Advertisement

ಆರ್ ಎಸ್ಎಸ್ ಅಂಗಳದಲ್ಲಿ ಬೆಳೆದ ಸಾವಂತ್ ಮತ್ತೆ ಸಿಎಂ ಆಗ್ತಾರಾ?

04:11 PM Feb 10, 2022 | Team Udayavani |

ಪಣಜಿ: ಬಿಜೆಪಿ ಯುವ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರ್ರಿಕರ್ ರವರ ರಾಜಕೀಯ ಉತ್ತರಾಧಿಕಾರಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಬಿಜೆಪಿ ಪ್ರಸಕ್ತ ಗೋವಾ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದ್ದು, ಸಿಎಂ ಸಾವಂತ್ ಆರ್ ಎಸ್ ಎಸ್ ಅಂಗಳದಲ್ಲಿ ಬೆಳೆದು, ಸಂಘದ ಹಿನ್ನೆಲೆ ಹೊಂದಿದ ಏಕೈಕ ಶಾಸಕರಾಗಿದ್ದಾರೆ.

Advertisement

ಗೋವಾದ 13 ನೇ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ರವರು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ ರಾಜ್ಯದ ಏಕೈಕ ಬಿಜೆಪಿ ಶಾಸಕರಾಗಿದ್ದಾರೆ. ಗೋವಾ ಮುಖ್ಯಮಂತ್ರಿಯಾಗುವ ಮೊದಲು ಅವರು ಪಕ್ಷದ ವಕ್ತಾರರಾಗಿ, ರಾಜ್ಯ ವಿಧಾನಸಭೆಯ ಸಭಾಪತಿಗಳಾಗಿ ಕೆಲಸ ನಿರ್ವಹಿಸಿದ್ದರು. 2017 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದಾಗ ಅವರನ್ನು ವಿಧಾನಸಭೆಯ ಸಭಾಪತಿಗಳನ್ನಾಗಿ ಆಯ್ಕೆ ಮಾಡಲಾಗಿತ್ತು. ಪ್ರಮೋದ ಸಾವಂತ್ ರವರು ಮನೋಹರ್ ಪರ್ರಿಕರ್ ರವರ ಆಪ್ತರಾಗಿದ್ದರು. ಇದರಿಂದಾಗಿ ಪರ್ರಿಕರ್ ನಿಧನ ಹೊಂದಿದ ನಂತರ ಪ್ರಮೋದ ಸಾವಂತ್ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು.

ಪ್ರಮೋದ ಸಾವಂತ್ 24 ಏಪ್ರಿಲ್ 1973 ರಂದು ಜನಿಸಿದರು. ಸಾವಂತ್ ರವರು ಗೋವಾದ ಬಿಚೋಲಿಯ ಕೊಟಂಬಿ ಗ್ರಾಮದವರು. ಅವರು ಆಯುರ್ವೇದ ವೈದ್ಯಕೀಯ ಕಾಲೇಜು, ಗಂಗಾ ಏಜ್ಯುಕೇಶನ್ ಸೊಸೈಟಿ ಕೊಲ್ಲಾಪುರ, ಮಹಾರಾಷ್ಟ್ರದಲ್ಲಿ ಆಯುರ್ವೇದ, ಔಷಧ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪದೆದವರು. ನಂತರ ಪುಣೆಯ ತಿಲಕ್ ಮಹಾರಾಷ್ಟ್ರ ವಿಶ್ವವಿದ್ಯಾಲಯದಿಂದ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಮುಖ್ಯಮಂತ್ರಿ ಪ್ರಮೋದ ಸಾವಂತ್ ವೃತ್ತಿಯಲ್ಲಿ ವೈದ್ಯರು. ಬಾಲ್ಯದಿಂದಲೂ ಆರ್‍ಎಸ್‍ಎಸ್ ನೊಂದಿಗೆ ಸಂಪರ್ಕ ಹೊಂದಿದವರು. ಇವರ ತಂದೆ ಪಾಂಡುರಂಗ ಸಾವಂತ್ ಜಿಪಂ ಮಾಜಿ ಸದಸ್ಯರಾಗಿದ್ದಾರೆ. ಮುಖ್ಯಮಂತ್ರಿ ಸಾವಂತ್ ರವರ ಪತ್ನಿ ಸುಲಕ್ಷಣಾ ಸಾವಂತ್ ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖರಾಗಿದ್ದಾರೆ. ಬಿಜೆಪಿ ಹಲವರ ಕೋರಿಕೆಯ ಮೇರೆಗೆ ಪ್ರಮೋದ ಸಾವಂತ್ 2008 ರಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದರು.

ಪ್ರಮೋದ ಸಾವಂತ್ ಆ ಸಂದರ್ಭದಲ್ಲಿ ಮಾಪ್ಸಾದ ಉತ್ತರ ಜಿಲ್ಲಾ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ನಂತರ ತಮ್ಮ ಸರ್ಕಾರಿ ಕೆಲಸವನ್ನು ತೊರೆದು ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಫರ್ಧಿಸಿದರು. ಆದರೆ ಆ ಉಪಚುನಾವಣೆಯಲ್ಲಿ ಸೋತರೂ ಕೂಡ 2012 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಜಯಭೇರಿ ಬಾರಿಸಿದರು.

Advertisement

2017 ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಗೋವಾ ವಿಧಾನಸಭೆಗೆ ಪ್ರಮೋದ ಸಾವಂತ್ ಆಯ್ಕೆಯಾದರು. ಅಂದು ಮನೋಹರ್ ಪರ್ರಿಕರ್ ನೇತೃತ್ವದ ಸರ್ಕಾರದಲ್ಲಿ ವಿಧಾನಸಭಾ ಸಭಾಪತಿಗಳಾಗಿ ಆಯ್ಕೆಯಾದರು. ಗೋವಾ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಸ್ಫೀಕರ್ ಆಗಿದ್ದರು.

ಮನೋಹರ್ ಪರ್ರಿಕರ್ ನಿಧನದ ನಂತರ ಗೋವಾ ಮುಖ್ಯಮಂತ್ರಿ ಸ್ಥಾನ ತೆರವಾಗಿತ್ತು. ನಂತರ 19 ಮಾರ್ಚ 2019 ರಂದು ಗೋವಾದ 13 ನೇಯ ಮುಖ್ಯಮಂತ್ರಿಯಾಗಿ ಪ್ರಮೋದ ಸಾವಂತ್ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಪ್ರಮೋದ ಸಾವಂತ್ ರವರಿಗೆ 2022 ರ ವಿಧಾನಸಭಾ ಚುನಾವಣೆಯಲ್ಲಿ ನಿಜವಾದ ಪರೀಕ್ಷೆ ಎದುರಾಗಿದ್ದು ತಮ್ಮ ಅಭಿವೃದ್ಧಿ ಕಾರ್ಯದ ಬಲದಿಂದ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಪ್ರಸಕ್ತ ಬಾರಿ ಗೋವಾದಲ್ಲಿ ಬಿಜೆಪಿಯು ಮುಖ್ಯಮಂತ್ರಿ ಪ್ರಮೋದ ಸಾವಂತ್ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದೆ.ರಾಜ್ಯದ ಜನತೆ ಮತ್ತೆ ಪ್ರಮೋದ ಸಾವಂತ್ ನೇತೃತ್ವದ ಬಿಜೆಪಿ ಕೈ ಹಿಡಿಯಲಿದ್ದಾರೆಯೇ? ಎಂಬ ಕುತೂಹಲ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next