ವಿಜಯಪುರ: ಜಿಲ್ಲೆಯಲ್ಲೂ ಹಿಜಾಬ್- ಕೇಸರಿ ಶಾಲು ಧರಿಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೋಮವಾರ ಕಾಲೇಜುಗಳಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾಲೇಜು ಆಡಳಿತ ಮಂಡಳಿ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಆಗಮಿಸುವಂತೆ ತಾಕೀತು ಮಾಡಿ, ಇಂದು ಕಾಲೇಜುಗಳಿಗೆ ರಜೆ ಘೋಷಿಸಿವೆ.
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಎರಡು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದ ಬೆನ್ನಲ್ಲೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದಾರೆ.
ಇಂಡಿ ಪಟ್ಟಣದ ಶಾಂತೇಶ್ವರ ಪಿಯುಸಿ ಕಾಲೇಜು ಹಾಗೂ ಜಿ.ಆರ್.ಬಿ ಪದವಿ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕೇಸರಿ ಶಾಲು – ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಇದರಿಂದ ಕಾಲೇಜು ಆವರಣದಲ್ಲಿ ವಿವಾದ ತಲೆದೋರಿದೆ. ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ತುರ್ತು ಸಭೆ ನಡೆಸಿದ ಎರಡೂ ಕಾಲೇಜುಗಳ ಆಡಳಿತ ಮಂಡಳಿ, ಸೋಮವಾರ ಒಂದು ದಿನದ ಮಟ್ಟಿಗೆ ಕಾಲೇಜುಗಳಿಗೆ ರಜೆ ಘೋಷಿಸಿವೆ.
ಇದನ್ನೂ ಓದಿ:ಬಸವನಾಡಿಗೂ ಕಾಲಿಟ್ಟ ಸಮವಸ್ತ್ರ ವಿವಾದ: ಕೇಸರಿ ಶಾಲು ಧರಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು
ಮಂಗಳವಾರದಿಂದ ಕಾಲೇಜುಗಳಿಗೆ ಸರ್ಕಾರ ಜಾರಿ ಮಾಡಿರುವ ನಿಯಮದಂತೆ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ತಾಕೀತು ಮಾಡಲಾಗಿದೆ.