Advertisement

ಕ್ಯಾನ್ಸರ್‌ ಕುರಿತು ಅರಿವು ಮೂಡಿಸಬೇಕು

12:45 AM Feb 06, 2020 | mahesh |

ತಂಬಾಕು ಚಟ ಕ್ಯಾನ್ಸರ್‌ನ ಒಂದು ಪ್ರಮುಖ ಕಾರಣ. ಇದು ಗೊತ್ತಿದ್ದರೂ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸುವ ದಿಟ್ಟತನವನ್ನು ಸರಕಾರಗಳು ಇನ್ನೂ ತೋರಿಸಿಲ್ಲ. ಒಂದೊಮ್ಮೆ ನಿಷೇಧಿಸಿದರೂ ಅದು ಬೇರೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಇಲ್ಲವೇ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತದೆ.

Advertisement

ವಿಶ್ವ ಕ್ಯಾನ್ಸರ್‌ ದಿನದಂಗವಾಗಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿರುವ ವರದಿ ಭಾರತದಲ್ಲಿ ಪ್ರತಿ ಹತ್ತು ಮಂದಿಯಲ್ಲಿ ಒಬ್ಬರು ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ ಹಾಗೂ ಪ್ರತಿ 15 ಮಂದಿಯಲ್ಲಿ ಒಬ್ಬರು ಕ್ಯಾನ್ಸರ್‌ನಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಳವಳಕಾರಿ ಅಂಕಿಅಂಶವನ್ನು ಬಹಿರಂಗಪಡಿಸಿದೆ. 2018ರಲ್ಲಿ 1.16 ದಶಲಕ್ಷ ಹೊಸ ಕ್ಯಾನ್ಸರ್‌ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿವೆ ಎನ್ನುತ್ತಿದೆ ಈ ವರದಿ. ಕಾನ್ಸರ್‌ ಪ್ರಮಾಣ ಇದೇ ರೀತಿ ಹೆಚ್ಚುತ್ತಾ ಹೋದರೆ ಭಾರತ ಕ್ಯಾನ್ಸರ್‌ನ ತವರು ದೇಶವಾಗುವ ಸಾಧ್ಯತೆಗಳಿವೆ.

ಈಗಾಗಲೇ ನಮ್ಮಲ್ಲಿರುವ ಕ್ಯಾನ್ಸರ್‌ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಇನ್ನಷ್ಟು ಜನರು ಕ್ಯಾನ್ಸರ್‌ಗೆ ತುತ್ತಾಗುವುದೆಂದರೆ ಆಸ್ಪತ್ರೆಗಳ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗುವುದು ಎಂದು ಅರ್ಥ. ಆದರೆ ಇಂಥ ಒತ್ತಡವನ್ನು ತಾಳುವಷ್ಟು ಸಾಮರ್ಥ್ಯ ಆಸ್ಪತ್ರೆಗಳಿಗಿವೆಯೇ ಎಂದು ನೋಡಿದಾಗ ನಿರಾಶದಾಯಕ ಚಿತ್ರಣ ಸಿಗುತ್ತದೆ. ಈಗಲೂ ದೇಶದಲ್ಲಿ ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆಗಳು ದೊಡ್ಡ ನಗರಗಳಲ್ಲಿ ಮಾತ್ರ ಇವೆ. ಅದರಲ್ಲೂ ಸರಕಾರಿ ಆಸ್ಪತ್ರೆಗಳದ್ದು ಅದೇ ಗೋಳಿನ ಕತೆ. ಒಂದಿದ್ದರೆ ಇನ್ನೊಂದಿಲ್ಲ ಎಂಬ ಸೌಲಭ್ಯಗಳು. ಇದ್ದುದರಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ತಕ್ಕಮಟ್ಟಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿವೆ. ಆದರೆ ಇದು ಕೂಡ ಅಂತಾರಾಷ್ಟ್ರೀಯ ಮಾನದಂಡದ ಮಟ್ಟಕ್ಕಿಲ್ಲ.

ಭಾರತೀಯರನ್ನು ಹೆಚ್ಚಾಗಿ ಕಾಡುವುದು ಸ್ತನ, ಬಾಯಿ, ಗರ್ಭ ಕೊರಳು, ಶ್ವಾಸಕೋಶ , ಹೊಟ್ಟೆ , ಅನ್ನನಾಳದ ಕ್ಯಾನ್ಸರ್‌. ಇದು ನೇರವಾಗಿ ನಮ್ಮ ಆಹಾರ ಶೈಲಿ ಮತ್ತು ಜೀವನ ಶೈಲಿಗೆ ಸಂಬಂಧಿಸಿದ ಸಮಸ್ಯೆ. ನಾವು ಸೇವಿಸುವ ಆಹಾರದಲ್ಲಿ ಕೀಟನಾಶಕಗಳ ಅಂಶ ಮಿತಿಗಿಂತ ಹೆಚ್ಚು ಇದೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದ್ದದ್ದೇ. ಆದರೆ ಮಾರುಕಟ್ಟೆಯಲ್ಲಿ ಈಗ ಸಿಗುವುದು ಇಂಥ ಆಹಾರ ವಸ್ತುಗಳು ಮಾತ್ರ. ಹೀಗಾಗಿ ಅನಿವಾರ್ಯವಾಗಿ ಇದನ್ನೇ ಸೇವಿಸಬೇಕಾಗಿದೆ. ಜಂಕ್‌ಫ‌ುಡ್‌, ಕೃತಕ ವಾತಾವರಣದಲ್ಲಿ ಬೆಳೆಯವ ಮಾಂಸಾಹಾರ ಇತ್ಯಾದಿಗಳು ನೇರ ಕಾರಣವಾಗಿವೆ. ಸಾವಯವವಾಗಿ ಬೆಳೆದ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕೆಂದು ಹೇಳುವುದು ಸುಲಭ. ಆದರೆ ಇವುಗಳ ಬೆಲೆ ಜನ ಸಾಮಾನ್ಯರ ಕೈಗೆಟಕುವಂತಿಲ್ಲ. ಅಲ್ಲದೆ ಇವುಗಳು ಧಾರಾಳವಾಗಿ ಪೂರೈಕೆಯಾಗುವುದೂ ಇಲ್ಲ.

ಈಗಲೂ ನಮ್ಮ ದೇಶದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಬಹಳ ದುಬಾರಿಯೇ. ಕ್ಯಾನ್ಸರ್‌ ರೋಗ ಬಂದರೆ ರೋಗಿಯನ್ನು ಮಾತ್ರವಲ್ಲದೆ ಅವನ ಮನೆಯವರನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬ ಒಂದು ಪರಂಪರಾಗತ ನಂಬಿಕೆ ಈ ದುಬಾರಿ ಚಿಕಿತ್ಸೆಯ ಕಾರಣದಿಂದಲೇ ಹುಟ್ಟಿಕೊಂಡಿದೆ. ಇಷ್ಟು ದುಬಾರಿ ಚಿಕಿತ್ಸೆ ಮಾಡಿದರೂ ರೋಗಿ ಉಳಿಯುವ ಭರವಸೆ ಇಲ್ಲ ಎಂಬ ಕಾರಣಕ್ಕೆ ಕೆಲವರು ಚಿಕಿತ್ಸೆ ನಿರಾಕರಿಸುವುದೂ ಇದೆ. ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದಂತೆ ಸಮಾಜದಲ್ಲಿ ಇನ್ನೂ ಅನೇಕ ತಪ್ಪು ಗ್ರಹಿಕೆಗಳಿವೆ. ಮುಖ್ಯವಾಗಿ ಕ್ಯಾನ್ಸರ್‌ ಬರುವುದು ಶ್ರೀಮಂತರಿಗೆ, ಒಮ್ಮೆ ಕ್ಯಾನ್ಸರ್‌ ಬಂದರೆ ಗುಣವಾಗುವುದಿಲ್ಲ ಎಂಬಿತ್ಯಾದಿ. ಆದರೆ ಅಂಕಿಅಂಶಗಳು ಬೇರೆಯದ್ದೇ ಚಿತ್ರಣ ನೀಡುತ್ತಿವೆ. ಜನಸಂಖ್ಯೆ ಹೆಚ್ಚಿರುವ, ವಿದ್ಯಾಭ್ಯಾಸ ಕಡಿಮೆ ಇರುವ ರಾಜ್ಯಗಳಲ್ಲೇ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚು ಇದೆ.

Advertisement

ತಂಬಾಕು ಚಟ ಕ್ಯಾನ್ಸರ್‌ನ ಒಂದು ಪ್ರಮುಖ ಕಾರಣ. ಇದು ಗೊತ್ತಿದ್ದರೂ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸುವ ದಿಟ್ಟತನವನ್ನು ಸರಕಾರಗಳು ಇನ್ನೂ ತೋರಿಸಿಲ್ಲ. ಒಂದೊಮ್ಮೆ ನಿಷೇಧಿಸಿದರೂ ಅದು ಬೇರೊಂದು ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಇಲ್ಲವೇ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತದೆ.

ಕ್ಯಾನ್ಸರ್‌ ಎಂದಲ್ಲ ಮನುಕುಲವನ್ನು ಕಾಡುವ ಎಲ್ಲ ಮಾರಕ ಕಾಯಿಲೆಗಳ ನಿರ್ಮೂಲನಕ್ಕೆ ದಾರಿ ಕಂಡುಕೊಳ್ಳಬೇಕಾದುದು ಆಳುವ ವ್ಯವಸ್ಥೆಯ ಹೊಣೆ. ಕ್ಯಾನ್ಸರ್‌ನಂಥ ಕೆಲವು ಕಾಯಿಲೆಗಳು ಬರುವುದನ್ನು ತಡೆಯುವುದು ಅಸಾಧ್ಯ. ಆದರೆ ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಮೂಲಸೌಲಭ್ಯವನ್ನು ಸರಕಾರಗಳು ಮಾಡಿಕೊಡಬಹುದು. ಕನಿಷ್ಠ ಪ್ರತಿ ಜಿಲ್ಲೆಗೆ ಒಂದರಂತೆ ಕ್ಯಾನ್ಸರ್‌ ಚಿಕಿತ್ಸೆಗೆಂದೇ ಪ್ರತ್ಯೇಕ ಆಸ್ಪತ್ರೆಯನ್ನು ಸ್ಥಾಪಿಸಬೇಕು ಹಾಗೂ ಇವುಗಳಿಗೆ ತಜ್ಞ ವೈದ್ಯರನ್ನು ನೇಮಿಸಬೇಕು. ದೇಶದ ಪ್ರಸಕ್ತ¤ ಆರ್ಥಿಕ ಪರಿಸ್ಥಿತಿಯಲ್ಲಿ ಹೇಳುವುದಾದರೆ ಆರೋಗ್ಯ ಕ್ಷೇತ್ರಕ್ಕೆ ಇಷ್ಟೆಲ್ಲ ಖರ್ಚು ಮಾಡುವ ಸ್ಥಿತಿಯಲ್ಲಿ ಸರಕಾರ ಇಲ್ಲ. ಆದರೆ ಕನಿಷ್ಠ ಕ್ಯಾನ್ಸರ್‌ ಕುರಿತು ಅರಿವು ಮೂಡಿಸುವ ಕೆಲಸವನ್ನಾದರೂ ಪರಿಣಾಮಕಾರಿಯಾಗಿ ಮಾಡಬಹುದು. ಇದರಿಂದಲೂ ಸಾಕಷ್ಟು ಪ್ರಾಣಗಳನ್ನು ಉಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next