ಬಹುತೇಕ ಹೊಸ ಪ್ರತಿಭೆಗಳು ಸೇರಿಕೊಂಡು ನಿರ್ಮಿಸಿರುವ “ಒಂದೊಳ್ಳೆ ಲವ್ ಸ್ಟೋರಿ’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್ ಹಾಗೂ ಹಾಡುಗಳನ್ನು ಹೊರತಂದಿತು.
“ಪಿನಾಕಿನ್ ಸಿನಿಮಾಸ್’ ಬ್ಯಾನರಿನಲ್ಲಿ ಮೈಸೂರು ಮೂಲದ ಅನಿವಾಸಿ ಭಾರತೀಯ ನಿರಂಜನ್ ಬಾಬು ನಿರ್ಮಿಸಿರುವ “ಒಂದೊಳ್ಳೆ ಲವ್‌ಸ್ಟೋರಿ’ ಸಿನಿಮಾಕ್ಕೆ ಪ್ರವೀಣ್ ಸುತಾರ್ ನಿರ್ದೇಶನವಿದ್ದು, ಅಶ್ವಿನ್ ಕಥೆ, ಚಿತ್ರಕಥೆ ಬರೆದು ತೆರೆಮೇಲೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿ ಧನುಶ್ರೀ ನಾಯಕಿಯಾಗಿದ್ದು, ಉಳಿದಂತೆ ಕೈಲಾಸ್, ನಿಶಾ ಹೆಗಡೆ, ನಿರಂಜನ್ ಬಾಬು, ವೆಂಕಟೇಶ್, ವಿಂಧುಜ, ಮಲ್ಲು ಜಮಖಂಡಿ, ಮಮತಾ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಯೌವನಕ್ಕೆ ಬಂದು ಬದುಕು ಏನು ಎಂಬುದನ್ನು ಅರಿತುಕೊಳ್ಳುವ ಮೊದಲೇ ಪ್ರೀತಿ ಹುಟ್ಟಿಕೊಳ್ಳುತ್ತದೆ. ಅಲ್ಲಿಂದ ನಮ್ಮ ಪಯಣ ಏನು ಬೇಕಾದರೂ ಆಗಬಹುದು. ಕೊನೆಗೆ ವಿಷಯಗಳನ್ನು ತಿಳಿದುಕೊಂಡಾಗ ಪ್ರತಿಯೊಬ್ಬರಿಗೂ, ಹೌದು ಅನಿಸುತ್ತದೆ. ಹಾಗೆಯೇ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ನಾಯಕ ಪ್ರೀತಿಯಲ್ಲಿ ಮೋಸ ಹೋದರೆ, ನಾಯಕಿ ಜೀವನದಲ್ಲಿ ನಂಬಿಕೆಯನ್ನು ಕಳೆದುಕೊಂಡಿರುತ್ತಾಳೆ. ಇವರಿಬ್ಬರು ವಿಚಿತ್ರ ಸಂದರ್ಭದಲ್ಲಿ ಭೇಟಿಯಾಗುತ್ತಾರೆ. ಮುಂದೇನಾಗುತ್ತದೆ ಎಂಬುದೇ ಸಿನಿಮಾದ ಕಥೆಯ ಎಳೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡಿತು ಚಿತ್ರತಂಡ.
ಇನ್ನು ಅಮೆರಿಕಾದಲ್ಲಿರುವ ಅನಿವಾಸಿ ಕನ್ನಡಿಗ ನಿರಂಜನ್ ಬಾಬು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈಗಾಗಲೇ ಶಿವರಾಜಕುಮಾರ್, ಸುದೀಪ್, ರಮೇಶ್ ಅರವಿಂದ್ ಮೊದಲಾದ ಸ್ಟಾರ್ ಸಿನಿಮಾದ ಬಗ್ಗೆ ಮೆಚ್ಚುಗೆಯ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ. ಆದಷ್ಟು ಬೇಗ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ ಎಂಬುದು ನಿರ್ಮಾಪಕರ ಮಾತು.
“ಒಂದೊಳ್ಳೆ ಲವ್‌ಸ್ಟೋರಿ’ ಸಿನಿಮಾದ ಏಳು ಹಾಡುಗಳಿಗೆ ಆಕಾಶ್ ಜಾಧವ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವಿನೋದ್ ಮಂಡ್ಯ ಛಾಯಾಗ್ರಹಣ, ರಾಜ್ ಶಿವು ಸಂಕಲನವಿದೆ. ವಿಜಯೇಂದ್ರ ಜೋಡಿದಾರ್ ಸಂಭಾಷಣೆಯಿದೆ. ಚಿಕ್ಕಮಗಳೂರು, ಮಂಗಳೂರು, ಕೇರಳದ ಹಲವು ಕಡೆಗಳಲ್ಲಿ “ಒಂದೊಳ್ಳೆ ಲವ್‌ಸ್ಟೋರಿ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಫೆಬ್ರವರಿಯಲ್ಲಿ ತೆರೆಗೆ ಬರುವ ಯೋಜನೆಯಲ್ಲಿದೆ