣ್ಣಾಮಲೈ ವರ್ಗವಾಗಿದ್ದರು. ಆದರೆ ಉಡುಪಿಯಲ್ಲಿದ್ದರು. ಎಎಸ್‌ಪಿ ಎನ್. ವಿಷ್ಣುವರ್ಧನ ಪ್ರಭಾರ ಎಸ್‌ಪಿಯಾಗಿದ್ದರು. ಕೆಲವು ದಿನಗಳ ಬಳಿಕ ಕೆ.ಟಿ. ಬಾಲಕೃಷ್ಣ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಹೋಮಕುಂಡದಲ್ಲಿ ಸುಟ್ಟ ಬಗ್ಗೆ ಮೊದಲಿಗೆ ಬಹಳ ಅನುಮಾನಗಳಿದ್ದರೂ ಆರೋಪಿಗಳ ಹೇಳಿಕೆ ಸಾಕ್ಷ್ಯಾಧಾರಗಳ ಜೋಡಣೆಯ ಸಂದರ್ಭ ಭಾಸ್ಕರ್ ಶೆಟ್ಟಿಯವರನ್ನು ಹೋಮಕುಂಡದಲ್ಲಿ ಹಾಕಿ ಪೆಟ್ರೋಲ್, ತುಪ್ಪ ಸುರಿದು ಕರ್ಪೂರ, ಕಟ್ಟಿಗೆ ಮೊದಲಾದ ವಸ್ತುಗಳನ್ನು ಬಳಸಿ ಸುಟ್ಟದ್ದು ಸಿಐಡಿ ತಂಡ ಬರುವ ಮೊದಲೇ ಖಚಿತವಾಗಿತ್ತು. ಸಿಐಡಿ ಎಸ್‌ಪಿ ಮಾರ್ಟಿನ್ ಮಾರ್ಬನಿಯಂಗ್ ಮಾರ್ಗದರ್ಶನದಂತೆ ತನಿಖಾಧಿಕಾರಿ ಎಚ್.ಟಿ. ಚಂದ್ರ ಶೇಖರ್ ತಂಡ ತನಿಖೆ ನಡೆಸಿ 1,300 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. – ಚೇತನ್ ಪಡುಬಿದ್ರಿ