Advertisement

ಒಂದೂವರೆ ಕೋಟಿ ಮೌಲ್ಯದ ವಾಹನ ವಶಕ್ಕೆ

03:52 PM Sep 04, 2021 | Team Udayavani |

ಬೆಂಗಳೂರು: ವಾಹನ ನಿಲ್ದಾಣ ಪ್ರದೇಶದಲ್ಲಿ ನಿಲುಗಡೆ ಮಾಡಿದ್ದ ಮಿನಿ ಲಾರಿಗಳು, ಕಾರುಗಳ ಗಾಜು ಹೊಡೆದು ಡೈರೆಕ್ಟ್ ಮಾಡಿಕೊಂಡು ಕದ್ದು, ಅವುಗಳ ನಂಬರ್‌ ಪ್ಲೇಟ್‌ ಬದಲಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಶಿವಮೊಗ್ಗ ಮೂಲದ ನಿಹಾಲ್‌ ಅಲಿಯಾಸ್‌ ಇರ್ಫಾನ್‌ (53), ಭಾಸ್ಕರ್‌ (32),ಶಾಹಿದ್‌ (35), ಹಿದಾಯತ್‌ (34) ಬಂಧಿತರು.ಆರೋಪಿಗಳಿಂದ 1.5 ಕೋಟಿ ರೂ. ಮೌಲ್ಯದ 9 ಮಿನಿ ಲಾರಿ,1 ಕಾರು ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿ ನಿಹಾಲ್‌ ಪ್ರಕರಣದ ಮಾಸ್ಟರ್‌ ಮೈಂಡ್ ಆಗಿದ್ದು, ಕಳೆದ 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಅಂತಾರಾಜ್ಯ ವಾಹನ ಕಳ್ಳನಾಗಿರುವ ನಿಹಾಲ್‌ ವಾಹನ ಕಳವು, ಮಾರಾಟ, ಖರೀದಿ
ಮಾಡುವುದನ್ನು ಕರಗತ ಮಾಡಿಕೊಂಡಿದ್ದಾನೆ.

ಅಲ್ಲದೆ, ದೇಶದ ವಿವಿಧೆಡೆ ಹಲವು ಗ್ಯಾಂಗ್‌ ಗಳನ್ನು ಕಟ್ಟಿಕೊಂಡಿದ್ದು, ರಸ್ತೆ ಅಪಘಾತವಾಗಿರುವ, ಗುಜರಿಗೆ ಬಂದಿರುವ ವಾಹನಗಳ ನಂಬರ್‌ ಹಾಗೂ ಚಾಸಿಸ್‌ ನಂಬರ್‌ ತೆಗೆದು ಕದ್ದ ವಾಹನಗಳಿಗೆ ಅಳವಡಿಸುತ್ತಿದ್ದ. ನಂತರ ಇನ್ಸೂರೆನ್ಸ್‌ ಕಂಪನಿ ಸಿಬ್ಬಂದಿ ಜತೆ ಸೇರಿ ಆ ವಾಹನಗಳಿಗೆ ನೈಜ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ.

ಕದ್ದ ವಾಹನಗಳನ್ನು 6-8 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದ ಎಂಬುದು ಪತ್ತೆಯಾಗಿದೆ.ಅಕ್ರಮ ಸಂಪಾದನೆಯಲ್ಲಿಯೇ ಶಿವಮೊಗ್ಗ, ಹುಬ್ಬಳ್ಳಿ, ಗೋವಾದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಮನೆ ಕಟ್ಟಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

10 ವರ್ಷಗಳ ಬಳಿಕ ಬಂಧನ: ನಿಹಾಲ್‌ ಅಲಿಯಾಸ್‌ ಇರ್ಫಾನ್‌ನನ್ನು ಸಿಸಿಬಿ ಪೊಲೀಸರು 2010ರಲ್ಲಿ ಬಂಧಿಸಿ, ಈತನಿಂದ 40 ವಾಹನ ಗಳನ್ನು ಜಪ್ತಿ ಮಾಡಿದ್ದರು.ಕೃತ್ಯಕ್ಕೆಈತನ ಸಹೋದರ ಅಕ್ರಮ್‌ ಅಲಿಯಾಸ್‌ ವಿಕ್ರಮ್‌ ಸಹ ಸಾಥ್‌ ಕೊಟ್ಟಿದ್ದ. ಸಹೋದರರ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟ ವ್ಯಕ್ತಿಯನ್ನು 2011ರಲ್ಲಿ ಅಕ್ರಮ್‌, ಹತ್ಯೆಗೈದಿದ್ದ. ಈ ಸಂಬಂಧ ಸಿಸಿಬಿ ಪೊಲೀಸರು ಅಕ್ರಮ್‌ನ್ನು ಎನ್‌ಕೌಂಟರ್‌ ಮಾಡಿದ್ದರು. ಬಳಿಕ ನಿಹಾಲ್‌ ಸಿಕ್ಕಿರಲಿಲ್ಲ. ತನ್ನ ಸುಳಿವು ಸಿಗಬಾರದು ಎಂಬ ಕಾರಣಕ್ಕೆ15 ದಿನಗಳಿಗೊಮ್ಮೆ ಮೊಬೈಲ್‌ ಸಿಮ್‌ ಕಾರ್ಡ್‌ ಬದಲಾಯಿಸುತ್ತಿದ್ದ.

Advertisement

ಪೊಲೀಸರಿಗೆ ತನ್ನ ಬಗ್ಗೆ ಸಣ್ಣ ಸುಳಿವೂ ಸಿಗದಂತೆ ಎಚ್ಚರಿಕೆ ವಹಿಸಿದ್ದ. ಆತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 9 ವಾಹನ ಕಳವು ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ದೆಹಲಿಯಲ್ಲಿ ಹೊಸ ಕಾರನ್ನು ಕದ್ದು ರಾಜ್ಯದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಬೋಟ್ ನಿಂತಿದೆ.. ನಮಗೆ ಸಮಸ್ಯೆ ನೂರಿದೆ

ಸಿಕ್ಕಿದ್ದು ಹೇಗೆ?: ದೊಡ್ಡಯ್ಯ ಗಾರ್ಡನ್‌ನ ಟೆಕ್ನೋ ಸೆಟಿಂಗ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜು ಜು.10ರಂದು ಸಂಜೆ6 ಗಂಟೆಗೆ ಕಂಪನಿಯ ಆವರಣದಲ್ಲಿ ಮಿನಿ ಲಾರಿ ಪಾರ್ಕ್‌ ಮಾಡಿ ಹೋಗಿದ್ದರು. ಜು.11ರಂದು ವಾಹನ ಕಳ್ಳತನವಾಗಿತ್ತು. ಕೂಡಲೇ ಈ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಭಾಸ್ಕರ್‌ನನ್ನು ಮೊದಲಿಗೆ ಬಂಧಿಸಿದ್ದರು. ಆತ ಕೊಟ್ಟ ಮಾಹಿತಿ ಮೇರೆಗೆ ಶಾಹಿದ್‌, ಹಿದಾಯತ್‌ನ್ನು ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ರಾಜ್ಯದ ವಿವಿಧೆಡೆ 9 ಮಿನಿ ಲಾರಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಜತೆಗೆ ಕದ್ದ ವಾಹನಗಳನ್ನು ನಿಹಾಲ್‌ಗೆ ಮಾರಾಟ ಮಾಡಿರುವುದಾಗಿ ಆತನ ಬಗ್ಗೆ ಮಾಹಿತಿ ಕೊಟ್ಟಿದ್ದರು. ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆತ ಗೋವಾದಲ್ಲಿ ಮನೆ ಹೊಂದಿರುವುದು ಗೊತ್ತಾಗಿತ್ತು. ಅಲ್ಲಿಗೆ ತೆರಳಿದಾಗ ಆತ ಹುಬ್ಬಳ್ಳಿಯಲ್ಲಿರುವ ಸುಳಿವು ಸಿಕ್ಕಿತ್ತು. ಕೂಡಲೇ ಹುಬ್ಬಳ್ಳಿಗೆ ತೆರಳಿದ ಕಾಮಾಕ್ಷಿಪಾಳ್ಯ ಪೊಲೀಸರ ತಂಡ ಆರೋಪಿ ನಿಹಾಲ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದಾರೆ.

ಮೂವರು ಸುಲಿಗೆಕೋರರ ಸೆರೆ
ದ್ವಿಚಕ್ರ ವಾಹನದಲ್ಲಿ ಒಂಟಿಯಾಗಿ ಓಡಾಡುವ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದಕಾನೂನು ಸಂಘರ್ಷಕ್ಕೊಳಗಾದ
ವ್ಯಕ್ತಿ ಸೇರಿ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಭಾಶ್‌, ಅಲಿ ಖಾನ್‌ ಮತ್ತುಕಾನೂನು ಸಂಘರ್ಷ ಕ್ಕೊಳಗಾದವನನ್ನು ಬಂಧಿಸಲಾಗಿದೆ. ಆರೋಪಿಗಳಿಂದ6.5 ಲಕ್ಷ ರೂ. ಮೌಲ್ಯದ21 ಮೊಬೈಲ್‌ಗ‌ಳು,1 ಕ್ಯಾಮೆರಾ,7 ದ್ವಿಚಕ್ರ ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಆಚಾರ್ಯ ಕಾಲೇಜು ಸಮೀಪದಲ್ಲಿ ವಿದ್ಯಾರ್ಥಿಯೊಬ್ಬನನ್ನು ಅಡ್ಡಗಟ್ಟಿ ಐದು ಸಾವಿರ ರೂ. ನಗದುಕಸಿದುಕೊಂಡು ಹೋಗಿದ್ದರು ಎಂದು ಪೊಲೀಸರು ಹೇಳಿದರು.

ಡೈರೆಕ್ಟ್ ಮಾಡಿ ಕಳವು
ಕಾರು, ಮಿನಿ ಲಾರಿಯ ಗ್ಲಾಸ್‌ ಪಕ್ಕದಲ್ಲಿರುವ ಬೀಡಿಂಗ್‌ ನ್ನು ಎತ್ತಿ ಬಾಗಿಲು ತಗೆಯುತ್ತಿದ್ದರು.ಬಳಿಕ ಲಾರಿಯೊಳಗೆ ಎಂಟ್ರಿಯಾಗಿ ಸ್ಟೇರಿಂಗ್‌ ಕೆಳಗಡೆ ಇರುವ ವೈಯರ್‌ ಗಳನ್ನು ಕಿತ್ತು ಡೈರೆಕ್ಟ್ ಮಾಡಿಕೊಂಡು ವಾಹನ ಸ್ಟಾರ್ಟ್‌ ಮಾಡಿಕೊಂಡು ಪರಾರಿಯಾಗುತ್ತಿದ್ದರು.ಕದ್ದ ತಕ್ಷಣ ಬೇರೆ ಗುಜರಿಗೆ ಬಿದ್ದಿರುವ ವಾಹನಗಳ ನಂಬರ್‌ ಪ್ಲೇಟ್‌,ಚಾಸಿಸ್‌ ನಂಬರ್‌ ಅಳವಡಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next