Advertisement
ಅದೊಂದು ಕಾಲವಿತ್ತು. ಏಕದಿನ ಕ್ರಿಕೆಟ್ ತಲಾ 60 ಓವರ್‌ಗಳ ಪಂದ್ಯವಾಗಿದ್ದರೂ ಅಲ್ಲಿ ಮುನ್ನೂರು ರನ್ನಿಗೂ ಬರಗಾಲವಿತ್ತು. ಭಾರತದ ಸುನೀಲ್ ಗಾವಸ್ಕರ್ ವಿಶ್ವಕಪ್‌ನಲ್ಲಿ ಭರ್ತಿ 60 ಓವರ್ ಆಡಿ ಅಜೇಯ 36 ರನ್ ಹೊಡೆದ ದಾಖಲೆ ಈಗಲೂ ತಮಾಷೆಯಾಗಿ ಕಾಣುತ್ತಿದೆ!ಆದರಿದು ಟಿ20 ಜಮಾನಾ. ಹೊಡಿಬಡಿ ಆಟಗಾರರ ಸುಗ್ಗಿ. ಸಹಜವಾಗಿಯೇ ಇದು ಉಳಿದೆರಡು ಮಾದರಿಯ ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಏಕದಿನದಲ್ಲಿ ಸಲೀಸಾಗಿ 400 ರನ್ ಹರಿದು ಬರುತ್ತಿದೆ.
ಏಕದಿನ ಇತಿಹಾಸದಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಗಳಿಕೆ 6ಕ್ಕೆ 481 ರನ್. ಇದು ಬಲಿಷ್ಠರಿಬ್ಬರ ಕದನದ ವೇಳೆ ಕಂಡುಬಂದ ಸಾಹಸವೆಂಬುದು ಉಲ್ಲೇಖನಿಯ. ವಿಶ್ವ ದಾಖಲೆಯ ಈ ಮೊತ್ತವನ್ನು ಪೇರಿಸಿದ ತಂಡ ಇಂಗ್ಲೆಂಡ್. ಎದುರಾಳಿ, ವಿಶ್ವ ಚಾಂಪಿ ಯನ್ ಆಗಿದ್ದ ಆಸ್ಟ್ರೇಲಿಯ. ಆಂಗ್ಲರ ಈ ಸಾಹಸಕ್ಕೆ ಶುಕ್ರವಾರ ಭರ್ತಿ ಎರಡು ವರ್ಷ ತುಂಬಿತು. 2018ರ ಜೂ. 19ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮುಖಾಮುಖಿಯಲ್ಲಿ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಮುರಿದು ಮುನ್ನುಗ್ಗಿತ್ತು. ಮೊದಲು ಬ್ಯಾಟಿಂಗ್ ನಡೆಸುವ ಅವಕಾಶ ಪಡೆದ ಆತಿಥೇಯ ಪಡೆ ಬರೋಬ್ಬರಿ 481 ರನ್ ಸೂರೆಗೈದಿತು. ಕಾಂಗರೂ ಬೌಲಿಂಗ್ ದಿಕ್ಕಾಪಾಲಾಗಿತ್ತು. ಬೇರ್‌ಸ್ಟೊ 139, ಹೇಲ್ಸ್ 147, ರಾಯ್ 82, ನಾಯಕ ಮಾರ್ಗನ್ 30 ಎಸೆತಗಳಿಂದ 67 ರನ್ ಬಾರಿಸಿದ್ದರು. ಆಸ್ಟ್ರೇಲಿಯ 239ಕ್ಕೆ ಕುಸಿದು ಇಂಗ್ಲೆಂಡ್ ಎದುರು ದೊಡ್ಡ ಸೋಲಿಗೆ ತುತ್ತಾಯಿತು (242 ರನ್).
Related Articles
Advertisement