ಎಲ್ಲಾ ಸರಿ, ಹೊಸಬರು ಕರೆದರೆ ಶಿವಣ್ಣ ಬರ್ತಾರಾ? ಹಾಗೊಂದು ಪ್ರಶ್ನೆಯನ್ನು ನಿರೂಪಕ ಕೇಳಿಯೇಬಿಟ್ಟರು. ಮೈಕು ಶಿವರಾಜಕುಮಾರ್ ಅವರ ಕೈಯಲ್ಲೇ ಇತ್ತು. “ನಾನಂತೂ 24 ಗಂಟೆ ಸಿಗ್ತಿàನಿ. ಎಷ್ಟೋ ಜನ ಬಂದು ಮಾತಾಡಿಸ್ತಾರೆ. ಸೆಲ್ಫಿ ತೆಗೆಸಿಕೊಳ್ತಾರೆ. ಹಾಗೇನಿಲ್ಲ. ನಾನು ಸಿಗೋದು ಸುಲಭ. ಯಾರು ಬೇಕಾದರೂ ಸಂಪರ್ಕ ಮಾಡಬಹುದು’ ಅಂತ ಶಿವರಾಜಕುಮಾರ್ ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಜೋರು ಚಪ್ಪಾಳೆ.
ಅಂದಹಾಗೆ, ಶಿವರಾಜಕುಮಾರ್ ಅವರಿಗೆ ಪ್ರಶ್ನೆ ಕೇಳಿದ್ದು, ಅವರು ಉತ್ತರ ಕೊಟ್ಟಿದ್ದು, ಇವೆಲ್ಲವೂ ಆಗಿದ್ದು “ಒಂಥರಾ ಬಣ್ಣಗಳು’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಕಿರಣ್ ಶ್ರೀನಿವಾಸ್, ಪ್ರತಾಪ್ ನಾರಾಯಣ್, ಪ್ರವೀಣ್, ಸೋನು, ಹಿತ ಚಂದ್ರಶೇಖರ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಶಿವರಾಜಕುಮಾರ್ ಮತ್ತು ಸುದೀಪ್ ಒಟ್ಟಿಗೆ ಬಿಡುಗಡೆ ಮಾಡಬೇಕಿತ್ತು. ಆದರೆ, ಶಿವರಾಜಕುಮಾರ್ ಅವರು ಬೇಗ ಹೋಗಬೇಕಿದ್ದರಿಂದ ಮತ್ತು ಸುದೀಪ್ ಸ್ವಲ್ಪ ತಡವಾಗಿ ಬಂದಿದ್ದರಿಂದ, ಬೇರೆ ಬೇರೆ ಬಿಡುಗಡೆ ಮಾಡುವಂತಾಯಿತು.
ಚಿತ್ರದ ಟ್ರೇಲರ್ ಮತ್ತು ಒಂದು ಹಾಡು ತೋರಿಸಿಯೇ, ಶಿವರಾಜಕುಮಾರ್ ಅವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಟ್ರೇಲರ್ ಮತ್ತು ಹಾಡು ಮೆಚ್ಚಿಕೊಂಡ ಅವರು, “ಚಿತ್ರದ ಹೆಸರೇ ಬಹಳ ಚೆನ್ನಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಹಲವು ಬಣ್ಣಗಳಿರುತ್ತವೆ. ನಾವೆಲ್ಲಾ ಬಣ್ಣಗಳಲ್ಲೇ ತೇಲುತ್ತಿರುತ್ತೀವಿ. ಚಿತ್ರ ನೋಡಬೇಕು ಅಂತ ಮನಸ್ಸಾಗುತ್ತಿದೆ. ನಾನು ಬಾಯಿ ಮಾತಿಗೆ ಹೇಳುತ್ತಿಲ್ಲ. ಮನಸಾರೆ ಹೇಳುತ್ತಿದ್ದೀನಿ. ಚಿತ್ರದ ಪ್ರಮೋಷನ್‌ಗೆ ಕರೆದರೆ ನಾನು ಬರುತ್ತೀನಿ’ ಎಂದರು. ಎಲ್ಲರ ಬಗ್ಗೆಯೂ ಎರಡೆರೆಡು ಮಾತುಗಳಾಡುವಷ್ಟರಲ್ಲಿ ಸಭಿಕರ ಮಧ್ಯೆ, ಗಾಯಕ ಸಂಜಿತ್ ಹೆಗ್ಡೆ ಅವರನ್ನು ಗಮನಿಸಿದ ಶಿವರಾಜಕುಮಾರ್, ಅವರನ್ನು ವೇದಿಕೆ ಮೇಲೆ ಕರೆಸಿದರು. ಡಾ. ರಾಜಕುಮಾರ್ ಹಾಡಿರುವ “ಯಾವ ಕವಿಯು ಬರೆಯಲಾರ …’ ಹಾಡನ್ನು ಹಾಡಿಸುವುದರ ಜೊತೆಗೆ, ತಾನು ಸಂಜಿತ್ ಅವರ ಫ್ಯಾನ್ ಎಂದು ಹೇಳಿಕೊಂಡರು.
ಆ ನಂತರ ಮೈಕು ಚಿತ್ರತಂಡದವರ ಕೈಗೆ ಹೋಯಿತು. ಇಂಥದ್ದೊಂದು ಚಿತ್ರವನ್ನು ಬಿಟ್ಟಿದ್ದರೆ ತಾನು ಮುಠಾuಳನಾಗುತ್ತಿದ್ದೆ ಎಂದವರು ಕಿರಣ್ ಶ್ರೀನಿವಾಸ್. “ಪ್ರಾಮಾಣಿಕ ಜನ ಮಾಡಿರುವ ಪ್ರಾಮಾಣಿಕ ಸ್ಕ್ರಿಪ್ಟ್ ಇದು. ನಾನು ಮಿಸ್ ಮಾಡಿಕೊಂಡಿದ್ದರೆ ಮುಠಾuಳನಾಗುತ್ತಿದ್ದೆ. ಈ ಚಿತ್ರಕ್ಕಾಗಿ ಹಲವು ಕಡೆ ಪ್ರಯಾಣ ಮಾಡಿದ್ದೇವೆ. ಪಾತ್ರದ ಜೊತೆಗೆ ವೈಯಕ್ತಿಕವಾಗಿ ನನ್ನನ್ನು ನಾನು ಕಂಡುಕೊಳ್ಳುವಂತಾಯಿತು’ ಎಂದರು. ಪ್ರವೀಣ್‌ಗೆ ನಿರ್ದೇಶಕ ಸುನೀಲ್ ಭೀಮರಾವ್ ಒಮ್ಮೆ ಕೋಪ ಮಾಡಿಕೊಳ್ಳುವುದನ್ನು ನೋಡುವ ಆಸೆ ಇತ್ತಂತೆ. ಆದರೆ, ಒಮ್ಮೆಯೂ ಅದು ಸಾಧ್ಯವಾಗಲಿಲ್ಲ ಎಂದು ಬೇಸರಿಸಿಕೊಂಡರು. ನಿರ್ದೇಶಕರು ಒಮ್ಮೆಯಾದರೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಬೆಟ್ ಕಟ್ಟಿ ಸೋತಿದ್ದನ್ನು ಕಿರಣ್ ನೆನಪಿಸಿಕೊಂಡರು. ಇನ್ನು ಪ್ರತಾಪ್, “ಸಿನಿಮಾ ಶುರುವಾಗಿದ್ದು, ಮುಗಿಸಿದ್ದು ಒಂದೂ ಗೊತ್ತಾಗಲಿಲ್ಲ. ಇದೊಂದು ಅದ್ಭುತ ಅನುಭವ. ನಾನು ಹೆಚ್ಚು ಬೆರೆಯುವವನಲ್ಲ. ಈ ಚಿತ್ರದಿಂದ ತುಂಬಾ ಕಲಿತೆ’ ಎಂದರು. ನಾಯಕಿಯರಾದ ಸೋನು ಮತ್ತು ಹಿತ ಚಿತ್ರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಪಟ್ಟರು.