Advertisement

ವಿದ್ಯುತ್‌ ಪ್ರವಹಿಸಿ ಓರ್ವ ಸಾವು; 8 ಮಂದಿಗೆ ಗಾಯ

03:11 PM Jul 19, 2018 | Team Udayavani |

ಮಂಗಳೂರು: ಮೆಸ್ಕಾಂನ ವಿದ್ಯುತ್‌ ಕಂಬ ಹಾಕುವ ಕಾಮಗಾರಿ ವೇಳೆ ವಿದ್ಯುತ್‌ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆ ಬಜಪೆ ಸಮೀಪದ ಕರಂಬಾರಿನಲ್ಲಿ ಬುಧವಾರ ಸಂಭವಿಸಿದೆ.
ತೆಂಕ ಎಡಪದವು ಕಣ್ಣೋರಿಯ ನಿವಾಸಿ ಗಣೇಶ್‌ (58) ಮೃತರು. ಮಿಜಾರಿನ ಧನಂಜಯ, ವಿಶ್ವನಾಥ, ಗೋಪಾಲ, ಆನಂದ, ದಿನೇಶ್‌, ಮೋಹನ್‌, ಎಡಪದವಿನ ಕೃಷ್ಣ, ಪದ್ಮನಾಭ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖ ಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಿನೇಶ್‌ ಮತ್ತು ವಿಶ್ವನಾಥ ಅವರ ಸ್ಥಿತಿ ಗಂಭೀರವಾಗಿದೆ.

Advertisement

ಮರವೂರಿನಿಂದ ಬಜಪೆವರೆಗಿನ ವಿದ್ಯುತ್‌ ಲೈನ್‌ನಲ್ಲಿ ಕಂಬಗಳ ಅಂತರ ಜಾಸ್ತಿ ಇದ್ದು, ಮಧ್ಯೆ ಹೆಚ್ಚುವರಿ ಕಂಬಗಳನ್ನು ಹಾಕಿ ವಿದ್ಯುತ್‌ ಲೈನ್‌ ಬಲಪಡಿಸಲು ತನ್ವಿ ಎಲೆಕ್ಟ್ರಿಕಲ್ಸ್‌ ಗುತ್ತಿಗೆ ವಹಿಸಿಕೊಂಡಿದೆ. ಬುಧವಾರ ಬೆಳಗ್ಗೆ ಮರವೂರು ಜಂಕ್ಷನ್‌ನ ಬಸ್‌ ನಿಲ್ದಾಣದ ಬಳಿ ಹೊಂಡಕ್ಕೆ ಕಂಬವನ್ನು ಇಳಿಸುವಾಗ ಕಂಬದ ಇನ್ನೊಂದು ತುದಿ ಹೈಟೆನ್ಶನ್‌ ವಿದ್ಯುತ್‌ ತಂತಿಗೆ ಸ್ಪರ್ಶಿಸಿ ಬುಡದಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್‌ ಅವರಿಗೆ ತಗುಲಿದೆ. ಆಘಾತದಿಂದ ಸ್ಥಳದಲ್ಲೇ ಮೃತಪಟ್ಟರು. ಹಗ್ಗ ಹಿಡಿದವರಿಗೂ ವಿದ್ಯುತ್‌ ಸ್ಪರ್ಶವಾಗಿ ಅವರು ಹಗ್ಗವನ್ನು ಕೈಬಿಟ್ಟರು. ಕಂಬ ತಂಡಾಗಿ ನೆಲಕ್ಕೆ ಅಪ್ಪಳಿಸಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯರು  ಸಹಕರಿಸಿದರು.

ವಿದ್ಯುತ್‌ ಪ್ರವಹಿಸಿದ್ದು ಹೇಗೆ?
ವಿದ್ಯುತ್‌ ಲೈನ್‌ ಕಾಮಗಾರಿ ನಿರ್ವಹಿಸುವಾಗ ವಿದ್ಯುತ್‌ ಪ್ರವಾಹವನ್ನು ಕಡಿತ ಮಾಡಬೇಕೆಂಬುದು ನಿಯಮ. ಮರವೂರಿನಲ್ಲಿ ಬುಧವಾರ ಕಂಬ ಹಾಕುವ ಕೆಲಸ ಮಾಡುವಾಗಲೂ  ವಿದ್ಯುತ್‌ ಸಂಪರ್ಕ ಕಡಿತ ಮಾಡಿದ ಬಳಿಕ ಕೆಲಸ ಆರಂಭಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ವಿದ್ಯುತ್‌ ಪ್ರವಹಿಸಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. 

ನಿರ್ಲಕ್ಷ ಆರೋಪ
ಕೆಲಸ ಮಾಡಿಸುವಾಗ ವಿದ್ಯುತ್‌ ಸಂಪರ್ಕವನ್ನು ಕಡಿತ ಮಾಡದೆ ನಿರ್ಲಕ್ಷ ವಹಿಸಿದ ಆರೋಪದ ಮೇಲೆ ಮೆಸ್ಕಾಂ ಅಧಿಕಾರಿ ವಿರುದ್ಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ಪತ್ರೆ ಆವರಣದಲ್ಲಿ ಹಾಜರಿದ್ದ ಮೃತರ ಮತ್ತು ಗಾಯಾಳು ಸಂಬಂಧಿಕರು ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಸ್ಥಳಕ್ಕೆ  ಭೇಟಿ
ಡಿಸಿಪಿ ಹನುಮಂತರಾಯ, ಮೆಸ್ಕಾಂ ಹೆಚ್ಚುವರಿ ಮುಖ್ಯ ಇಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ಜಾವೇದ್‌ ರಬ್ಟಾನಿ, ಮೆಸ್ಕಾಂ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಮಂಜಪ್ಪ, ಲೈಸೆನ್ಸ್‌ಡ್‌ ವಿದ್ಯುತ್‌ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪಿ. ಶಿವಕುಮಾರ್‌ ಪೈಲೂರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಜತೆ ಘಟನೆಯ ಬಗ್ಗೆ ಮಾಹಿತಿ ಪಡೆದರು.

Advertisement

ಗೃಹಪ್ರವೇಶವಾಗಿ ತಿಂಗಳು! 
ಗಣೇಶ್‌ ತೆಂಕ ಎಡಪದವಿನ ಕಣ್ಣೋರಿಯ ವಟ್ಟು ಗೌಡ ಮತ್ತು ವೆಂಕಮ್ಮ ಅವರ ಪುತ್ರರಾಗಿದ್ದು, ಕಳೆದ ಕೆಲವು ವರ್ಷಗಳಿಂದ ತನ್ವಿ ಎಲೆಕ್ಟ್ರಿಕಲ್ಸ್‌ನಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಪತ್ನಿ ಜಯಂತಿ ಕೂಡ ಕೂಲಿಗೆ ಹೋಗುತ್ತಿದ್ದಾರೆ. ಅವರಿಗೆ ಇಬ್ಬರು ಮಕ್ಕಳು- ಓರ್ವ ಪುತ್ರಿ ಮತ್ತು ಓರ್ವ ಪುತ್ರ. ಪುತ್ರಿ ಅಂಗಡಿಯೊಂದರಲ್ಲಿ ಕೆಲಸ ಮಾಡು ತ್ತಿದ್ದರೆ ಪುತ್ರ ಅಸೌಖ್ಯದಿಂದ ಬಳಲುತ್ತಿದ್ದು, ದಿನನಿತ್ಯ ಔಷಧ ಸೇವಿಸಬೇಕಾಗಿದೆ. ಗಣೇಶ್‌ ಅವರು ಹೊಸ ಮನೆಯನ್ನು ಕಟ್ಟಿಸಿದ್ದು, ಕಳೆದ ಜೂನ್‌ 18 ರಂದು ಗೃಹ ಪ್ರವೇಶ ನಡೆದಿತ್ತು. ಈ ಸಮಾರಂಭ ನಡೆದು ಒಂದು ತಿಂಗಳಾಗುವಷ್ಟರಲ್ಲಿ ಈ ದುರಂತ ಸಂಭವಿಸಿದೆ.

ಕೂಲಂಕಷ‌ ಪರಿಶೀಲನೆ
ಅವಘಡ ನಡೆದ ಸ್ಥಳಕ್ಕೆ ಎಂಜಿನಿಯರ್‌ಗಳನ್ನು ಕಳುಹಿಸಿದ್ದೇವೆ. ಘಟನೆ ಯಾವ ರೀತಿಯಾಗಿದೆ ಎಂಬ ಬಗ್ಗೆ ಕೂಲಂಕಷ‌ ಪರಿಶೀಲನೆ ನಡೆಸಲಾಗುವುದು. ಆ ವರದಿಯ ಪ್ರಕಾರ ಪರಿಹಾರ ನೀಡಲಾಗುವುದು. ಅಷ್ಟೇ ಅಲ್ಲದೆ, ಮಾನವೀಯ ನೆಲೆಯಲ್ಲಿಯೂ ಪರಿಹಾರ ನೀಡಲು ಅವಕಾಶವಿದೆ.
ಮಂಜಪ್ಪ
ಮೆಸ್ಕಾಂ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ 

Advertisement

Udayavani is now on Telegram. Click here to join our channel and stay updated with the latest news.

Next