“ಹದಿಹರೆಯದಲ್ಲಿ ಹುಡುಗರು ಕಲಿಕೆಯ ಕಡೆಗೆ ತಮ್ಮ ಗಮನ ಹರಿಸದೆ, ಪ್ರೀತಿ-ಪ್ರೇಮದ ಕಡೆಗೆ ಮುಖ ಮಾಡಿದರೆ, ಅಂತಹವರ ಭವಿಷ್ಯ ಹಾಳಾಗುತ್ತದೆ’- ಕಿರಿಯರಿಗೆ ಇಂಥದ್ದೊಂದು ಕಿವಿಮಾತನ್ನು ಅನೇಕ ಹಿರಿಯರು ಹೇಳುವುದನ್ನು ನೀವು ಕೇಳಿರುತ್ತೀರಿ. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಚಿತ್ರತಂಡ, ಅದನ್ನು ಸಿನಿಮಾ ರೂಪದಲ್ಲಿ ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಒಂದ್ ಊರಲ್ಲಿ, ಒಂದ್ ಲವ್ ಸ್ಟೋರಿ’.
ಎಂ. ಪಿ ಅರುಣ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು “ಶ್ರೀ ವೀರಭದ್ರೇಶ್ವರ ಸಿನಿ ಕಂಬೈನ್ಸ್’ ಬ್ಯಾನರ್‌ನಲ್ಲಿ ಡಾ. ರೇವಣ್ಣ ಬಳ್ಳಾರಿ, ಕೆ. ಪ್ರಕಾಶ್ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸೆನ್ಸಾರ್‌ನಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ ಚಿತ್ರತಂಡ, ಇದೇ ಮೇ ತಿಂಗಳಿನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.
ಹಿರಿಯ ನಿರ್ದೇಶಕರಾದ ಜಿ. ಕೆ ಮುದ್ದುರಾಜ್, ಸುಧಾಕರ್ ಬನ್ನಂಜೆ, ಕಿರುತೆರೆ ನಟಿ ಅಶ್ವಿನಿ ಮುಂತಾದವರ ಸಮ್ಮುಖದಲ್ಲಿ “ಒಂದ್ ಊರಲ್ ಒಂದ್ ಲವ್ ಸ್ಟೋರಿ’ ಸಿನಿಮಾದ ಹಾಡುಗಳು ಹೊರಬಂದವು. ಯುವನಟ ಪೃಥ್ವಿ, ಪಲ್ಲವಿ, ಡಾ.ರೇವಣ್ಣ ಬಳ್ಳಾರಿ ಮೊದಲಾದವರು “ಒಂದ್ ಊರಲ್ ಒಂದ್ ಲವ್ ಸ್ಟೋರಿ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ನಟಿ ರೇಖಾ ವಿವಾಹವಾಗಲು ಮುಂದಾಗಿದ್ದ ಇಮ್ರಾನ್ ಖಾನ್: ಸುದ್ದಿ ಮತ್ತೆ ಮುನ್ನೆಲೆಗೆ
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ಮಾಪಕ ಮತ್ತು ನಟ ಡಾ.ರೇವಣ್ಣ ಬಳ್ಳಾರಿ, “ಹದಿಹರೆಯದಲ್ಲಿ ಹುಡುಗ- ಹುಡುಗಿಯ ನಡುವೆ ಮೂಡುವುದು ಕೇವಲ ಆಕರ್ಷಣೆಯಷ್ಟೇ ಎಂಬುವುದನ್ನು ಈ ಸಿನಿಮಾದಲ್ಲಿ ಹೇಳಿದ್ದೇವೆ. ಪ್ರೀತಿ ಮತ್ತು ವ್ಯಾಮೋಹದ ನಡುವಿನ ವ್ಯತ್ಯಾಸ, ಕುಟುಂಬಗಳ ಪರದಾಟ, ಜಾತೀಯತೆ ಹೀಗೆ ಹಲವಾರು ವಿಷಯಗಳನ್ನು ಕಥೆಯಲ್ಲಿ ಹೇಳಿದ್ದೇವೆ’ ಎಂದು ವಿವರಣೆ ಕೊಡುತ್ತಾರೆ.
ಚಿತ್ರದ 6 ಹಾಡುಗಳಿಗೆ ಎ.ಎಂ ನೀಲ್ ಸಂಗೀತ, ಕೆ. ಜೆ ಸ್ವಾಮಿ ಸಾಹಿತ್ಯವಿದೆ. ಚಿತ್ರಕ್ಕೆ ರವಿ ಛಾಯಾಗ್ರಹಣ, ಜೀವನ್ ಸಂಕಲನವಿದೆ. ದಾವಣಗೆರೆ ಸುತ್ತಮುತ್ತಲಿನ ತ್ಯಾವಣಿಗಿ, ಹದಡಿ, ಕೊಟ್ಟೂರು, ಕಾರಿಗನೂರು, ಕಂಚಿಕೆರೆ ಮುಂತಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.