Advertisement

ನಮ್ಮ ಹಣೆಗೆ ನಾವೇ ಇಟ್ಟುಕೊಂಡ ಒಂದು ರೂಪಾಯಿ ಬಿಲ್ಲೆ…

01:25 AM Aug 20, 2017 | Harsha Rao |

ಪ್ರಪಂಚದ ಯಾವುದೇ  ಅರಮನೆಗಳಿಗೆ ಹೋಗಿ, ‘ಒಂದು ಕಾಲದಲ್ಲಿ  ಹೀಗೆಲ್ಲಾ ಬದುಕುತ್ತಿದ್ದರು’ ಅಂತ ವೈಭವವನ್ನು ರಸವತ್ತಾಗಿ ಹೇಳ್ತಾರೆ ವಿನಃ ಈಗ ಬದುಕುತ್ತಿದ್ದಾರೆ ಅಂತ ಯಾರೂ ಹೇಳಲೊಲ್ಲರು. ನಾವೂ ಹೀಗೆ ಬಂಗಲೆಗಳನ್ನು ಕಟ್ಟೋದರಿಂದ, ನಮ್ಮ ಮಕ್ಕಳನ್ನು ನಾವು ಸಂಪಾದಿಸಿದ ಆಸ್ತಿಗಳಿಗೆ ವಾಚ್‌ಮನ್‌ಗಳನ್ನಾಗಿ ಮಾಡ್ತೀವೆ ಹೊರತು, ಪ್ರಯೋಜಕರನ್ನಾಗಿ ಮಾಡೋಲ್ಲ.  

Advertisement

ಬಹಳ ವರ್ಷಗಳ ಹಿಂದೆ  ಚೆನ್ನೈನ ಮಹಾಬಲಿಪುರಂನಲ್ಲಿ ಪುಟ್ಟ ತೋಟ ಕೊಂಡುಕೊಂಡೆ. ಉದ್ದೇಶ ; ನಾನು ತಿನ್ನೋ ಊಟವನ್ನು ನಾನೇ ವ್ಯವಸಾಯ ಮಾಡಿಕೊಳ್ಳಬೇಕು ಅನ್ನೋ ಕನಸು ಈಡೇರಿಸಿಕೊಳ್ಳಲು. ಅಲ್ಲಿಗೆ ಹೋದರೆ ಈ ಜಗತ್ತೇ ಮರೆತು, ಅದೇ ಜಗತ್ತಾಗಿಬಿಡುತ್ತದೆ. ನನ್ನ ಪಾಲಿಗೆ ಈ ತೋಟ ಅತ್ತು, ಅತ್ತು ಓಡಿಬರುವ ಮಗುವಿಗೆ ಸಿಗುವ ಅಮ್ಮನ ಮಡಿಲಂತೆ. ಸುತ್ತ ಯಾವ ಕಟ್ಟಡಗಳೂ ಇಲ್ಲ. ಗುಡಿಸಲು ಮನೆ; ಕೋಣೆಗಳಿಲ್ಲ. ತೆಂಗಿನ ಗರಿಓಲೆಯ ನೆರಳು. ಬಣ್ಣ, ಬಣ್ಣ ಹೂಗಳು, ಗಿಡ ಮರ, ಕಾಯಿ, ಹಣ್ಣುಗಳ ಸಂತೆ ನಡೆಯುತ್ತಲೇ ಇರುತ್ತದೆ.

ಯಾವಾಗಲೂ ನನ್ನ ನೋಡಿ ಮುಗುಳು ನಗೋ ತೋಟ. ನನ್ನ ಮಗನ ಸಿದ್ದಾರ್ಥನ ಸಮಾಧಿಯೂ ಇಲ್ಲಿದೆ. ಈ ಪ್ರಕೃತಿ ಸೌಂದರ್ಯವನ, ಪ್ರಕೃತಿ ಜೊತೆ ಮಾತಾಡೋದನ್ನ ಒಂಟಿಯಾಗಿ ಅನುಭವಿಸೋ ಸುಖಾನೇ ಬೇರೆ. ಎರಡು ರಾತ್ರಿ ಟೈಂ ಸಿಕ್ಕರೆ ಸಾಕು, ಓಡಿ ಬಂದು ತೋಟದಲ್ಲಿ ಕುಳಿತುಬಿಡ್ತೀನಿ. ಇಲ್ಲಿ ಬಂದರೆ ಸಾಕು, ಎಷ್ಟೋ ದುಃಖಗಳು ಮುಗುಚಿ ಬೀಳ್ತವೆ. ಒಂಥರ ಕರುಳಬಳ್ಳಿ ಸಂಬಂಧ ನನ್ನ ಈ ತೋಟದ್ದು. ಇದಕ್ಕಾಗಿಯೇ ನನ್ನ ಮಗ ಸಿದ್ದಾರ್ಥನ ಸಾವನ್ನು ಕೂಡ ಇಲ್ಲಿಗೇ ತಂದು ದಾಖಲಿಸಿದ್ದು.

ಈ ಥರದ ಸ್ಥಳಕ್ಕೆ ಯಾರಾದರು ಬೆಲೆ ಕಟ್ಟೋಕೆ ಆಗುತ್ಯೇ? 

ಬೆಲೆ ಕಟ್ಟಿದ ಒಬ್ಬ ಮಹಾನುಭಾವ. 

Advertisement

ನನಗೆ ಆಗ ಒಂದೆರಡು ಸಿನಿಮಾ ಮಾಡಿ ಸಾಲ ಆಗಿತ್ತು.  ತೀರಿಸಬೇಕಲ್ವಾ? ಅದಕ್ಕೆ  ಸಾಲ ಕೇಳಿದೆ. ಅವ ‘ತಗೊಳ್ಳಿ ಸಾರ್‌, ಎಷ್ಟು ಬೇಕು? ತಕ್ಷಣವೇ ಕೊಡ್ತೀನಿ’ ಅಂದುಬಿಟ್ಟ. ನನ್ನ ಮೇಲೆ ನಂಬಿಕೆ ಇಟ್ಟು ಕೊಡ್ತಿದ್ದಾನೆ ಅಂದುಕೊಂಡೆ. ಆದರೆ ಈ ಸಾಲ ಕೊಡೋ ಮಹಾನುಭಾವ. ಈ ಮೊದಲೇ ನನ್ನ ಬೆನ್ನಿಗೆ ಏನೇನು ಆಸ್ತಿ ಇದೆ ಅಂತ ವಿಚಾರಿಸಿದ್ದಾನೆ. ಚೆನ್ನೈನ ಇಸಿಆರ್‌ ರೋಡಲ್ಲಿ ಇಂಪಾರ್ಟೆಂಟ್‌ ಆಗಿದ್ದ ಈ ತೋಟವನ್ನೂ ಕಣ್ತುಂಬಿಕೊಂಡಿದ್ದಾನೆ. ಆಮೇಲೆನೇ ಮನಸ್ಸು ಬಿಚ್ಚಿ “ಈಗಲೇ ಸಾಲ ತಗೊಳ್ಳಿ ಸಾರ್‌’ ಅಂದಿದ್ದು. ಸಾಲ ಕೊಡೋಕೆ ಬಂದ ಈ ಪುಣ್ಯಾತ್ಮ ಒಂದು ಮಾತು ಹೇಳಿದ. ಈ ಜನ್ಮದಲ್ಲಿ ಮರೆಯೋಕೆ ಆಗೋಲ್ಲ ಅದು. “ಏನ್‌ ಸಾರ್‌ ನೀವು. ಅಷ್ಟೊಂದು ಒಳ್ಳೇ ತೋಟ ಇಟ್ಕೊಂಡು, ಅದರಲ್ಲಿ ನಿಮ್ಮ ಮಗನ ಸಮಾಧಿ ಮಾಡಿದ್ದೀರಲ್ಲ. ಆ ಸಮಾಧಿ ಒಂದೇ ಒಂದು ಇಲ್ಲ ಅಂದಿದ್ದರೆ, ತೋಟದ ಬೆಲೆ ಎರಡರಷ್ಟಾಗಿರೋದು. ಆತ್ರ ಪಟ್ಟುಬಿಟ್ರಲ್ಲಾ’ ಅಂತ ನನ್ನ ಮೇಲೆ ಅಕ್ಕರೆಯಿಂದ, ಕಾಳಜಿ ವಹಿಸಿ ಬೇಜಾರು ಮಾಡಿಕೊಂಡ. 

ಅವನನ್ನು ನೋಡಿ ನನಗೆ ಅಯ್ಯೋ, ಪಾಪ ಅನಿಸಿತು. ಅವನ ಹೆಂಡತಿ, ಮಕ್ಕಳನ್ನೂ ಮನುಷ್ಯರಂತೆ ನೋಡ್ತಾನೋ ಇಲ್ವೊ, ಅವರೂ ಇವನ ಕಣ್ಣಿಗೆ ತೋಟ, ಜಮೀನು, ಬಿಲ್ಡಿಂಗ್‌ಗಳಂತೆ ಕಾಣ್ತಾರೋ ಏನೋ ಅಂತ! ಜೀವನದಲ್ಲಿ ಅವನಿಗೆ ಎಲ್ಲವನ್ನೂ ಹಣ, ಆಸ್ತಿ ಅಂತ ನೋಡಿ ಅಭ್ಯಾಸವಾಗಿಬಿಟ್ಟಿದೆ. ಸಂಬಂಧಗಳನ್ನು ಅದೇ ತಕ್ಕಡಿಯಲ್ಲಿ ಹಾಕಿ ತೂಗ್ತಾನೆ. ಅವನನ್ನು ತಾಜ್‌ಮಹಲ್‌ಗೆ ಕರೆದುಕೊಂಡು ಹೋದರೆ ಅದರ ಸೌಂದರ್ಯ ಸವಿಯೋಕ್ಕಿಂತ ಅದರಲ್ಲಿರೋ ಮಾರ್ಬಲ್‌ಗೆ ದುಡ್ಡು ಎಷ್ಟಾಗಬಹುದು ಅಂತ ಲೆಕ್ಕ ಹಾಕ್ತಾನೋ ಏನೋ! 

ನೋಡಿ, ಅವನತ್ರ ಸಾಲ ತಗೊಳ್ಳೋ ನಾನು ಸಂತೋಷವಾಗಿದ್ದೀನಿ. ಆದರೆ ನಮ್ಮಂಥವರಿಗೆ ಸಾಲ ಕೊಡೋ ಅವನು ಸಂತೋಷವಾಗಿಲ್ಲ. ಕೊಟ್ಟ ಸಾಲ ವಾಪಸ್ಸು ಪಡೆಯೋ ದಾರಿ ಹುಡುಕುವ ಟೆನ್ಷನ್‌ನಲ್ಲೇ ಇರ್ತಾನೆ. ಹಣ ಮಾತ್ರ ನೆಮ್ಮದಿ ಕೊಡುತ್ತೆ ಅನ್ನೋದೆಲ್ಲ ಸುಳ್ಳು ಅನ್ನೋದನ್ನು ನಾನು ಇಂಥವರನ್ನು ನೋಡಿಯೇ ಕಲಿತದ್ದು. ಹಣವೊಂದೇ ನೆಮ್ಮದಿ ಕೊಡೋದಾದರೆ, ನಮಗಿಂತ ಅವನು ಹತ್ತು ಪಟ್ಟು ನೆಮ್ಮದಿಯಾಗಿರಬೇಕಿತ್ತು ಅಲ್ವೇ? ಅವನ ಸ್ಥಿತಿ ಹೇಗಿತ್ತೆಂದರೆ ಜಾಸ್ತಿ ನಕ್ಕು ಮಾತಾಡಿದರೂ, ಅದು ಸಲುಗೆಯಾಗಿ ಹಣ ಬರುತ್ತೋ ಇಲ್ವೋ ಅನ್ನೋ ಗುಮಾನಿ. ಅದಕ್ಕೆ ಬಲವಂತವಾಗಿ ಬಚ್ಚಿಟ್ಟು, ಬಚ್ಚಿಟ್ಟು ನಗುವುದನ್ನೇ ಮರೆತು ಹೋಗಿದ್ದಾನೆ. 

ಮಗ ಸಿದ್ದಾರ್ಥನ ಸಮಾಧಿಯಿಂದ ತೋಟದ ಬೆಲೆ ಕಮ್ಮಿ ಆಯ್ತು ಅನ್ನೋನಿಗೆ ಭೂಮಿಯ ಮೇಲಿನ, ಸಂಬಂಧಗಳ ಮೇಲಿನ ಪ್ರೀತಿ ಹೇಗೆ ಅರ್ಥ ಮಾಡಿಸೋದು? ಬದುಕಬೇಕು ಅಂತ ಕೊಂಡ ತೋಟಕ್ಕೆ, ಯಾವತ್ತಾದರು ಮಾರಬಹುದು, ಮಾರಿದರೆ ಎಷ್ಟು ಬೆಲೆಗೆ ಹೋಗಬಹುದು ಅಂತೆಲ್ಲಾ ಬೆಲೆ ಕಟ್ಟೋಕೆ ಆಗುತ್ಯೇ? ನಾವೆಲ್ಲರೂ ಹೀಗೇನೆ, ಯಾವುದೋ ಘಟ್ಟದಲ್ಲಿ ಹಣದ ಹಿಂದೆ ಓಡ್ತಾನೇ ಇರ್ತೀವಿ. ಮನೇಲಿ ಹೆಣ್ಣು ಮಗಳಿದ್ದಾಳೆ, ಆಕೆಯ ಪ್ರಸವ ಸೇಫಾಗಿ ಆಗಲಿ ಅಂತ ಹೈಟೆಕ್‌ ಆಸ್ಪತ್ರೆಗೆ ಸೇರಿಸಬಹುದು. ಆದರೆ ಆ ತಾಯಿ ಅನುಭವಿಸೋ ನೋವಿಗೆ ಬೆಲೆ ಕಟ್ಟೋಕೆ ಆಗುತ್ಯೇ? ದೊಡ್ಡ ಹೋಟೆಲ್‌ನಿಂದ ಶ್ರೇಷ್ಠ ಊಟಾನೇ ತರಬಹುದು. ಆದರೆ ನಮ್ಮ ಹಸಿವಿಗೆ ಬೆಲೆ ಕಟ್ಟೋಕೆ ಆಗುತ್ಯೇ? ನಮ್ಮ ದೊಡ್ಡ ತಪ್ಪು ಎಂದರೆ, ಎಲ್ಲಾದಕ್ಕೂ ಬೆಲೆ ಕಟ್ಟುತ್ತಾ ‘ಹಣಮಂತ’ರಾಯರಾಗಿ, ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ. ನೆಮ್ಮದಿಯನ್ನು ಪರ್ಚೇಸ್‌ ಮಾಡೋ ತಾಕತ್ತು ಹಣಕ್ಕಿಲ್ಲ. ನೆಮ್ಮದೀನ ಯಾರು ಕೊಡೋಕು ಆಗೋಲ್ಲ. ಹೇಗೆ, ನಮ್ಮ ಬದುಕನ್ನು ನಾವೇ ಬದುಕಬೇಕೋ ಹಾಗೇ, ನಮ್ಮ ನೆಮ್ಮದಿಯನ್ನು ನಾವೇ ಗಳಿಸಿಕೊಳ್ಳಬೇಕು.

ಹಣ ಬದುಕಿನ ಎರಡನೇ ಆಯ್ಕೆಯಾದರೆ? 
ಅಲ್ಲಿಂದ ಶುರುವಾಗುತ್ತೆ ನೋಡಿ ನೆಮ್ಮದಿ. ನಮ್ಮ ಸಾಕಷ್ಟು ಸಮಸ್ಯೆಗಳು ಹಿಂದೆ ಬೀಳ್ತವೆ. ಇನ್ನೊಂದಷ್ಟು ಒಳ್ಳೇ ಮನಸ್ಸುಗಳು ಸಿಗ್ತವೆ. ಅರ್ಧ ತಪ್ಪುಗಳು ಹೂತೇ ಹೋಗ್ತವೆ.  

ಅದ್ಸರೀ, ಹಣ ಇಲ್ಲದೇ ಬದುಕೋಕೆ ಸಾಧ್ಯನೇ?
ನಿಜ ಹೇಳಬೇಕಾದರೆ ಆಗೋಲ್ಲ. ಆದರೆ ಹಣ ಮಾತ್ರವೇ ಇಟ್ಟುಕೊಂಡು ಬದುಕೋಕೂ ಆಗಲ್ಲ. ಅವಶ್ಯಕತೆಗೆ ಹಣ ಬೇಕು ; ಆಸೆಗಳಿಗಲ್ಲ. ಹಸಿವು ಮತ್ತು ನೋವು- ಈ  ಎರಡನ್ನು ಗೆದ್ದವನು ಬದುಕನ್ನೇ ಜಯಿಸಿದೋನು ಅಂತ ಅರ್ಥ.

ಟಾಲ್‌ಸ್ಟಾಯ್‌ ಕಥೆ ನೆನಪಾಗ್ತಿದೆ ನನಗೆ…
ಒಂದು ಊರು. ಅದರ ಸುತ್ತಲಿದ್ದ ಹಳ್ಳಿಯವರು ಮನೆ, ಜಮೀನನೆಲ್ಲಾ ಮಾರಿಕೊಂಡು ಹೋಗ್ತಾ ಇದ್ದರು. ಪಟ್ಟಣದ ವ್ಯಕ್ತಿಯೊಬ್ಬ ಇಲ್ಲಿ ಭೂಮಿ ಕಮ್ಮಿ ಬೆಲೆಗೆ ಸಿಗುತ್ತಲ್ಲ ಅಂತ ಓಡಿ ಬಂದ. ಹಳ್ಳಿ ಕೊನೇಲಿ ಒಬ್ಬೇ ಒಬ್ಬ ಮುದುಕ ಇದ್ದ. ಅವನನ್ನ ‘ನನ್ನ ಹತ್ರ ಇಷ್ಟೇ ದುಡ್ಡಿರೋದು. ಅದಕ್ಕೆ ಎಷ್ಟು ಭೂಮಿ ಬರುತ್ತೋ ಅಷ್ಟು ಕೊಡ್ತಿಯಾ?’ ಅಂದ. ಮುದುಕ “ಅಯ್ಯೋ, ಮಾರಾಯ ಭೂಮಿ ಮಾರೋಕ್ಕೆ ನಾನ್ಯಾರು. ಒಂದು ಕೆಲ್ಸ ಮಾಡು. ಬೆಳಗ್ಗೆ ಸೂರ್ಯ ಹುಟ್ಟಿದಾಗ ಬಾ. ಮುಳುಗೋ ತನಕ ನಿನಗೆ ಎಷ್ಟು ಬೇಕೋ ಅಷ್ಟು ಭೂಮಿ ಅಳ್ಕೊ. ಆದರೆ, ಸೂರ್ಯ ಅಸ್ತಮಿಸುವ ಹೊತ್ತಿಗೆ ಅಳತೆ ಶುರುವಾದ ಜಾಗನ ಮತ್ತೆ ಮುಟ್ಟಿರಬೇಕು. ಅಷ್ಟರೊಳಗೆ ಎಷ್ಟು ಅಳೆದಿರುತ್ತೀಯೋ ಅಷ್ಟು ಭೂಮಿ ನಿನ್ನದೆ’ ಅಂದುಬಿಟ್ಟ.  

ಪಟ್ಟಣದ ವ್ಯಕ್ತಿ ಬೆಳ್ಳಂಬೆಳಗ್ಗೇನೆ ಓಡಿ ಬಂದು ಕೆರೆ, ಗುಡ್ಡ, ಬಯಲು ಯಾವುದನ್ನೂ ಬಿಡದೆ,  ಎಲ್ಲವನ್ನೂ ಅಳೆಯುತ್ತಾ ಹೋದ. ಎಲ್ಲಿಂದ ಶುರುಮಾಡಿದ್ದನೋ ಅದಕ್ಕಿಂತ ಬಹಳ ದೂರ ಹೋಗಿಬಿಟ್ಟ. ಸೂರ್ಯ ಮುಳುಗೋ ಸಮಯ ಬಂತು. ಹೇಗಾದರು ಮಾಡಿ ಪ್ರಾರಂಭದ ಜಾಗಕ್ಕೆ ಬರಬೇಕಲ್ಲ ಅಂತ ಓಡೋಡಿ ತಲುಪಿಕೊಂಡ. ಬಂದ ಬಂದವನೇ ರಕ್ತದ ವಾಂತಿ ಮಾಡಿ ಸತ್ತೇ ಹೋದ. ಆಮೇಲೆ, ಅಜ್ಜ ಹೇಳಿದನಂತೆ ‘ಇವನು ಅಷ್ಟೊಂದು ಭೂಮಿಗಾಗಿ ಏಕೆ ಒದ್ದಾಡಿದ. ಇವನಿಗೆ ಬೇಕಾಗಿದ್ದು ಇಷ್ಟೇ ಅಲ್ವಾ? 6-3’ ಅಂದ.

ಹಣ ಮನುಷ್ಯನಲ್ಲಿ ದುರಾಸೆ, ಸುಳ್ಳು, ಹೊಟ್ಟೆಕಿಚ್ಚು, ಕಳ್ಳತನ, ವಂಚನೆ ಅನ್ನೋ ಬೀಜ ಬಿತ್ತುತ್ತಿದೆ. ಅದಕ್ಕೆ ಪಟ್ಟಣದ ವ್ಯಕ್ತಿ ಬಲಿಯಾಗಿದ್ದು. 
** 
ಒಂದು ವಿಶ್ಯ ಹೇಳ್ತೀನಿ…
ಈ ಪ್ರಕೃತಿಯಲ್ಲಿ ಮನುಷ್ಯನ ಬಿಟ್ಟರೆ ಬೇರೆ ಯಾರೂ ದುಡಿಯೋಲ್ಲ. ಎಲ್ಲಾ ಬದುಕುತ್ವೆ ಅಷ್ಟೇ. ಹುಲಿನೇ ನೋಡಿ. ವರ್ಷಕ್ಕೆ 50 ಸಲ ತಿನ್ನುತ್ತೆ. ಹಸಿವಾದಾಗ ಬೇಟೆಗೆ ಹೊರಡುತ್ತೆ. ಕಣ್ಣ ಮುಂದೆ ನೂರಾರು ಜಿಂಕೆ ಇದ್ದರೂ, ಸುಲಭವಾಗಿ ಯಾವುದು ಸಿಗುತ್ತೋ ಅದನ್ನು ಹುಡುಕುತ್ತೆ. ನಾನು ಬಲಶಾಲಿ ಅಂತ ತೋರಿಸಿಳ್ಳೋಕೆ ಹೋಗಲ್ಲ. ಬೇಟೆಯಾಡಿದ ಮೇಲೆ ಮೂರು ದಿನ ತಿನ್ನುತ್ತೆ. ಸುತ್ತ ಇರೋ ಮಿಕ್ಕ 99 ಜಿಂಕೆಗಳನ್ನು ಮೂಸು ಕೂಡ ನೋಡಲ್ಲ. ಹುಲಿಗೆ ರಾತ್ರಿ ಊಟಕ್ಕೆ, ನಾಳೆ ಬ್ರೇಕ್‌ಫಾಸ್ಟ್‌ಗೆ, 
ಆಚೆ ನಾಡಿದ್ದಿಗೆ ಲಂಚ್‌, ಬ್ರಂಚ್‌ ಎತ್ತಿಡಬೇಕು ಅನ್ನೋ ಐಡಿಯಾ ಇಲ್ಲ.  

ಈ ಭೂಮಿ ಮೇಲಿನ ಎಲ್ಲಾ ಜೀವಿಗಳು ಹಸಿವು ಎಷ್ಟಿದೆ, ಅದಕ್ಕೆ ಎಷ್ಟು ಬೇಕೋ ಅಷ್ಟೇ ಬೇಟೆಯಾಡುತ್ವೆ, ಮಕ್ಕಳು ತನ್ನಕಾಲ ಮೇಲೆ ನಿಂತು ಪ್ರಯೋಜಕರಾಗುವ ತನಕ ಬೇಟೆಯಾಡಿ ಊಟ ಕೊಡುತ್ತೆ ಅಷ್ಟೇ. ಆದರೆ ಮನುಷ್ಯ ಆಗಲ್ಲ. ತನಗೆ, ತನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅವರ ಮಕ್ಕಳಿಗೆ ಅಂತ ಸೇರಿಸುತ್ತಾ ಹೋಗುತ್ತಾನೆ. 

ಒಂದು ವಿಶ್ಯ ತಿಳ್ಕೊಳೀ – ಪ್ರಪಂಚದಲ್ಲಿರೋ ಯಾವುದೇ ಅರಮನೆಗಳಿಗೆ ಹೋದರು, ‘ಒಂದು ಕಾಲದಲ್ಲಿ ಹೀಗೆಲ್ಲಾ ಬದುಕುತ್ತಿದ್ದರು’ ಅಂತ ವೈಭವವನ್ನು ರಸವತ್ತಾಗಿ ಹೇಳ್ತಾರೆ ವಿನಃ, ಈಗ ಬದುಕುತ್ತಿದ್ದಾರೆ ಅಂತ ಯಾರೂ ಹೇಳಲೊಲ್ಲರು. ನಾವೂ ಹೀಗೆ ಬಂಗಲೆಗಳನ್ನು ಕಟ್ಟೋದರಿಂದ, ನಮ್ಮ ಮಕ್ಕಳನ್ನು ಸಂಪಾದಿಸಿದ ಆಸ್ತಿಗಳಿಗೆ ವಾಚ್‌ಮನ್‌ಗಳನ್ನಾಗಿ ಮಾಡ್ತೀವೇ ಹೊರತು, ಪ್ರಯೋಜಕರನ್ನಾಗಿ ಮಾಡೋಲ್ಲ. ಈ ಮನಃಸ್ಥಿತಿ ಬದಲಿಸಿಕೊಂಡು, ಬೇರೆಯವರಿಗೂ ಉಳಿಸುವ ಗುಣ ಬೆಳೆಸಿಕೊಂಡರೆ ಮಾತ್ರ ಒಳ್ಳೆ ಮನಸುಗಳು ಹುಟ್ಟುತ್ತವೆ.

ಈಗ ಬೇಂದ್ರೆ ಅಜ್ಜ ಹೇಳಿದ ಬದುಕಿನ ಸತ್ಯ ಮನಸ್ಸಲ್ಲಿ ಗುನುಗುತ್ತಿದೆ…
“ಕುರುಡು ಕಾಂಚಾಣ ಕುಣಿಯತಲಿತ್ತೋ, ಕಾಲಿಗೆ ಬಿದ್ದವರ ತುಳಿಯುತಲಿತ್ತೋ’ ಅಂತ. ನಾವು ಹಣವನ್ನು ಯಾವಾಗಲು ತಲೆಯಮೇಲೆ ಇಟ್ಕೊಂಡು ಕೊಂಡಾಡ್ತಿವಿ ಅಲ್ವೇ? ನಾವು ಸತ್ತಾಗಲು ಅದು ಅಲ್ಲೇ ಇರ್ತದೆ.  ಇದೇ ಕಾರಣಕ್ಕೆ ಸತ್ತಮೇಲೆ, ಮನುಷ್ಯನ ಹೆಣದ ಹಣೆಯ ಮೇಲೆ ಒಂದು ರೂಪಾಯಿ ಬಿಲ್ಲೆ ಇಟ್ಟು ಕಳುಹಿಸೋದು. ನಾಳೆ ನಾನು ಸತ್ತರು ಒಂದು ರೂ. ಬಿಲ್ಲೆ ಇಟ್ಟು ಕಳಿಸ್ತಾರೇನೋ!  
ಮನುಷ್ಯ ಅನ್ನೋನು, ಸಂಬಂಧಗಳನ್ನ, ಭೂಮಿಯನ್ನ ಬಿಟ್ಟು, ಹಣವನ್ನ ಮಾತ್ರ ಗೌರವಿಸಿದರೆ,  ಅದು ಬದುಕಿರುವಾಗಲೇ ನಮ್ಮ ಹಣೆಗೆ ನಾವೇ ಇಟ್ಟುಕೊಂಡ ಒಂದು ರೂಪಾಯಿ ಬಿಲ್ಲೆ. 

ಏನಂತೀರಿ…?

– ಪ್ರಕಾಶ್‌ ರೈ

Also Read this:
– ನಮ್ಮ ನೂರಾರು ತೀಟೆಗಳದ್ದು ಒಂದೇ ಕಥೆ…: //bit.ly/2uBMUgv
– ಸಿಕ್ಕಲ್ಲೆಲ್ಲ ಬಿಲ್ಡಿಂಗ್‌ ಕಟ್ಟಿ ಹಸಿವು ನೀಗಿಸಿಕೊಳ್ಳೋಕ್ಕೆ ಆಗೋಲ್ಲ: //bit.ly/2uwEKFm
– ತೋಟದಲ್ಲಿ ಕೂತರೆ ಆಹಾ, ಮನಸ್ಸು ಗಾಂಧಿ ಬಜಾರ್‌!: //bit.ly/2tU70WV
– ಬಾವಿಯ ಪಾಚಿ, ಲಂಕೇಶರ ಮಾತು…: //bit.ly/2tAnnb3
– ಇದೊಳ್ಳೆ ರಾಮಾಯಣ ಅಲ್ಲ; ಇದುವೇ ನಾನು, ನನ್ನ ಕನಸು: //bit.ly/2uNtyb0

Advertisement

Udayavani is now on Telegram. Click here to join our channel and stay updated with the latest news.

Next