Advertisement

ರಫೇಲ್‌ ವಿಮಾನದ ಪೈಲಟ್‌ ಅರುಣ್‌ ಕುಮಾರ್‌ ಓದಿದ್ದು ಕರ್ನಾಟಕದಲ್ಲಿ !

03:51 AM Jul 30, 2020 | Hari Prasad |

ಮಂಗಳೂರು: ಫ್ರಾನ್ಸ್‌ನಿಂದ ಭಾರತಕ್ಕೆ ಹಾರಾಟ ಮಾಡಿಕೊಂಡು ಬಂದಿರುವ 5 ರಫೇಲ್‌
ವಿಮಾನಗಳ ಪೈಕಿ ಒಂದು ವಿಮಾನದ ಪೈಲಟ್‌ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌ (35) ಕರ್ನಾಟಕದಲ್ಲಿ ಓದಿದ ವಿದ್ಯಾರ್ಥಿ ಆಗಿದ್ದು, ಅವರ ಶಿಕ್ಷಕರಲ್ಲಿ ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರು ಎನ್ನುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.

Advertisement

ಅರುಣ್‌ ಕುಮಾರ್‌ ಬಿಹಾರ ಮೂಲದವರಾಗಿದ್ದು, ವಿಜಯ ಪುರದ ಸೈನಿಕ ಶಾಲೆಯ ಹಳೆ ವಿದ್ಯಾರ್ಥಿ. ತಂದೆ ಬೆಂಗಳೂರಿನಲ್ಲಿ ವಾಯು ಸೇನೆಯಲ್ಲಿದ್ದ ಸಂದರ್ಭ ಅರುಣ್‌ ಕುಮಾರ್‌ ಸೈನ್ಯಕ್ಕೆ ಸೇರಲು ವಿಜಯಪುರ ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆದಿದ್ದರು.

1995ರಲ್ಲಿ 6ನೇ ತರಗತಿಗೆ ಸೈನಿಕ ಶಾಲೆಗೆ ಸೇರ್ಪಡೆಗೊಂಡಿದ್ದ ಅವರು 1999ರಲ್ಲಿ ಎಸೆಸೆಲ್ಸಿ ಪೂರ್ತಿಗೊಳಿಸಿದ್ದರು. ಆ ಬಳಿಕ ಯುಪಿ ಎಸ್‌ಸಿ, ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ವಾಯುಪಡೆಯಲ್ಲಿ ವಿಂಗ್‌ ಕಮಾಂಡರ್‌ ಆಗಿದ್ದಾರೆ.

‘ಅರುಣ್‌ ಕುಮಾರ್‌ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾಷಣ, ನಾಟಕ ಮತ್ತಿತರ ಸ್ಪರ್ಧೆಗಳಲ್ಲಿ, ಫುಟ್ಬಾಲ್‌ ಹಾಗೂ ಇತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ.

ಕುದುರೆ ಸವಾರಿಯಲ್ಲಿ ಹೆಚ್ಚು ಆಸಕ್ತಿ ಇತ್ತು. ಇದೆಲ್ಲವೂ ಆತನಿಗೆ ರಕ್ಷಣ ಇಲಾಖೆಗೆ ಸೇರ್ಪಡೆಗೊಳ್ಳಲು ಸಹಾಯಕವಾಯಿತು’ ಎಂದು ಅರುಣ್‌ ಕುಮಾರ್‌ಗೆ 11, 12ನೇ ತರಗತಿಗಳಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪಾಠ ಮಾಡಿದ್ದ ಶಿಕ್ಷಕ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಗುತ್ತಿಗಾರಿನ ದಾಮೋದರ್‌ (ಈಗ ನಿವೃತ್ತ) ಅವರು ‘ಉದಯವಾಣಿ’ಗೆ ತಿಳಿಸಿದರು.

Advertisement

ಸಾಧಿಸುವ ಛಲ ಇತ್ತು


ಜೀವನದಲ್ಲಿ ಏನನ್ನಾದರೂ ಸಾಧನೆ‌ ಮಾಡಬೇಕೆಂಬ ಛಲ ಅರುಣ್‌ ಕುಮಾರ್‌ ಅವರಲ್ಲಿ ವಿದ್ಯಾರ್ಥಿ ಆಗಿರುವಾಗಲೇ ಕಂಡು ಬಂದಿತ್ತು. ನನ್ನ ಶಿಷ್ಯನೊಬ್ಬ ವಿಂಗ್‌ ಕಮಾಂಡರ್‌ ಆಗಿ ಅತ್ಯಾಧುನಿಕ ಯುದ್ಧ ವಿಮಾನ ರಫೇಲ್‌ ಹಾರಾಟ ಮಾಡುವಷ್ಟು ಎತ್ತರಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿ. ಇದು ನನಗೂ ಶಾಲೆಗೂ ಕರ್ನಾಟಕಕ್ಕೂ ಹೆಮ್ಮೆಯ ಕ್ಷಣ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ದೇಶ ಸೇವೆಯನ್ನು ಮಾಡಲಿ.

– ದಾಮೋದರ್‌, ವಿಜಯಪುರ ಸೈನಿಕ ಶಾಲೆಯ ನಿವೃತ್ತ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next