Advertisement

ಪುದುಚೇರಿಯಲ್ಲೊಂದು “ಕಡಲೂರು’; ಸಮುದ್ರದಾಳದ ಮ್ಯೂಸಿಯಂ

09:52 AM Dec 10, 2018 | Harsha Rao |

ಪುದುಚೇರಿ: ದೇಶದ ಪ್ರಥಮ ಸಮುದ್ರದಾಳದ ಮ್ಯೂಸಿಯಂ ಪುದುಚೇರಿಯಲ್ಲಿ ನಿರ್ಮಾಣವಾಗಲಿದ್ದು, ಕಳೆದ ಮಾರ್ಚ್‌ನಲ್ಲಿ ಸೇನೆಯಿಂದ ನಿವೃತ್ತಗೊಂಡ ಐಎನ್‌ಎಸ್‌ ಕಡಲೂರು ನೌಕೆಯನ್ನು ಪುದುಚೇರಿಯಿಂದ 7 ಕಿ.ಮೀ. ದೂರದಲ್ಲಿ ಸಮುದ್ರದಾಳದಲ್ಲಿ ಮುಳುಗಿಸಲಾಗುತ್ತದೆ. 60 ಮೀಟರ್‌ ಉದ್ದ ಹಾಗೂ 12 ಮೀಟರ್‌ ಅಗಲದ ನೌಕೆ ಇದಾಗಿದ್ದು, ಸಮುದ್ರದಲ್ಲಿ ಮುಳುಗಿಸಿದ ಸ್ವಲ್ಪ ದಿನಗಳಲ್ಲೇ ಈ ನೌಕೆಯನ್ನು ಜಲಚರಗಳು ತಮ್ಮ ವಾಸಸ್ಥಾನವನ್ನಾಗಿಸಿಕೊಳ್ಳಲಿವೆ. ಸಾಹಸ ಪ್ರವೃತ್ತಿಯ ಪ್ರವಾಸಿಗರು ಇಲ್ಲಿಗೆ ಈಜಿಕೊಂಡು ಹೋಗಿ ಮ್ಯೂಸಿಯಂ ವೀಕ್ಷಿಸಬಹುದು. ಡೈವಿಂಗ್‌ ಹಾಗೂ ಸ್ನೋರ್ಕಿಂಗ್‌ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದೆ.

Advertisement

ಡೈವಿಂಗ್‌ ಮಾಡುವವರು ಒಳಗೆ ಹೊರಗೆ ಸಂಚರಿಸಲು ಅನುಕೂಲವಾಗುವಂತೆ ಹಡಗಿನ ಕೆಲವು ಬಾಗಿಲುಗಳನ್ನು ಒಡೆಯಲಾಗುತ್ತದೆ. ಈ ಮ್ಯೂಸಿಯಂಗೆ ತೆರಳಲು ಜಲ ಮಾರ್ಗವನ್ನೂ ನಿಗದಿಸಲಾಗುತ್ತದೆ. ರಕ್ಷಣಾ ದಿರಿಸು ತೊಟ್ಟು ಪ್ರವಾಸಿಗರು ಬೋಟ್‌ನಲ್ಲಿ ಮ್ಯೂಸಿಯಂ ಸ್ಥಳಕ್ಕೆ ತೆರಳಿ, ಇಲ್ಲಿಂದ ಡೈವ್‌ ಮಾಡಬಹುದು. 26 ಮೀಟರ್‌ ಆಳದಲ್ಲಿ ಮ್ಯೂಸಿಯಂ ಇರಲಿದ್ದು, ಅಷ್ಟು ಆಳದವರೆಗೆ ಡೈವ್‌ ಮಾಡಲು ಬಯಸದವರು, ಸ್ನಾರ್ಕೆಲ್‌ ಮೂಲಕ ಕೆಲವೇ ಮೀಟರುಗಳ ದೂರದಿಂದಲೇ ಮ್ಯೂಸಿಯಂ ಕಣ್ತುಂಬಿಕೊಳ್ಳಬಹುದು.

ನೈಸರ್ಗಿಕ ಮ್ಯೂಸಿಯಂ: ನೌಕಾಪಡೆ ಐಎನ್‌ಎಸ್‌ ಕಡಲೂರು ಯುದ್ಧ ಹಡಗನ್ನು ಮುಳುಗಿಸಿದ ಸ್ವಲ್ಪ ದಿನಗಳಲ್ಲೇ ನೀರಿನಲ್ಲಿರುವ ಲವಣಾಂಶದಿಂದ ಹಡಗಿನ ಸ್ಟೀಲ್‌ ತುಕ್ಕು ಹಿಡಿಯುತ್ತದೆ. ಪ್ರೊಟೀನ್‌ ಹಾಗೂ ಪಾಲಿಸ್ಯಾಶಿರೈಡ್‌ನ‌ಂತಹ ರಾಸಾಯನಿಕಗಳು ಹಡಗಿನ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತವೆ. ಇದನ್ನೇ ಆಹಾರವಾಗಿಸಿಕೊಂಡು ಸೂಕ್ಷ್ಮ ಜೀವಿಗಳು, ಸಸ್ಯಗಳು ಹಾಗೂ ಬ್ಯಾಕ್ಟೀರಿಯಾ ಬೆಳೆಯುತ್ತವೆ. ನಂತರದಲ್ಲಿ ಮೀನುಗಳಿಗೆ ಇದು ಸಂತಾನ ವೃದ್ಧಿಗೆ ಉತ್ತಮ ಸ್ಥಳವೂ ಆಗಲಿದೆ. ದೊಡ್ಡ ಹಾಗೂ ಸಣ್ಣ ಮೀನುಗಳು ಇಲ್ಲಿ ವಾಸ ಮಾಡುತ್ತವೆ. ಹೀಗಾಗಿ ಇದು ನೈಸರ್ಗಿಕವಾದ ಮ್ಯೂಸಿಯಂ ಆಗಿರಲಿದೆ.

ಎನ್‌ಜಿಒ ಹಾಗೂ ಸರಕಾರದ ಸಹಭಾಗಿತ್ವ: ಸಮುದ್ರ ದಾಳದಲ್ಲಿ ಮ್ಯೂಸಿಯಂ ನಿರ್ಮಿಸುವ ಯೋಜನೆಯು ಚೆನ್ನೈ ಮೂಲದ ಎರಡು ರಾಷ್ಟ್ರೀಯ ಲ್ಯಾಬೊರೇಟರಿಗಳು, ಎನ್‌ಜಿಒ ಪಾಂಡಿ ಕ್ಯಾನ್‌ ಹಾಗೂ ಪುದುಚೇರಿ ಸರಕಾರದ ಜಂಟಿ ಯೋಜನೆಯಾಗಿರಲಿದೆ. ಸದ್ಯ ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣೆ ಪ್ರಾಧಿಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ನಿರೀಕ್ಷಿ ಸುತ್ತಿದೆ. ಈ ಅನುಮತಿ ಸಿಕ್ಕ ನಂತರದಲ್ಲಿ ಸೇನೆಯೇ ಹಡಗನ್ನು ಮುಳುಗಿಸಲಿದೆ. ಸೇನೆಗೆ ಹಡಗು ನಿರ್ವಹಣೆಯಲ್ಲಿ ಪರಿಣಿತಿ ಇರುವುದರಿಂದ ಈ ಕೆಲಸ ಸುಲಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next