ಒಂದೇ ಶಾಟ್, ಒಬ್ಬ ಕಲಾವಿದ, ಒಂದೇ ಸ್ಥಳ, ಒಂದೇ ವಾದ್ಯ …ಇದೆಲ್ಲಾ “ಬಿಂಬ… ಆ ತೊಂಬತ್ತು ನಿಮಿಷಗಳು’ ಚಿತ್ರದ ಹೊಸ ಪ್ರಯೋಗ. ಹೌದು, ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳು ಬಂದಿವೆ. ಆ ಸಾಲಿಗೆ “ಬಿಂಬ … ಆ ತೊಂಬತ್ತು ನಿಮಿಷಗಳು’ ಹೊಸ ಸೇರ್ಪಡೆ. ಎಂ.ಎಂ.ಮೂವೀಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಜಿ. ಮೂರ್ತಿ ಮತ್ತು ಕೆ.ವಿ. ಶ್ರೀನಿವಾಸ ಪ್ರಭು ನಿರ್ದೇಶಕರು. ಚಿತ್ರಕ್ಕೆ ಶ್ರೀನಿವಾಸ ಪ್ರಭು ಕೇಂದ್ರಬಿಂದು.
ಇಲ್ಲಿ ಅವರೊಬ್ಬರೇ ಕಲಾವಿದರು ಎಂಬುದು ವಿಶೇಷ. ಇದು ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಕನ್ನಡದ ಶ್ರೇಷ್ಠ ನಾಟಕಕಾರ, ಸಾಹಿತಿ ಸಂಸರು ಅವರ ಬದುಕಿನ ಚಿತ್ರಣ. ಅವರ ಪೂರ್ಣ ಹೆಸರು ಸಾಮಿ ವೆಂಕಟಾದ್ರಿ ಐಯ್ಯರ್. ಇಲ್ಲಿ ಸಂಸರದ್ದೇ ಕೇಂದ್ರ ಪಾತ್ರ. ವಿಕ್ಷಿಪ್ತತೆ ಮೈಗೂಡಿಸಿಕೊಂಡಿದ್ದ ವ್ಯಕ್ತಿತ್ವದ, ಪ್ರಕ್ಷುಬ್ಧ ಮನಸ್ಥಿತಿಯ ವ್ಯಕ್ತಿಯಾಗಿದ್ದ ಸಂಸರಿಗೆ ಸದಾ ತನ್ನನ್ನು ಯಾರೋ ಹಿಂಬಾಲಸುತ್ತಿದ್ದಾರೆ, ಪೊಲೀಸರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಭಯ. ಆ ಭಯ ಆತಂಕಗಳೇ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಕರೆದೊಯ್ಯುತ್ತದೆ. ಅದೇ ಚಿತ್ರದ ಕಥಾಹಂದರ. ಈ ಹಿಂದೆ ಸಂಸರ ಕುರಿತು ಶ್ರೀನಿವಾಸ ಪ್ರಭು ಏಕ ವ್ಯಕ್ತಿ ಪ್ರದರ್ಶನ ಮಾಡಿದ್ದರು. ಆ ನಾಟಕವೇ ಈಗ “ಬಿಂಬ… ಆ ತೊಂಬತ್ತು ನಿಮಿಷಗಳು’ ಚಿತ್ರವಾಗಿದೆ.
ಇಲ್ಲಿ ಸಂಸರ ಪಾತ್ರವನ್ನು ಶ್ರೀನಿವಾಸ್ ಪ್ರಭು ನಿರ್ವಹಿಸಿದ್ದಾರೆ. ಸಂಸರು ಆತ್ಮಹತ್ಯೆಗೆ ಮುನ್ನ ಒಂದಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಕನ್ನಡಿ ಮುಂದೆ ನಿಂತು ಸಂಸರು ಸ್ವಗತದಲ್ಲಿ ಒಂದಷ್ಟು ಮಾತಾಡಿಕೊಳ್ಳುತ್ತಾರೆ. ಅದನ್ನೇ ಇಲ್ಲಿ ಒಂದೇ ಶಾಟ್, ಒಂದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ನಾಟಕವನ್ನು ಯಥಾವತ್ ಆಗಿ ಇಲ್ಲಿ ಮಾಡದಿದ್ದರೂ, ಚಿತ್ರಕ್ಕಾಗಿ ಕೆಲವು ತಿದ್ದುಪಡಿ ಮಾಡಲಾಗಿದೆ. ಹೊಸ ರೀತಿಯ ಚಿತ್ರಕಥೆ ಮಾಡಿ, 90 ನಿಮಿಷದದ ಆತ್ಮಹತ್ಯೆಯ ಕಥೆ ಮತ್ತು ವ್ಯಥೆಯ ಜೊತೆಗೆ ಸಂಸರ ಬದುಕು ಅನಾವರಣಗೊಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಇಲ್ಲಿ ಶ್ರೀನಿವಾಸ್ ಪ್ರಭು ಅವರೊಬ್ಬರೇ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಾಲ್ಕು ವಿಶೇಷ ಧ್ವನಿಗಳು ಮಾತ್ರ ಕೇಳಿಸುತ್ತವೆ. ಅದು ಬಿಟ್ಟರೆ, ಬೇರ್ಯಾವ ಪಾತ್ರವೂ ಇಲ್ಲಿಲ್ಲ. ಈ ಚಿತ್ರದ ಉದ್ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ದ್ವೇಷಿಸುತ್ತಿದ್ದ ಸಂಸರ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಇದೊಂದು ಬಡ ಸಾಹಿತಿಯ ಚಿತ್ರ ಎಂಬುದು ನಿರ್ದೇಶಕ ಕಮ್ ನಟ ಶ್ರೀನಿವಾಸ್ ಪ್ರಭು ಅವರ ಮಾತು. ನಾಟಕದಲ್ಲೂ ಚೌರಾಸಿಯ ಅವರ ಕೊಳಲ ಹಿನ್ನೆಲೆ ಸಂಗೀತವನ್ನು ಬಳಸಿಕೊಳ್ಳಲಾಗಿತ್ತು. ಚಿತ್ರದಲ್ಲೂ ಗೋಡ್ಕಿಂಡಿ ಅವರ ಕೊಳಲು ವಾದನವಿದೆ.
ವಿಶೇಷವೆಂದರೆ, ಇದೊಂದೇ ವಾದ್ಯ ಚಿತ್ರದಲ್ಲಿದೆ ಎನ್ನುತ್ತಾರೆ ಅವರು. ಅಂದಹಾಗೆ, ನಿರ್ದೇಶಕ ಜಿ. ಮೂರ್ತಿ ಅವರು, ಶ್ರೀನಿವಾಸ ಪ್ರಭು ಅವರ ನಾಟಕ ನೋಡಿ ಮೆಚ್ಚಿದ್ದರು. ಸುಮಾರು ಹದಿನೈದು ದಿನಗಳ ಕಾಲ ಆ ಪಾತ್ರ ಅವರನ್ನು ಕಾಡಿತ್ತಂತೆ. ಒಂದೂವರೆ ಗಂಟೆ ಕಾಲ ಸಂಭಾಷಣೆ ಜೊತೆ ಅಭಿನಯಿಸೋದು ಸುಲಭವಲ್ಲ, ಅದನ್ನು ಚೆನ್ನಾಗಿ ನಿರ್ವಹಿಸಿರುವ ಶ್ರೀನಿವಾಸ ಪ್ರಭು ಅವರಿಗೆ ಫೋನ್ ಮಾಡಿ, ಈ ನಾಟಕವನ್ನು ಸಿನಿಮಾ ಮಾಡೋಣ ಅಂದಿದ್ದಾರೆ.
ಶ್ರೀನಿವಾಸ್ ಪ್ರಭು ಅವರಿಗೆ ಇದು ಒಗ್ಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಸಾಹಿತ್ಯಿಕ ಚಿತ್ರ ಯಾಕೆ ಮಾಡಬಾರದು ಅಂತೆನಿಸಿದ್ದೇ ತಡ, ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರವೂ ಮುಗಿದಿದೆ. ಸದ್ಯಕ್ಕೆ ಡಬ್ಬಿಂಗ್ ಮುಗಿದಿದ್ದು, ಚೆನ್ನೈನಲ್ಲಿ ಎಫೆಕ್ಟ್$Õ ನಡೆಯುತ್ತಿದೆ. ನಿರ್ದೇಶಕ ಜಿ. ಮೂರ್ತಿ ಅವರಿಗೂ ಇದು ಚಾಲೆಂಜ್. ಇಲ್ಲಿ ಸಿಂಗಲ್ ಶಾಟ್‌ನಲ್ಲಿ ಸಿನ್ಮಾ ತೆಗೆಯೋದು ಕಷ್ಟದ ಕೆಲಸ ಅಂತ ಗೊತ್ತಿದ್ದರೂ, ಸಾಹಸಕ್ಕೆ ಕೈ ಹಾಕಿದ್ದಾರೆ. ಒಂದೂಮುಕ್ಕಾಲು ಗಂಟೆ ಅವಧಿಯ ಈ ಚಿತ್ರದಲ್ಲಿ ದುಡಿದ ಎಲ್ಲರಿಗೂ ವಿಶೇಷ ಧನ್ಯವಾದ ಹೇಳುತ್ತಾರೆ ನಿರ್ದೇಶಕರು.
ಪಿ.ಕೆ.ಎಚ್ ದಾಸ್ ಚಿತ್ರದ ಇನ್ನೊಂದು ಹೈಲೆಟ್. ಅವರಿಲ್ಲಿ ಎರಡು ತಾಸು ಹ್ಯಾಂಡಲ್‌ಶಾಟ್ ತೆಗೆದಿರುವುದು ವಿಶೇಷ. ಸಾಕಷ್ಟು ರಿಹರ್ಸಲ್ ನಡೆಸಿ, ಆ ಬಳಿಕ ಕೆಲಸ ಮಾಡಿರುವ ದಾಸ್, ಇಂಥದ್ದೊಂದು ಚಿತ್ರದಲ್ಲಿ ತೊಡಗಿಕೊಂಡಿದ್ದು ಖುಷಿ ಎನ್ನುತ್ತಾರೆ. ಈ ರೀತಿಯ ಚಾಲೆಂಜ್ ತೆಗೆದುಕೊಳ್ಳುವಾಗ ಕ್ಯಾಮೆರಾ ಕೈ ಕೊಟ್ಟರೆ ಏನಪ್ಪ ಮಾಡೋದು ಎಂಬ ಭಯದಲ್ಲೆ ಕೆಲಸ ಮಾಡಿದ್ದಾರೆ. ಕೆಲ ಚಿತ್ರಗಳಲ್ಲಿ ಸ್ಟಾಂಡ್ ಇಟ್ಟು ಚಿತ್ರೀಕರಿಸಿದ್ದಾರೆ. ಆದರೆ, ದಾಸ್ ಇಲ್ಲಿ ಹ್ಯಾಂಡಲ್‌ಶಾಟ್ ಮಾಡಿದ್ದಾರೆ. ಅದೇ ವಿಶೇಷ.