Advertisement

ಒಂದು ದಿನದ ಮೌಲ್ಯಮಾಪನ ಬಹಿಷ್ಕಾರ

01:25 PM Dec 27, 2017 | Team Udayavani |

ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ 2006ರ ನಂತರ ನೇಮಕಗೊಂಡ ಪ್ರಾಧ್ಯಾಪಕರಿಗೆ ಬಾಕಿ ವೇತನ ನೀಡಬೇಕು ಹಾಗೂ ಅತಿಥಿ ಉಪನ್ಯಾಸಕರಿಗೆ 30 ಸಾವಿರ ಮಾಸಿಕ ವೇತನಕ್ಕೆ ಆಗ್ರಹಿಸಿ ಬೆಂವಿವಿ ವ್ಯಾಪ್ತಿ ಕಾಲೇಜುಗಳ ಮೌಲ್ಯಮಾಪಕರು ಮಂಗಳವಾರ ಮೌಲ್ಯಮಾಪನ ಬಹಿಷ್ಕರಿಸಿ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮೌಲ್ಯಮಾಪನ ಬಹಿಷ್ಕಾರ: ವಿಶ್ವವಿದ್ಯಾಲಯ ಅನುದಾನ ಆಯೋಗವು 6ನೇ ವೇತನ ಆಯೋಗದ ಪರಿಷ್ಕೃತ ವೇತನವನ್ನು ಬಿಡುಗಡೆ ಮಾಡಿದ್ದರೂ, ಕಾಲೇಜು ಶಿಕ್ಷಣ ಇಲಾಖೆಯಿಂದ ಸರ್ಕಾರಿ, ಅನುದಾನಿತ ಹಾಗೂ ವಿವಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 2006ರ ನಂತರ ನೇಮಕಗೊಂಡ ಪ್ರಾಧ್ಯಾಪಕರಿಗೆ ಪೂರ್ಣ ಪ್ರಮಾಣದ ವೇತನ ನೀಡುತ್ತಿಲ್ಲ.

ಹಾಗೆಯೇ ಅತಿಥಿ ಉಪನ್ಯಾಸಕರು ಮಾಸಿಕ 12 ಸಾವಿರ ರೂ.ಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಈ ತಾರತಮ್ಯ ನಿವಾರಣೆ ಮಾಡಬೇಕು ಎಂದು ಆಗ್ರಹಿಸಿ ಬೆಂವಿವಿ ಪ್ರಾಧ್ಯಾಪಕರ ಸಂಘದ ವತಿಯಿಂದ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ದಿನದ ಮಟ್ಟಿಗೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ಆದೇಶ ವಾಪಸ್‌ಗೆ ಆಗ್ರಹ: ಸರ್ಕಾರದಿಂದ ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಭವಿಷ್ಯದಲ್ಲಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿಯವರಿಗೆ  ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಮೇಲ್ಮನೆ ಸದಸ್ಯರಾದ ಬಸವರಾಜ ಹೊರಟ್ಟಿ, ರಮೇಶ್‌ ಬಾಬು, ಪುಟ್ಟಣ್ಣ, ಮರಿತಿಬ್ಬೇಗೌಡ ಮೊದಲಾದವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಪ್ರಾಧ್ಯಾಪಕರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಈಗಾಗಲೇ ನೀಡಿರುವ ಭತ್ಯೆಯನ್ನು ವಸೂಲಿ ಮಾಡುವ ಪ್ರವೃತ್ತಿ ಕೈಬಿಡಬೇಕು. ಈ ಸಂಬಂಧ ಹೊರಡಿಸಿದ್ದ ಆದೇಶ ವಾಪಾಸ್‌ ಪಡೆಯುವಂತೆ ಮೇಲ್ಮನೆ ಸದಸ್ಯ ರಮೇಶ್‌ ಬಾಬು ಆಗ್ರಹಿಸಿದರು.

Advertisement

ಫ‌ಲಿತಾಂಶ ವಿಳಂಬ: ಮೌಲ್ಯಮಾಪಕರು ಪ್ರತಿಭಟನೆ ಮಾಡುವ ವಿಷಯ ಗೊತ್ತಿದ್ದರೂ, ವಿವಿಯಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಹೀಗಾಗಿ ಇದು ಫ‌ಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ. ಮುಂದಿನ ಸೆಮಿಸ್ಟರ್‌ ತರಗತಿಗಳು ಜ.10ರಿಂದ ಆರಂಭವಾಗಲಿದೆ ಎಂಬುದನ್ನು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟರೊಳಗೆ ಫ‌ಲಿತಾಂಶ ನೀಡಬೇಕಾಗುತ್ತದೆ. ಮೌಲ್ಯಮಾಪನ ವಿಳಂಬವಾದರೆ ಫ‌ಲಿತಾಂಶ ಕೂಡ ವಿಳಂಬವಾಗಲಿದೆ.

ಚಿಲ್ಲರೆ ಸಂಗ್ರಹ: ವಿದ್ಯಾರ್ಥಿಗಳ ದಾಖಲಾತಿ ವೇಳೆ ವಿಶ್ವವಿದ್ಯಾಲಯಕ್ಕೆ ನೀಡಬೇಕಿದ್ದ ಪೂರ್ತಿ ಹಣದಲ್ಲಿ ಚಿಲ್ಲರೆ ಹಣ ನೀಡದೇ ಇರುವ ಕಾಲೇಜುಗಳಿಂದ ಬಾಕಿ ಹಣ ಸಂಗ್ರಹಿಸುವ ಕಾರ್ಯಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಮುಂದಾಗಿದೆ. 2004-05ನೇ ಸಾಲಿನಿಂದ 25ರೂ., 35 ರೂ., 90 ರೂ.ಗಳಿಂದ 55 ಸಾವಿರ ರೂ. ವರೆಗೂ ನೀಡಲು ಬಾಕಿ ಇದೆ.

ಬಾಕಿ ಇಟ್ಟುಕೊಂಡಿರುವ ಹಣವನ್ನು ಅತಿಶೀಘ್ರದಲ್ಲೇ ವಿವಿಗೆ ಸಲ್ಲಿಸುವಂತೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆ ವೇಳೆ ಬಾಕಿ ಇರುವ ಮೊತ್ತದ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಂವಿವಿ ವ್ಯಾಪ್ತಿಯ ಸುಮಾರು 43 ಕಾಲೇಜುಗಳು ಬಾಕಿಹಣ ನೀಡಬೇಕಿದೆ ಎಂದು ವಿವಿ ಮೂಲದಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next