Advertisement

ಒಂದೂವರೆ ತಾಸು ಝೀರೊ ಟ್ರಾಫಿಕ್‌

09:51 AM May 02, 2018 | Team Udayavani |

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಉಡುಪಿ ಭೇಟಿಯ ನಿಮಿತ್ತ ನಗರದ ಆದಿ ಉಡುಪಿ- ಮಣಿಪಾಲ ರಸ್ತೆಯಲ್ಲಿ ಮೋದಿ ಮತ್ತವರ ಬೆಂಗಾವಲು ವಾಹನ ಬಿಟ್ಟರೆ ಮತ್ಯಾವ ವಾಹನವೂ ರಸ್ತೆಗಿಳಿಯದಂತೆ ಒಂದೂವರೆ ತಾಸು ಝೀರೊ ಟ್ರಾಫಿಕ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

ಹೆಲಿಪ್ಯಾಡ್‌ನ‌ಲ್ಲಿ ಬಿಜೆಪಿಯ ಕೆ.ರಾಘವೇಂದ್ರ ಕಿಣಿ ಅವರು ಮೋದಿಯವರನ್ನು ಸ್ವಾಗತಿಸಿದರು. ನಯನಾ ಗಣೇಶ್‌, ಪೂರ್ಣಿಮಾ ಸುರೇಶ್‌, ಕಿರಣ್‌ ಕೊಡ್ಗಿ, ರವಿರಾಜ್‌ ಹೆಗ್ಡೆ, ಸತೀಶ್‌ ಶೆಟ್ಟಿ ಮುಟ್ಲುಪಾಡಿ, ಗುರುಪ್ರಸಾದ್‌ ಶೆಟ್ಟಿ ಇದ್ದರು. ಹೆಲಿಪ್ಯಾಡ್‌ನ‌ ಒಳಗಿದ್ದ ಬಿಜೆಪಿಯ ನಾಯಕರಿಗೆ ಹೊರಬರಲು ಅವಕಾಶ ಇರಲಿಲ್ಲ. ಮೋದಿ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಮರಳುವ ತನಕವೂ ಅವರು ಹೆಲಿಪ್ಯಾಡ್‌ನೊಳಗೆಯೇ ಇರಬೇಕಾಯಿತು. ವಿಶೇಷ ಭದ್ರತಾ ಪಡೆ, ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಹಾಗೂ ಮೋದಿಯನ್ನು ಸ್ವಾಗತಿಸಲಿದ್ದ ಬಿಜೆಪಿಯ ಕೆಲವು ಮಂದಿ ಹೊರತುಪಡಿಸಿದರೆ ಮಾಧ್ಯಮಗಳಿಗಾಗಲಿ, ಇತರ ಯಾರಿಗೂ ಹೆಲಿಪ್ಯಾಡ್‌ ಬಳಿಗೆ ಸುಳಿಯಲು ಅವಕಾಶ ವಿಲ್ಲದಂತೆ ಭದ್ರತೆ ಅನುಸರಿಸಲಾಗಿತ್ತು. ಹೆಲಿಕಾಪ್ಟರ್‌ ಭೂಸ್ಪರ್ಶ ಮಾಡುತ್ತಲೇ ಪೊಲೀಸರನ್ನು ಕೂಡ ದೂರ ಸರಿಯುವಂತೆ ಸೂಚಿಸಿದ್ದು, ಮೋದಿ ನಿಕಟ ಭದ್ರತೆಯು ಸಂಪೂರ್ಣ ಎಸ್‌ಪಿಜಿ ಸುಪರ್ದಿಯಲ್ಲಿತ್ತು.

ಮೋದಿ ಸಾಗಿದ ದಾರಿಯುದ್ದಕ್ಕೂ ಅಂಗಡಿ-ಮುಂಗಟ್ಟು ಮುಚ್ಚಲಾಗಿತ್ತು. ಯಾರೂ ರಸ್ತೆಗಿಳಿಯದಂತೆ ಬಿಗಿ ಬಂದೋಬಸ್ತ್ ಇತ್ತು. ರಾಷ್ಟ್ರೀಯ ವಿಶೇಷ ಭದ್ರತಾ ಪಡೆ, ಕಮಾಂಡೋಗಳು, ಕೇಂದ್ರೀಯ ಅರೆಸೇನಾ ಪಡೆ ಸಹಿತ ಪೊಲೀಸರು ಹೊಣೆ ಹೊತ್ತಿದ್ದರು. 

ಮಧ್ಯಾಹ್ನ 2.50ರ ಸುಮಾರಿಗೆ 3 ಸೇನಾ ಹೆಲಿಕಾಪ್ಟರ್‌ಗಳು ಆದಿಉಡುಪಿ ಹೆಲಿಪ್ಯಾಡ್‌ಗೆ ಆಗಮಿಸಿದವು. ಒಂದರಲ್ಲಿ ಮೋದಿ ಇದ್ದರೆ ಮತ್ತೆರಡರಲ್ಲಿ ಅಧಿಕಾರಿಗಳು, ಭದ್ರತಾ ಪಡೆಯವರು ಇದ್ದರು. ಸಂಜೆ 4ರ ಸುಮಾರಿಗೆ ಸಮಾವೇಶದಿಂದ ಹೊರಟ ಮೋದಿ 4.15ರ ಹೊತ್ತಿಗೆ ಉಡುಪಿಯಿಂದ ನಿರ್ಗಮಿಸಿದರು. ಸರಿಸುಮಾರು 2.40ರಿಂದ 4.20ರ ವರೊ ಉಡುಪಿ- ಮಣಿಪಾಲ ರಸ್ತೆ “ಝೀರೊ ಟ್ರಾಫಿಕ್‌’ ಆಗಿತ್ತು. ವಾಹನಗಳು ಮಾತ್ರವಲ್ಲ ವ್ಯಕ್ತಿಗಳು ಕೂಡ ರಸ್ತೆಗಿಳಿಯದಂತೆ ನಿಗಾ ವಹಿಸಲಾಗಿತ್ತು. ಹೆಲಿಪ್ಯಾಡ್‌ನಿಂದ ಎಂಜಿಎಂಗೆ ಹೋಗಬೇಕಾದವರು ನಡೆದುಕೊಂಡೇ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಸುಮಾರು ಒಂದು ತಾಸಿಗೂ ಅಧಿಕ ಕಾಲ ಉಡುಪಿ-ಮಣಿಪಾಲ ರಸ್ತೆ ಬಿಕೋ ಅನ್ನುತ್ತಿತ್ತು. ತುರ್ತು ಆವಶ್ಯಕತೆ ಇದೆ ಎಂದು ವಾಹನ ಸವಾರರು ಬೇಡಿಕೊಂಡರೂ ಭದ್ರತೆ ರಾಜಿಯಾಗಲಿಲ್ಲ.

ರಸ್ತೆಯುದ್ದಕ್ಕೂ ಜನ
ಮೋದಿಯ ಭಾಷಣವನ್ನು ಕೇಳಲು ಎಂಜಿಎಂ ಮೈದಾನದ ತುಂಬ ಜನ ಸೇರಿದ್ದರೆ, ಇತ್ತ ಹೆಲಿಪ್ಯಾಡ್‌ ಸುತ್ತಮುತ್ತ ಹಾಗೂ ಆದಿ ಉಡುಪಿ- ಎಂಜಿಎಂ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಜನರು ಕಾತರದಿಂದ ಕಾಯುತ್ತಿದ್ದರು. ಜನರು ನೂಕುನುಗ್ಗಲು ಸೃಷ್ಟಿಸಿ ರಸ್ತೆಯತ್ತ ಬಾರದಂತೆ ಅಲ್ಲಲ್ಲಿ ಕಬ್ಬಿಣದ ಜಾಲರಿಯನ್ನು ಪೊಲೀಸರು ಅಳವಡಿಸಿದ್ದರು. ಉರಿಬಿಸಿಲನ್ನೂ ಲೆಕ್ಕಿಸದೆ ಬೆವರೊರೆಸಿಕೊಂಡು ಜನ ಕಾತರ ದಿಂದ ಕಾಯುತ್ತಿದ್ದರು. 

Advertisement

ನಿಧಾನವಾಗಿ ಸಾಗಿತು ಮೋದಿ ಕಾರು
ಕಾಪ್ಟರ್‌ನಿಂದ ಪ್ರಧಾನಿ ಇಳಿಯುತ್ತಲೇ ಮೈದಾನದ ಸುತ್ತಲೂ ಸೇರಿದ್ದ ಜನರು ಮೋದಿ… ಮೋದಿ… ಎಂದು ಜೈಕಾರ ಹಾಕಿದರು. ಇದನ್ನು ಕಂಡ ಮೋದಿ ಜನರತ್ತ ಕೈಬೀಸಿದರು. ಹೊಸದಿಲ್ಲಿಯಿಂದ ಮೊದಲೇ ಆಗಮಿಸಿದ್ದ ಕಪ್ಪು ಬಣ್ಣದ ಗುಂಡು ನಿರೋಧಕ ರೇಂಜ್‌ ರೋವರ್‌ ಕಾರಿನಲ್ಲಿ ಮೋದಿ ಎಂಜಿಎಂ ಮೈದಾನದತ್ತ ಪಯಣ ಬೆಳೆಸಿದರು. ನಿಧಾನವಾಗಿ ಸಾಗುತ್ತಿದ್ದ ಕಾರಿನ ಮುಂಭಾಗದಲ್ಲಿ ಕುಳಿತಿದ್ದ ಅವರು ಜನರತ್ತ ಕೈಬೀಸುತ್ತಲೇ ಸಾಗಿದರು.

ಆದಿಉಡುಪಿ ಹೆಲಿಪ್ಯಾಡ್‌ಗೆ ಸಾಮಾನ್ಯ ಕಾಪ್ಟರ್‌ಗಳು ಬಂದು ಲ್ಯಾಂಡ್‌ ಆಗುವಾಗ ಸಾಧಾರಣವಾಗಿ ಧೂಳು ಏಳುತ್ತಿತ್ತು. ಆದರೆ ಮಂಗಳವಾರ ಆಗಮಿಸಿದ್ದು ದೊಡ್ಡ ಗಾತ್ರದ ಶಕ್ತಿಶಾಲಿ ಸೇನಾ ಕಾಪ್ಟರ್‌. ಅದರ ಭೂಸ್ಪರ್ಶದ ವೇಳೆ ಗಾಳಿಯ ತೀವ್ರತೆಗೆ ಪೊಲೀಸರೆಲ್ಲ ಧೂಳಿನಿಂದ ಆವೃತರಾದರು. ಸಣ್ಣ ಬ್ಯಾರಿಕೇಡ್‌ಗಳು ಮಗುಚಿ ಬಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next