Advertisement

50th birthday; ವಿಶಿಷ್ಟ ಉಡುಗೊರೆ: ಸಿಡ್ನಿಯಲ್ಲಿ ತೆರೆಯಿತು ತೆಂಡುಲ್ಕರ್‌ ಗೇಟ್‌

01:31 AM Apr 25, 2023 | Team Udayavani |

ಸಿಡ್ನಿ: ಸೋಮವಾರ 50ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿ ಕೊಂಡ ಲೆಜೆಂಡ್ರಿ ಕ್ರಿಕೆಟರ್‌ ಸಚಿನ್‌ ತೆಂಡುಲ್ಕರ್‌ ಅವರಿಗೆ ಆಸ್ಟ್ರೇಲಿಯದ ಐತಿಹಾಸಿಕ “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ (ಎಸ್‌ಸಿಜಿ) ವಿಶಿಷ್ಟ ಉಡುಗೊರೆಯೊಂದನ್ನು ನೀಡಿದೆ. ಇಲ್ಲಿನ ಗೇಟ್‌ ಒಂದಕ್ಕೆ ತೆಂಡುಲ್ಕರ್‌ ಹೆಸರನ್ನಿರಿಸಿ ಇದನ್ನು ಅನಾವರಣ ಮಾಡಿದೆ.

Advertisement

ಸಿಡ್ನಿ ಸ್ಟೇಡಿಯಂನ ಇನ್ನೊಂದು ಗೇಟ್‌ಗೆ ಮತ್ತೋರ್ವ ಖ್ಯಾತ ಕ್ರಿಕೆಟಿಗ, ವೆಸ್ಟ್‌ ಇಂಡೀಸ್‌ನ ಬ್ರಿಯಾನ್‌ ಲಾರಾ ಹೆಸರನ್ನಿರಿಸಿದೆ. ಲಾರಾ ಈ ಅಂಗಳದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಅಮೋಘ 277 ರನ್‌ ಬಾರಿಸಿದ ಸಾಧನೆಗೆ 30 ವರ್ಷ ತುಂಬಿದ ಸವಿನೆನ ಪಿಗಾಗಿ ಈ ಉಡುಗೊರೆ.

ಸಿಡ್ನಿಯಲ್ಲಿ 5 ಟೆಸ್ಟ್‌ ಪಂದ್ಯಗಳನ್ನಾಡಿ ರುವ ಸಚಿನ್‌ ತೆಂಡುಲ್ಕರ್‌ 3 ಶತಕ ಸೇರಿದಂತೆ 785 ರನ್‌ ಪೇರಿಸಿದ್ದಾರೆ. 2004ರ ಪಂದ್ಯದಲ್ಲಿ ಅಜೇಯ 241 ರನ್‌ ಬಾರಿಸಿದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ.

ಮಹಾನ್‌ ಗೌರವ
“ಇದೊಂದು ಮಹಾನ್‌ ಗೌರವ. ಎಸ್‌ಸಿಜಿ ಮತ್ತು ಕ್ರಿಕೆಟ್‌ ಆಸ್ಟ್ರೇಲಿಯಕ್ಕೆ ನನ್ನ ಧನ್ಯವಾದಗಳು. ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ ಭಾರತದಾಚೆಗಿನ ನನ್ನ ನೆಚ್ಚಿನ ಕ್ರೀಡಾಂಗಣ. ಇಲ್ಲಿ ನನ್ನ ಪಾಲಿನ ಅನೇಕ ಮಧುರ ನೆನಪುಗಳು ಹೆಪ್ಪುಗಟ್ಟಿವೆ. ನನ್ನ ನೆಚ್ಚಿನ ಗೆಳೆಯ ಲಾರಾಗೂ ಗೌರವ ನೀಡಿದ್ದು ಖುಷಿಯ ಸಂಗತಿ. ಶೀಘ್ರದಲ್ಲಿ ಸಿಡ್ನಿ ಅಂಗಳಕ್ಕೆ ಭೇಟಿ ನೀಡಲಿದ್ದೇನೆ’ ಎಂಬುದಾಗಿ ಸಚಿನ್‌ ಈ ಸಂದರ್ಭದಲ್ಲಿ ಹೇಳಿದರು. 1991-92ರ ಮೊದಲ ಆಸ್ಟ್ರೇಲಿಯ ಪ್ರವಾಸದ ವೇಳೆಯಲ್ಲೇ ತೆಂಡುಲ್ಕರ್‌ ಸಿಡ್ನಿಯಲ್ಲಿ ಟೆಸ್ಟ್‌ ಆಡಲಿಳಿದಿದ್ದರು.

ಇನ್ನು ಮುಂದೆ ವಿದೇಶಿ ಕ್ರಿಕೆಟಿಗರು ಈ ಎರಡು ದ್ವಾರಗಳ ಮೂಲಕವೇ ಅಂಗಳಕ್ಕಿಳಿಯಲಿದ್ದಾರೆ.

Advertisement

ವಿಶಿಷ್ಟ ರೀತಿಯಲ್ಲಿ ಸೆಹವಾಗ್‌ ವಿಶ್‌!
ಸಚಿನ್‌ ತೆಂಡುಲ್ಕರ್‌ ಅವರ 50ನೇ ಜನ್ಮದಿನಕ್ಕೆ ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್‌ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು ಶೀರ್ಷಾಸನವನ್ನು ಆಯ್ದುಕೊಂಡದ್ದು ವಿಶೇಷವಾಗಿತ್ತು. ತಲೆ ಕೆಳಗಾಗಿ ನಿಲ್ಲುವ ಮೂಲಕ ಅವರು ಸಚಿನ್‌ಗೆ ವಿಶ್‌ ಮಾಡಿದರು.

ಸೆಹವಾಗ್‌ ಇದಕ್ಕೆ ಕಾರಣವನ್ನೂ ನೀಡಿದ್ದಾರೆ. “ನಾವಿಬ್ಬರೂ ಜತೆಯಾಗಿ ಆಡುತ್ತಿದ್ದಾಗ ಸಚಿನ್‌ ತೆಂಡುಲ್ಕರ್‌ ನನಗೆ ಸಾಕಷ್ಟು ಸಲಹೆ ನೀಡುತ್ತಿದ್ದರು. ಇದಕ್ಕೆಲ್ಲ ನಾನು ಹೂಂಗುಡುತ್ತಿದ್ದರೂ ಕ್ರೀಸ್‌ನಲ್ಲಿ ಮಾತ್ರ ಯಾವುದನ್ನೂ ಪಾಲಿಸುತ್ತಿರಲಿಲ್ಲ. ಎಲ್ಲದಕ್ಕೂ ಉಲ್ಟಾ ಹೊಡೆಯುತ್ತಿದ್ದೆ. ಹೀಗಾಗಿ ಇವತ್ತು ಉಲ್ಟಾ ನಿಲ್ಲುವ ಮೂಲಕವೇ ಸಚಿನ್‌ ಅವರ 50ನೇ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದೇನೆ’ ಎಂದಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next