Advertisement

ಒಂದು ಜಿಲ್ಲೆ ಒಂದು ಕ್ರೀಡೆ: ದ.ಕ. ಜಿಲ್ಲೆಯಲ್ಲಿ ಆ್ಯತ್ಲೆಟಿಕ್ಸ್‌ಗೆ ಪ್ರೋತ್ಸಾಹ: ನಾಗೇಂದ್ರ

12:02 AM Jan 14, 2024 | Team Udayavani |

ಮಂಗಳೂರು: “ಒಂದು ಜಿಲ್ಲೆ- ಒಂದು ಕ್ರೀಡೆ’ ಪರಿಕಲ್ಪನೆಯಲ್ಲಿ ದ.ಕ. ಜಿಲ್ಲೆಯಲ್ಲಿ ಆ್ಯತ್ಲೆಟಿಕ್ಸ್‌ಗೆ
ಹೆಚ್ಚಿನ ಪ್ರೋತ್ಸಾಹ ನೀಡಲು ನಿರ್ಧ ರಿಸಲಾಗಿದೆ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ನಾಗೇಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ದ.ಕ. ಜಿಲ್ಲೆಯಲ್ಲಿ ಆ್ಯತ್ಲೆಟಿಕ್ಸ್‌ಗೆ ಬೇಕಾದ ಮೈದಾನ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

ಕೊರಗ, ಮಲೆಕುಡಿಯ
ಜನಾಂಗದ ಅಭಿವೃದ್ಧಿ
ದ.ಕ. ಜಿಲ್ಲೆಯಲ್ಲಿರುವ ಕೊರಗ ಹಾಗೂ ಮಲೆಕುಡಿಯ ಜನಾಂಗದ ಏಳಿಗೆ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರ ಹಾಡಿಗಳಿಗೆ ತೆರಳಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದೇನೆ. ಅವರ ಕುಂದುಕೊರತೆಗಳನ್ನು ತಿಳಿದುಕೊಂಡು ಪೌಷ್ಟಿಕ ಆಹಾರವೇ ಮೊದಲಾದ ಅಗತ್ಯ ನೆರವು ನೀಡಲಾಗುವುದು. ಇವರಿಗೆ ಆರು ತಿಂಗಳು ಇದ್ದ ಪೌಷ್ಟಿಕ ಆಹಾರ ಪೂರೈಕೆಯನ್ನು ಈಗ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಅವರೆಲ್ಲ ಅರಣ್ಯದಂಚಿನಲ್ಲಿ ವಾಸಿಸುತ್ತಿದ್ದು, ಅವರಿಗೆ ಪಟ್ಟಾ ಜಾಗ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಲಾಖೆಗೆ ಕ್ರಿಕೆಟ್‌ ಸೇರ್ಪಡೆ ಯತ್ನ
ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಕ್ರಿಕೆಟ್‌ ಸೇರ್ಪಡೆಯಾಗಿಲ್ಲ. ಅದನ್ನು ಸೇರ್ಪಡೆಗೊಳಿಸಿದರೆ ಆಗ ಕ್ರಿಕೆಟ್‌ ಸ್ಟೇಡಿಯಂ ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಿಸಿಸಿಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಕ್ರೀಡಾ ಇಲಾಖೆಗೆ
ಇರುವ ಆಸ್ತಿಯನ್ನು ಇಲಾಖೆ ಯಲ್ಲೇ ಉಳಿಸಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮಂಗಳೂರು ಪಾಲಿಕೆಯ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಸೇರಿದಂತೆ ಯಾವುದೇ ಜಾಗವನ್ನು ಮರಳಿ ಇಲಾಖೆ ಯಿಂದ ಹೊರಗೆ ನೀಡುವುದಿಲ್ಲ ಎಂದರು.

Advertisement

ಶ್ರೀರಾಮ ಎಲ್ಲರ ದೇವರು
ಶ್ರೀರಾಮ ಎಲ್ಲ ಭಾರತೀಯರ ದೇವರು. ರಾಮ ಮಂದಿರ ನಿರ್ಮಾಣ ನೆಹರೂ ಪ್ರಧಾನಿ ವೇಳೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿತ್ತು. ಈಗ ರಾಮನನ್ನು ಬಿಜೆಪಿ ರಾಜಕೀಯಗೊಳಿಸಲು ಹೊರಟಿದೆ, ನಾನು ಕೂಡ ಚಿಕ್ಕಂದಿನಲ್ಲಿ ರಾಮ ಭಜನೆ ಮಾಡುತ್ತಾ ಬೆಳೆದವ. ಆದರೆ ಕಾಂಗ್ರೆಸಿಗರಿಗೆ ಕೋಮು ಭಾವನೆಯ ರಾಮ ಬೇಡ, ರಾಮ, ಸೀತೆ, ಲಕ್ಷ್ಮಣ, ಭರತ, ಅಳಿಲು ಸೇವೆ ಮಾಡಿದ ಜಾಂಬವ ಹೀಗೆ ಎಲ್ಲರೂ ಇದ್ದ ರಾಮ ನಮಗೆ ಬೇಕು. ರಾಮ ಮಂದಿರ ಬಿಜೆಪಿಗರ ಸ್ವತ್ತಲ್ಲ ಎಂದರು.

ಕಾಂಗ್ರೆಸ್‌ನ ತತ್ವ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬರುವವರಿಗೆ ಸ್ವಾಗತವಿದೆ. ನಾನು ಜೆಡಿಎಸ್‌ ಮುಖಂಡರ ಮನೆಗೆ ಊಟಕ್ಕೆ ತೆರಳಿದ್ದೇ ವಿನಃ ರಾಜಕೀಯ ಚರ್ಚೆಗೆ ಅಲ್ಲ. ಒಂದೊಂದು ಭಾಗದಲ್ಲಿ ಪಕ್ಷದ ಅದರದ್ದೇ ಆದ ರಾಜಕೀಯ ಶಕ್ತಿ ಇದ್ದು, ಶಕ್ತಿ ತುಂಬುವ ಸಲುವಾಗಿ ಪಕ್ಷಕ್ಕೆ ಸೇರುತ್ತಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮಾಜಿ ಸದಸ್ಯ ಐವನ್‌ ಡಿ’ಸೋಜಾ, ಮುಖಂಡರಾದ ಪಿ.ವಿ. ಮೋಹನ್‌, ಸಂತೋಷ್‌, ಪ್ರವೀಣ್‌ಚಂದ್ರ, ನಝೀರ್‌ ಬಜಾಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next