ನಾ ಚಿಕ್ಕವಳಿದ್ದಾಗ ನನ್ನೂರಿನಲ್ಲಿ ಇದ್ದ ಮೂರು ಹೊಟೇಲುಗಳು ಒಂದೊಂದು ತಿಂಡಿಗೆ ಫೇಮಸ್ಸಾಗಿದ್ದವು. ಮನೆಯಿಂದ ಸುಮಾರು 2 ಕಿ. ಮೀ. ದೂರದಲ್ಲಿದ್ದ ಸಾಲಿಗ್ರಾಮದ ಮಂಟಪ ಹೊಟೇಲ್‌ನ ಮಸಾಲೆ ದೋಸೆ, ಗಡ್‌ಬಡ್ ಐಸ್‌ಕ್ರೀಮ್ ಎಂದರೆ ಮಾರುತಿ-ಸುಜುಕಿಯಂತೆ ಜೋಡಿಪದವಾಗಿತ್ತು. ಬಸ್ಸಿನ ಟಿಕೀಟಿನ ಹಣ ಉಳಿದರೆ ಬೇರೆ ಏನಾದರೂ ತಿನ್ನಬಹುದು ಎಂಬ ಸಣ್ಣ ಉಳಿತಾಯದ ಆಸೆಗೆ ಅಪ್ಪ ಪ್ರತೀ ಶನಿವಾರ ನಡೆಸಿಕೊಂಡೇ ಅಲ್ಲಿಗೆ ಕರೆದೊಯ್ಯುತ್ತಿದ್ದರು. ಇನ್ನೊಂದು ಶೀತಲ್ ಐಸ್‌ಕ್ರೀಮ್‌ನ ಐಸ್ ಕ್ರೀಮ್ ಸವಿಯಲು ಹೋಗುತ್ತಿದ್ದುದು ವರ್ಷಕ್ಕೆ ಎರಡು ಬಾರಿ. ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ, ನಮ್ಮ ಪಾಲಿನ ಸಾಕ್ಷಾತ್ ಹೀರೋ ಆಗಿದ್ದ ಭಾವ ರಜೆಗೆ ಬಂದಾಗ ಮಾತ್ರ. ಮೂರನೆಯದ್ದು, ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲೇ ಇದ್ದ “ವೆಂಕಟೇಶ್ವರ ಭವನ’. ಅದರ ಈರುಳ್ಳಿ ದೋಸೆಯ ಪರಿಮಳ ರಸ್ತೆವರೆಗೂ ಹರಡಿ, ಪಾದಚಾರಿಗಳನ್ನು ಅರೆನಿಮಿಷ ನಿಲ್ಲಿಸಿ ಮೂಗರಳಿಸುವಂತೆ ಮಾಡುತ್ತಿತ್ತು. ಈ ಹೊಟೇಲುಗಳ “ಒಂದ್ದು ಮಸ್ಸಾಲ್ಲೇ’ ದನಿ ಕಿವಿಯಲ್ಲಿ ಗುಂಯ್‌ಗಾಡುತ್ತಿರುವಂತೆಯೇ, ಈಗ ಕೈಮೂಸಿದರೂ ದೋಸೆಯ ಅದೇ ಪರಿಮಳ ಮೂಗಿಗೆ ಅಡರುವಷ್ಟು ನೆನಪು ಸ್ಥಾಯಿಯಾಗಿದೆ.
ಹೊಟೇಲುಗಳ ಮಾಣಿಗಳು “ಮಸಾಲೆ ದೋಸೆ, ಈರುಳ್ಳಿ ದೋಸೆ, ಪ್ಲೆ„ನ್ ದೋಸೆ, ರವೆ ದೋಸೆ, ಪೂರಿ ಸಾಗು, ಇಡ್ಲಿ, ಗೋಳಿಬಜೆ, ಕೇಸರೀಬಾತ್, ವಡೆ’ ಎಂದು ಟೇಪ್‌ರೆಕಾರ್ಡರ್ ಒತ್ತಿದಂತೆ ಒಂದೇ ಸಮನೆ ಹೇಳುತ್ತಿದ್ದರೆ, “ಕರ್ಣರಸಾಯನಮಲೆ’ ಎಂದೆನಿಸುತ್ತಿತ್ತು. ಆದರೆ, ನೆನಪಿನಲ್ಲಿ ಉಳಿಯುತ್ತಿದ್ದುದು ಕೊನೆಯಲ್ಲಿ ಹೇಳಿದ್ದು ಮಾತ್ರ. ಆಗ “ಇನ್ನೊಮ್ಮೆ ಹೇಳು’ ಎನ್ನದೆ ವಿಧಿಯಿತ್ತಿರಲಿಲ್ಲ. ಕೊನೆಗೆ ಯಾವ ತಿಂಡಿಯೂ ಸರಿ ಕಾಣದೆ ಪಕ್ಕದ ಟೇಬಲ್ಲಿನವರು ತಿನ್ನುತ್ತಿರುವ ತಿಂಡಿ ರುಚಿಯಾಗಿ ಕಂಡು, ಅದನ್ನೇ ಕೊಡಿ ಎಂದು ಹೇಳಿ ಬಡಪಾಯಿಗಳಾಗುತ್ತಿದ್ದೆವು. ಎಲ್ಲಾ ತಿಂಡಿಗಳನ್ನು ಪಟಪಟನೆ ಹೇಳುವ (ಈಗಿನಂತೆ ಮುದ್ರಿತ ಪ್ರತಿ ಇರಲಿಲ್ಲ) ಒಳಗೆ ಹೋಗಿ ಜ್ಞಾಪಕ ಶಕ್ತಿ ಅದೆಂಥದ್ದು ಎಂದು ಸೋಜಿಗವಾಗುತ್ತಿತ್ತು. ಬಿಲ್ಲು ಕೊಡುವಾಗ ಅವನಿಗೆಲ್ಲಿಯಾದರೂ ಒಂದು ತಿಂಡಿಯ ಹೆಸರು ನೆನಪು ಹೋದರೂ ನಮಗಿಲ್ಲಿ ಲಾಭ ಎಂದು ಕಾತರರಾಗಿದ್ದರೂ ಊಹೂಂ… ಒಮ್ಮೆಯೂ ತಪ್ಪಿಹೇಳಿದ್ದಿಲ್ಲ. ನಾಲ್ಕೊಂದ್ಲಿ ಮಗ್ಗಿಯೂ ಬಾಯಿಪಾಠ ಬಾರದ ದಿನಗಳಲ್ಲಿ ಇಂಥ ಅಸಾಮಾನ್ಯ ನೆನಪಿನ ಶಕ್ತಿ ಉಳ್ಳವನು ದೊಡ್ಡ ಆಶ್ಚರ್ಯಸೂಚಕವಾಗಿ, ಪ್ರಶ್ನಾರ್ಥಕವಾಗಿ, ಹೀಗೂ ಉಂಟೇ?! ಅನ್ನಿಸುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ರೋಬೋಟಿಕ್ ಮಾಣಿಗಳು ಬಂದ ಮೇಲೆ ಇಂಥ ರಸಕ್ಷಣಗಳ ಅಭಾವ ಉಂಟಾಗದೇ ಇರದು. ಕಂಡ ಕೂಡಲೇ ತಿನ್ನಬೇಕೆನ್ನಿಸುವ ತಿಂಡಿಗಳನ್ನು ಕಂಡು ಅಣ್ಣ, ದೊಡ್ಡವನಾದ ಮೇಲೆ ತಾನೂ ಒಂದು ಹೊಟೇಲೊಂದನ್ನು ಇಡುವೆ ಎಂದು ಹೇಳುತ್ತಿದ್ದ. ಆದರೆ, ತೀರಾ ಹತ್ತಿರದ ಸಂಬಂಧಿಕರೊಬ್ಬರು ಹೊಟೇಲ್ ಇಟ್ಟು ಹಗಲು-ರಾತ್ರಿ ವಿಶ್ರಾಂತಿ ಇಲ್ಲದೆ ದುಡಿಯುತ್ತ, ಏಕಕಾಲದ ಕ್ಯಾಶಿಯರ್, ಕ್ಲೀನರ್, ಅಡುಗೆ ಭಟ್ಟರೆಂಬ ಏಕವ್ಯಕ್ತಿ ಪ್ರದರ್ಶನ ಎಂದೂ ಯಶಸ್ವಿಯಾಗದಿದ್ದುದರಿಂದ ಆ ಆಸೆಯನ್ನು ಅಲ್ಲೇ ಕೊನೆಗಾಣಿಸಿದ.
ಅಪ್ಪ ಆಗಾಗ ಪೇಪರ್ ತಿದ್ದಲೆಂದು ಕಲ್ಲಿಕೋಟೆಗೆ ಹೋಗುತ್ತಿದ್ದರು. ಅಲ್ಲೊಮ್ಮೆ ಹೊಟೇಲ್ಲಿಗೆ ಹೋದಾಗ ಯಾವ ತಿಂಡಿಯೂ ಇರದೇ ದೋಸೆ ಒಂದೇ ಇದೆ ಅಂದಾಗ, ಬೇರೆ ಯೋಚನೆ ಮಾಡದೇ “ಅದನ್ನೇ ತಾ’ ಎಂದರು. ಅದರ ರುಚಿಗೆ ಮಾರುಹೋಗಿ “ಇನ್ನೊಂದು’ ಎಂದರೆ ಮೊಟ್ಟೆ ಖಾಲಿ ಅಂದನಂತೆ. ಶುದ್ಧ ಸಸ್ಯಾಹಾರಿಯಾದ ಅಪ್ಪನಿಗೆ ತಿಂದದ್ದು ಒಳಗೆ ಹೋಗದು, ಹೊರಗೆ ಬಾರದು.
ಬಹುಶಃ ಈ ಘಟನೆಯ ನಂತರವೇ ಇರಬೇಕು, ಹೊಟೇಲ್‌ನಲ್ಲಿ ಶುಚಿತ್ವಕ್ಕೆ ಅಷ್ಟೊಂದು ಪ್ರಾಮುಖ್ಯ ಕೊಡುವುದಿಲ್ಲ, ಆರೋಗ್ಯಕ್ಕೆ ಒಳ್ಳೆಯದಲ್ಲ, ದೋಸೆ ಪಾತ್ರೆಯೊಳಗೆ ಕಂಕುಳವರೆಗೂ ಕೈ ಹಾಕಿ ಹಿಟ್ಟು ಕಲಸುತ್ತಾರೆ- ಮುಂತಾದ ಕಾರಣಗಳನ್ನು ಹೇಳಿ ಹೊಟೇಲಿಗೆ ಹೋಗುವುದನ್ನು ತಪ್ಪಿಸಿದ್ದರು. ಹೊಟೇಲಿನಲ್ಲಿ ಒಬ್ಬರಿಗಾಗುವ ಬಿಲ್ಲಿನ ಹಣದಲ್ಲಿ ಮನೆಮಂದಿಯೆಲ್ಲ ಹೊಟ್ಟೆ ತುಂಬಾ ತಿನ್ನಬಹುದು ಎಂದು ಹೇಳುವ ಅರ್ಥಶಾಸ್ತ್ರಜ್ಞರಾದರು. ಆದರೂ ಹೊಟೇಲ್ಲಿನ ರುಚಿ ಮನೆ ತಿಂಡಿಗೆ ಬಾರದು ಎಂದರೆ, ನಾಳೆ ನಿಮಗೆ ಒಂದೇ ಮಸಾಲೆದೋಸೆ ಮಾಡಿಕೊಡುವೆ, ಆಗ ಹೊಟೇಲಿನದ್ದೇ ರುಚಿ ಬರುತ್ತದೆ ಎಂಬ ಸವಾಲು ಅವರದ್ದು ಮರುಗಳಿಗೆಯಲ್ಲಿ.
ಈಗ ಅಪ್ಪನ ಈ ಮರಿಹಕ್ಕಿಗಳು ರೆಕ್ಕೆ ಬಲಿತು ಬೆಂಗಳೂರಿಗೆ ಹಾರಿಬಂದು, ಹೊಸ ಗೂಡೊಂದನ್ನು ಕಟ್ಟಿಕೊಂಡ ಮೇಲೆ ಅವರ ಕಿವಿಮಾತುಗಳಿಗೆ ಜಾಣಕಿವುಡು, ಜಾಣಮರೆವು ಬಾಧಿಸುತ್ತಿದೆ. ಇಡ್ಲಿಗೇ ಒಂದು, ದೋಸೆಗೇ ಒಂದು, ಚಾಟ್‌ಗೆà ಒಂದು, ಲಸ್ಸಿಗೆ ಒಂದು ಎಂದು ದಿನಕ್ಕೊಂದು ರಸ್ತೆಯಲ್ಲಿ ಹೊಸ ಹೊಟೇಲ್ ಹುಟ್ಟಿಕೊಳ್ಳುತ್ತಿದ್ದರೆ ಹೋಗದಿರುವುದಾದರೂ ಹೇಗೆ? ಇವುಗಳಲ್ಲಿ ಹೆಚ್ಚಿನವು ಉಡುಪಿ ಮೂಲದವು ಎಂಬುದು ನನ್ನ ತೂಕವನ್ನು (ದೇಹ ತೂಕವಲ್ಲ) ತುಸು ಹೆಚ್ಚಿಸಿದೆ. ಶುಚಿತ್ವಕ್ಕೆ ಮೊದಲ ಆದ್ಯತೆ ಕೊಟ್ಟು, ಅಡುಗೆಗೆ, ಕುಡಿಯಲು ಎಕ್ವಾ ಗಾರ್ಡ್ ವಾಟ ರ್, ಬಳಸುವ ಎಣ್ಣೆ, ತುಪ್ಪ, ಗೋಧಿಹಿಟ್ಟು, ಹಾಲು ಎಲ್ಲವೂ ಇದೇ ಬ್ರಾಂಡ್‌ನದ್ದು ಎಂದು ಗ್ರಾಹಕರ ಕಣ್ಣಿಗೆ ರಾಚುವಂತೆ ಅಂಟಿಸಿದ ಬರಹ ಎದುರೇ ರಾರಾಜಿಸುತ್ತದೆ. ಮಕ್ಕಳಿಗೆ ಹೊರಗಿನ ತಿಂಡಿ ಆರೋಗ್ಯಕ್ಕೆ ಹಾಳು ಎಂದರೆ ಕೈ ಹಿಡಿದುಕೊಂಡು ಹೋಗಿ ಪೋಸ್ಟರನ್ನು ತೋರಿಸಿ, “ನೀನು ಮನೆಯಲ್ಲಿ ಉಪಯೋಗಿಸುವ ಸಾಮಾನುಗಳನ್ನೇ ಇಲ್ಲಿ ಉಪಯೋಗಿಸುವುದು’ ಎಂದಾಗ ತಪ್ಪಿಸಿಕೊಳ್ಳಲು ಬೇರೆ ಕಾರಣ ಹುಡುಕಬೇಕಾಗಿದೆ.ಒಂದು ಡಬಲ್ಲು, ಎರಡು ಸಿಂಗಲ್ಲು, ಬೈಟು, ಮಿಕ್ಸು, ಒಂದ್ ಸ್ಪೆಶಲ್ ಎಂಬ ಕೋಡ್ ವರ್ಡ್‌ಗಳ ಹಿಂದಿನ ಮರ್ಮ ನನಗರ್ಥವಾಗಿದೆ. ಗಣ್ಯಾತಿಗಣ್ಯರು ಇಷ್ಟಪಟ್ಟು ಹೋಗುವ, ಇಂಟರ್‌ನೆಟ್‌ನ್ನು ಜಾಲಾಡಿದಾಗ ಸಿಗುವ ಹೊಟೇಲುಗಳನ್ನು ಹುಡುಕಿಕೊಂಡು ಹೋಗುವ ಚಾಪಲ್ಯಮನಸ್ಸಿನಲ್ಲಿ ಉಂಟಾಗುತ್ತದೆ. ಯಾವುದೇ ಬ್ಲಾಗುಗಳನ್ನು ಹಿಂಬಾಲಿಸಿದರೂ, ಎಷ್ಟೇ ಕುಕ್ಕರಿ ಕ್ಲಾಸಿಗೆ ಹೋದರೂ ರೆಸ್ಟೋರೆಂಟ್ ಶೈಲಿಯ ರುಚಿ ನನ್ನ ಅಡುಗೆಗೆ ಬರಲಿಲ್ಲ ಅನ್ನಿಸುತ್ತದೆ. ಆದಾಗ್ಯೂ ದಿನವೂ ಹೊಟೇಲ್ ಖಾದ್ಯಗಳನ್ನೇ ತಿನ್ನುವ ಅವಕಾಶ ಸಿಕ್ಕರೆ ನಾನು ಖಂಡಿತ ಉಪಯೋಗಿಸಿಕೊಳ್ಳಲಾರೆ. ಏಕೆಂದರೆ, ತಿಪ್ಪರಲಾಗ ಹಾಕಿಯಾದರೂ ಹೊಟೇಲ್ ರುಚಿಯ ಆಹಾರವನ್ನು ಮನೆಯಲ್ಲಿ ತಯಾರಿಸಬಹುದು, ಆದರೆ ಮನೆಅಡುಗೆಯಲ್ಲಿರುವಂಥ ಹಿತ, ಹಗುರವಾದ ಮತ್ತು ಬಾಂಧವ್ಯ, ಆತ್ಮೀಯತೆಯ ಒಗ್ಗರಣೆಯಿರುವ ಆಹಾರ ಯಾವ ಹೊಟೇಲಿನಲ್ಲಿ ಸಿಗಬಲ್ಲದು!
ಶ್ರೀರಂಜನಿ