Advertisement

ಪುರದಲ್ಲಿ ಕೋಟಿ ಲಿಂಗಗಳ ದರ್ಶನ

09:26 PM Mar 11, 2021 | Team Udayavani |

ತಾವರಗೇರಾ: ಸಮೀಪದ ಪುರ ಗ್ರಾಮವು ಕೋಟಿ ಲಿಂಗಗಳಿಗೆ ಹೆಸರಾಗಿದೆ. ಈ ಐತಿಹಾಸಿಕ ಕೋಟಿಲಿಂಗಗಳ ದೇವಸ್ಥಾನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದರೂ ಭಕ್ತಿಯ ಸೇವೆಗೆ ಮಾತ್ರ ಕೊರತೆಯಾಗಿಲ್ಲ. ಪ್ರತಿವರ್ಷ ಶಿವರಾತ್ರಿ ಅಮಾವಾಸ್ಯೆ ಮತ್ತು ಶಿವಯೋಗ ದಿನ ವಿಶೇಷ ಪೂಜೆ ನಡೆಯುತ್ತವೆ.

Advertisement

ಪುರ ಗ್ರಾಮವು ರಾಜಕೀಯ, ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಇಲ್ಲಿಯ ಸೋಮನಾಥ ದೇವಾಲಯವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿರಬಹುದು. ಕ್ರಿ.ಶ.1469ರಲ್ಲಿ ಪ್ಲವಂಗನಾಮ ಸಂವತ್ಸರದ ಪುಷ್ಯ ಬಹುಳ ಬಿದಿಗೆ ದಿನ ಈ ದೇವಾಲಯವನ್ನು ವಿಜಯನಗರದ ಎರಡನೇ ದೊರೆ ವೀರಪ್ರತಾಪ ಸದಾಶಿವರಾಯ ಕಟ್ಟಿಸಿದರೆಂದು ಶಾಸನದ ಮೂಲಕ ತಿಳಿದಿದೆ. ಕ್ರಿ.ಶ. 1018ರ ಶಾಸನ, ಕ್ರಿ.ಶ 12ನೇ ಶತಮಾನ ಶಾಸನ, ಕ್ರಿ.ಶ. 1172ರ ಶಾಸನ, ಕ್ರಿ.ಶ. 1406, 1446ರ ಶಾಸನ, ಕ್ರಿ.ಶ 15 ಶತಮಾನದ ಶಾಸನ ಮತ್ತು 1547ರ ಶಾಸನಗಳು ಈ ಗ್ರಾಮದಲ್ಲಿ ಸಿಕ್ಕಿವೆ.

ಸಾಂಸ್ಕೃತಿಕ ಹಿನ್ನಲೆ: ಪುರ ಗ್ರಾಮ ಪ್ರದೇಶದ ಶಾಸನಗಳು ಮತ್ತು ನೆಲೆಗಳು, ನಾಣ್ಯಗಳು, ದೇವಾಲಯಗಳನ್ನು ಗಮನಿಸಿದಾಗ ನಂದರು, ಮೌರ್ಯರನ್ನೊಳಗೊಂಡು, ಶಾತವಾಹನರು, ಕದಂಬರು,  ಬಾದಾಮಿ ಚಾಲುಕ್ಯರು, ಗಂಗರು, ರಾಷ್ಟ್ರ ಕೂಟರು, ಕಲ್ಯಾಣ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ಸಿಂಧರು, ಮಾಂಡಳಿಕರು, ಆಳರಸರು, ಮನ್ನೆಯರು, ನಾಡರರಸರು, ವಿಜಯನಗರದ ಅರಸರು, ಮಹ್ಮದಿಯರು ಹಾಗೂ ಬ್ರಿಟಿಷರ ಆಡಳಿತಕ್ಕೊಳ ಪಟ್ಟಿರುವುದಾಗಿ ತಿಳಿಯುತ್ತದೆ. ವೀರಗಲ್ಲು, ಗೋಗ್ರಹಣದ ವೀರಗಲ್ಲು ಹೀಗೆ ಅನೇಕ ವಿಶೇಷ ಶಿಲ್ಪ ಕಲಾಕೃತಿ ಹೊಂದಿರುವ ಐತಿಹಾಸಿಕ ಹಿನ್ನೆಲೆ ಹೊಂದಿದೆ.

ಕೋಟಿ ಶಿವ ಲಿಂಗಗಳು: ಮುಖ ಮಂಟಪದೆದುರಿಗೆ 4 ಶಿವಲಿಂಗಗಳಲ್ಲಿ ಒಟ್ಟು 44 ಲಿಂಗಗಳನ್ನು ರೂಪಿಸಲಾಗಿದೆ. ಈ ದೇವಾಲಯದಲ್ಲಿ 7 ಬಾವಿಗಳು, 7 ಹನುಮಂತ ವಿಗೃಹಗಳಿವೆ. ಅವೆಲ್ಲವನ್ನು ನೋಡಿದರೆ ಮುಕ್ತಿ ಸಿಗುವುದೆಂದು ಸ್ಥಳೀಯರ ನಂಬಿಕೆ. ದೇವಾಲಯದ 63 ಪುರಾತನರ ಪ್ರತೀಕದ ಸಾಲುಗಳಲ್ಲಿ 12 ಕಮಾನುಗಳಲ್ಲಿ 40 ಲಿಂಗುಗಳಿವೆ. ತಲಾ ಒಂದರಲ್ಲಿ ಒಂದರಿಂದ 40ರವರೆಗೆ 46 ಲಿಂಗಗಳಿದ್ದು, 6ರಿಂದ 7ರ ಮಧ್ಯೆ 6 ಲಿಂಗಗಳು, 7ರಿಂದ 8ರ ಮಧ್ಯೆ 5, 8ರಿಂದ 9ರ ಮಧ್ಯೆ 3, 9ರಿಂದ 10 ಮಧ್ಯೆ 4, 10ರಿಂದ 11ರ ಮಧ್ಯೆ 3, 11ರಿಂದ 12 ರ ಮಧ್ಯೆ 4, ಹೀಗೆ ಎಣಿಕೆ ಮಾಡುತ್ತ ಹೋದರೆ ಕೋಟಿಗಿಂತ ಹೆಚ್ಚು ಲಿಂಗಗಳ ದರ್ಶನವಾಗಲಿದೆ. ಜಿಲ್ಲೆಯ ಅಪರೂಪದ ಈ ಪುರ ದೇವಸ್ಥಾನಕ್ಕೆ ಸರ್ಕಾರ ಮೂಲ ಸೌಲಭ್ಯ ಒದಗಿಸಿ ಈ ಐತಿಹಾಸಿಕ ಸ್ಥಳ ಸಂರಕ್ಷಿಸಬೇಕಿದೆ.

ಎನ್‌ ಶಾಮೀದ್‌ ತಾವರಗೇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next