“ಒಂದು ಗಂಟೆಯ ಕಥೆ’ ಎಂಬ ಸಿನಿಮಾದಲ್ಲಿ ಏನಿರಬಹುದು, ಯಾವ ವಿಷಯವನ್ನು ಹೇಳಿರಬಹುದು ಎಂಬ ಒಂದು ಕುತೂಹಲವಿತ್ತು. ಈ ವಾರ ಚಿತ್ರ ತೆರೆಕಂಡು ಕುತೂಹಲಕ್ಕೆ ತೆರೆಬಿದ್ದಿದೆ. ಈ ಸಿನಿಮಾದಲ್ಲೊಂದು ಕಥೆ ಇದೆ. ಜೊತೆಗೆ ಚಿಂತಿಸಬೇಕಾದ, ಎಚ್ಚೆತ್ತುಕೊಳ್ಳಬೇಕಾದ ಸಾಕಷ್ಟು ಅಂಶಗಳನ್ನು ಕೂಡಾ ನಿರ್ದೇಶಕರು ಹೇಳಿದ್ದಾರೆ.
ಆದರೆ, ಈ ಎಲ್ಲಾ ಗಂಭೀರ ಅಂಶಗಳು ಸಿನಿಮಾ ಶುರುವಾಗಿ “ಒಂದು ಗಂಟೆಯ ನಂತರವೇ’ ತೆರೆಮೇಲೆ ಬರುತ್ತದೆ. ಹಾಗಾಗಿ, ಪ್ರೇಕ್ಷಕರು ಕೂಡಾ ತಾಳ್ಮೆಯಿಂದ, ಶಾಂತಚಿತ್ತರಾಗಿ ಕಾಯುವ ಅನಿವಾರ್ಯತೆಯನ್ನು ಈ ಚಿತ್ರ ದಯಪಾಲಿಸಿದೆ.
ಇದನ್ನೂ ಓದಿ:ಚಿತ್ರ ವಿಮರ್ಶೆ: ಆದಿತ್ಯ ಅಧ್ಯಾಯದಲ್ಲಿ ತನಿಖೆಯ ಜಾಡು
ನಿರ್ದೇಶಕ ದ್ವಾರ್ಕಿ ರಾಘವ್ ಅವರ ಉದ್ದೇಶ ಇಲ್ಲಿ ಸ್ಪಷ್ಟವಾಗಿದೆ. ಆರಂಭದಿಂದ ಕೊನೆಯವರೆಗೆ ಇಡೀ ಸಿನಿಮಾವನ್ನು ಸಿಕ್ಕಾಪಟ್ಟೆ ತುಂಟಾಟಿಕೆಯೊಂದಿಗೆ ಕಟ್ಟಿಕೊಟ್ಟು, ಕೊನೆಯ 10 ನಿಮಿಷದಲ್ಲಿ ಸಿನಿಮಾಕ್ಕೆ ಗಂಭೀರ ಸ್ವರೂಪ ನೀಡಬೇಕೆಂಬುದು. ಆ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮೊದಲೇ ಹೇಳಿದಂತೆ ಇಲ್ಲಿ ಸೀರಿಯಸ್ ಆದ, ಹಾರ್ಟ್‌ಗೆ ತಗೊಂಡ್ ನೋಡುವಂತಹ ದೃಶ್ಯಗಳಿಲ್ಲ. ಕ್ಲೈಮ್ಯಾಕ್ಸ್‌ನ ಪೂರ್ವ ದವರೆಗೂ ಇಡೀ ಸಿನಿಮಾವನ್ನು ಕಾಮಿಡಿಯಾಗಿಯೇ ನಿರೂಪಿಸಿದ್ದಾರೆ.
ಕಾಮಿಡಿ ದೃಶ್ಯಗಳಿಗೆ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಸೇರಿಸಿ, ಪಡ್ಡೆಗಳಿಗೆ ಖುಷಿ ನೀಡಲು ಪ್ರಯತ್ನಿಸಿದ್ದಾರೆ. ಆದರೆ, ಚಿತ್ರದಲ್ಲಿ ಬರುವ ಡಬಲ್ ಮೀನಿಂಗ್ ಡೈಲಾಗ್‌ಗಳು ಕೆಲವೊಮ್ಮೆ ಅತಿರೇಕ ಎನಿಸುತ್ತವೆ. ಹೇಳಿದ “ಪದ’ವೊಂದನ್ನೇ ಎಲ್ಲಾ ಪಾತ್ರಗಳಿಂದಲೂ ಹೇಳಿಸಿ ಅದನ್ನೇ “ಬ್ರಾಂಡ್’ ಮಾಡಲು ಹೊರಟಿದ್ದಾರೇನೋ ಎಂಬ ಸಂದೇಹ ಬರುವಂತಿದೆ.
ಇನ್ನು, ಕಥೆಯ ಎಳೆ ಹೊಸದಾಗಿದೆ. ಆ ಮಟ್ಟಿಗೆ ಅವರ ಪ್ರಯತ್ನವನ್ನು ಮೆಚ್ಚ ಬೇಕು. ಆದರೆ, ಸಿನಿಮಾವನ್ನು ಅದೇ ಹಳೆಯ “ಸಿದ್ಧಸೂತ್ರ’ಗಳೊಂದಿಗೆ ಕಟ್ಟಿಕೊಟ್ಟಿ ದ್ದಾರೆ. ಅದೇ ವಾಹಿನಿಗಳ ಚರ್ಚೆ, ಜ್ಯೋತಿಷಿಗಳು ಹೇಳುವ ಭವಿಷ್ಯ, ಇನ್ಯಾರದೋ ಧ್ವನಿಯ ಮಿಮಿಕ್ರಿ… ಈ ತರಹದ ದೃಶ್ಯಗಳು ತೀರಾ ಹೊಸದೇನಲ್ಲ.
ಒಂದೇ ಮಾತಲ್ಲಿ ಹೇಳುವುದಾದರೆ, ಒಂದು ಗಂಭೀರವಾದ ಕಥೆಯನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಿದ್ದಾರೆ ದ್ವಾರ್ಕಿ. ಅವರ ಪ್ರಯತ್ನದಲ್ಲಿ ಪ್ಲಸ್ ಮೈನಸ್ ಎರಡೂ ಇದೆ. ಚಿತ್ರದಲ್ಲಿ ನಟಿಸಿರುವ ಅಜಯ್ ರಾಜ್, ಶನಾಯ, ಪ್ರಕಾಶ್ ತುಮ್ಮಿನಾಡು ಸೇರಿದಂತೆ ಎಲ್ಲಾ ಕಲಾವಿದರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಆರ್.ಪಿ ರೈ