ಶುಕ್ರವಾರ 22 ಸೆಪ್ಟೆಂಬರ್ 2017 ಅಕ್ಟೋಬರ್”ಹಣ ಬರುತ್ತೋ ಇಲ್ಲವೋ ಗೊತ್ತಿಲ್ಲ… ಆದರೆ, ಒಂದೊಳ್ಳೆಯ ಸಿನಿಮಾ ಮಾಡಿದ ಖುಷಿ ನನಗಿದೆ…’
ಹೀಗೆ ಹೇಳುವ ಮೂಲಕ ತಮ್ಮ ಚೊಚ್ಚಲ ನಿರ್ಮಾಣ, ನಟನೆಯ “ಒನ್ಸ್ ಮೋರ್ ಕೌರವ’ ಕುರಿತು ಹೇಳುತ್ತಾ ಹೋದರು ನರೇಶ್‌ಗೌಡ. ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್ 13 ಕ್ಕೆ ತೆರೆಗೆ ತರುವ ಯೋಚನೆ ಚಿತ್ರತಂಡಕ್ಕಿದೆ. ಅವರ ಮಾತಿಗೂ ಮುನ್ನ ಚಿತ್ರದ ಎರಡು ಹಾಡು ಹಾಗೂ ಪ್ರೋಮೋ ತೋರಿಸಲಾಯಿತು. ಆ ಬಳಿಕ ತಂಡ ಮಾತಿಗೆ ಶುರುವಿಟ್ಟುಕೊಂಡಿತು. “ನಾನು ಇಷ್ಟಪಟ್ಟು ಸಿನಿಮಾ ಮಾಡಿದ್ದೇನೆ. ಮಹೇಂದರ್ ಬಳಿ ಹೋಗಿ ಒಂದು ಸಿನಿಮಾ ಮಾಡೋಣ ಅಂದಾಗ, ಸರಿ ಅಂತ ಒಪ್ಪಿದರು. ಕಥೆ ಹೇಳದೆ ಆರು ತಿಂಗಳು ಸುಮ್ಮನಿದ್ದರು. ಆದರೆ, ಸ್ಕ್ರಿಪ್ಟ್ ಕೆಲಸ ಜೋರಾಗಿ ನಡೆಯುತ್ತಿತ್ತು. ಒಮ್ಮೆ ಕರೆದು ಕಥೆ ಹೇಳಿದರು.
ಸೊಗಸಾಗಿತ್ತು. ಚಿತ್ರೀಕರಣ ಶುರು ಮಾಡಿದೆವು. ಫೈನಾನ್ಸ್ ವಿಷಯದಲ್ಲಿ ಸ್ವಲ್ಪ ತೊಂದರೆ ಆಗಿದ್ದು ಬಿಟ್ಟರೆ, ಬೇರೇನೂ ಸಮಸ್ಯೆ ಆಗಿಲ್ಲ. ಮೊದಲ ನಿರ್ಮಾಣದ ಜತೆ ಹೀರೋ ಆಗಿರುವುದರಿಂದ ಭಯವೂ ಇದೆ, ಖುಷಿಯೂ ಇದೆ. ಮಿಕ್ಕಿದ್ದನ್ನು ಜನರಿಗೆ ಬಿಡುತ್ತೇನೆ. ಅಮೇರಿಕಾದಲ್ಲೂ ಚಿತ್ರದ ಪ್ರಚಾರ ಶುರುಮಾಡಿದ್ದೆ. ಅಲ್ಲಿಂದಲೂ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಅಲ್ಲೂ ಸಿನಿಮಾ ರಿಲೀಸ್ ಮಾಡುವಂತೆ ಕೇಳುತ್ತಿದ್ದಾರೆ. ಮೊದಲು ಇಲ್ಲಿ ರಿಲೀಸ್ ಮಾಡಿ ಆ ಬಳಿಕ ಅಲ್ಲಿಯೂ ರಿಲೀಸ್ ಮಾಡುವುದಾಗಿ’ ಹೇಳಿಕೊಂಡರು ನರೇಶ್‌ಗೌಡ.
ಮಹೇಂದರ್ ಮೊಗದಲ್ಲಿ ಅದೇ ಖುಷಿ ಇತ್ತು. “ದೊಡ್ಡ ಗ್ಯಾಪ್ ಆಗಿದ್ದರೂ, ಒಳ್ಳೇ ಸಿನಿಮಾ ಮೂಲಕವೇ ಬಂದಿದ್ದೇನೆ ಎಂಬ ತೃಪ್ತಿ ಇದೆ. ಇದು ಹಳ್ಳಿ ಸೊಗಡಿನ ಕಥೆಯಾಗಿದ್ದರೂ, ಈಗಿನ ಮತ್ತು ಆಗಿನ ಈ ಎರಡು ಕಾಲಘಟ್ಟದ ಕಥೆ ಹೆಣೆದಿದ್ದೇನೆ. ಎರಡು ಆಯಾಮಗಳಲ್ಲೂ ಚಿತ್ರ ಸಾಗಲಿದೆ. ಫ್ಲ್ಯಾಶ್‌ಬ್ಯಾಕ್‌ನೊಂದಿಗೆ ಕಥೆಯ ಹೂರಣ ರುಚಿಸುತ್ತಾ ಹೋಗುತ್ತದೆ. ಇಲ್ಲಿ ದೊಡ್ಡ ಕಲಾವಿದರ ಬಳಗವಿದೆ. ತಂತ್ರಜ್ಞರು ಕೆಲಸ ಮಾಡಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಒಂದು ಹಳ್ಳಿಯಲ್ಲಿ ಡ್ರಾಮಾ ಅಭ್ಯಾಸ ಶುರುವಾಗುತ್ತೆ. ಅದು ಶುರುವಾಗಿ, ಪ್ರದರ್ಶನಗೊಳ್ಳುವ ಸಮಯದಲ್ಲಿ ಸಿನಿಮಾನೂ ಮುಗಿದಿರುತ್ತೆ. ನಿರ್ಮಾಪಕರು ಕೇಳಿದ್ದೆಲ್ಲ ಒದಗಿಸಿದ್ದರಿಂದ ಸಿನಿಮಾ ಕಲರ್‌ಫುಲ್ ಆಗಿ ಮೂಡಿಬಂದಿದೆ. ಮುಖ್ಯವಾಗಿ ಶ್ರೀಧರ್ ಸಂಭ್ರಮ್ ಅವರ ಸಂಗೀತ ಇಲ್ಲಿ
ಹೈಲೈಟ್. ಹಿಂದಿನ “ಕೌರವ’ದಲ್ಲಿ ಅದ್ಭುತ ಹಾಡುಗಳಿದ್ದವು . ಹಾಗಾಗಿ ಕೆಲಸ ಚಾಲೆಂಜಿಂಗ್ ಆಗಿತ್ತು. ಹಾಡು ಕೇಳಿದವರೆಲ್ಲರೂ ಖುಷಿಯಾಗಿದ್ದಾರೆ. ನಾಯಕಿಯರ ವಿಚಾರದಲ್ಲೂ ಸಹ ಹಳ್ಳಿ ಪಾತ್ರಕ್ಕೆ ಹೊಂದುವ ಅನೂಷಾ ಅವರನ್ನು ಆಯ್ಕೆ ಮಾಡಿಕೊಂಡೆವು. ಈ ಹುಡುಗಿಗೆ ಈ ಚಿತ್ರ ಒಳ್ಳೆಯ ಇಮೇಜ್ ತಂದುಕೊಡುವುದು ಗ್ಯಾರಂಟಿ. ಇನ್ನು, ಚಿತ್ರ ಶುರುವಾದಾಗಲೇ ಜಯಣ್ಣ-ಭೋಗೇಂದ್ರ
ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಅದರಂತೆ, ಅವರು ಚಿತ್ರ ವಿತರಣೆ ಮಾಡುತ್ತಿದ್ದಾರೆ’ ಎಂದು ವಿವರ ಕೊಟ್ಟರು ಮಹೇಂದರ್.
ಶ್ರೀಧರ್ ಸಂಭ್ರಮ್‌ಗೆ ಮಹೇಂದರ್ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. “ಈ ರೀತಿಯ ಚಿತ್ರಗಳಿಗೆ ಕೆಲಸ ಮಾಡಬೇಕೆಂಬ ಕನಸಾಗಿತ್ತು. ಅದು ಈ ಮೂಲಕ ಈಡೇರಿದೆ. ಕೆ.ಕಲ್ಯಾಣ್ ನನ್ನ ಗುರು ಇದ್ದಂತೆ. ಅವರು ಇಲ್ಲಿ ಅದ್ಭುತವಾಗಿ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ. ಹಾಡು ಕೇಳಿದವರೆಲ್ಲರೂ ಸಾಹಿತ್ಯ ಬಗ್ಗೆ ಮಾತಾಡುತ್ತಿದ್ದಾರೆ. ನನ್ನ ಹಾಡಿಗೆ ಕ್ಯಾಮೆರಾಮೆನ್ ಕೃಷ್ಣಕುಮಾರ್ ಅಷ್ಟೇ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಇಂತಹ ಪ್ರಯತ್ನ ಗೆಲ್ಲಬೇಕು’ ಎಂದರು ಶ್ರೀಧರ್. ಅನೂಷಾಗೆ ಒಳ್ಳೆಯ ಚಿತ್ರದಲ್ಲಿ ಕೆಲಸ ಮಾಡಿದ್ದೇ ಹೆಮ್ಮೆಯಂತೆ. ಅದರಲ್ಲೂ ಮಹೇಂದರ್ ಅವರ ಜತೆ ಮಾಡಿದ ಕೆಲಸ ಮರೆಯುವಂತಿಲ್ಲ. ಅವರಿಲ್ಲಿ ಕನ್ನಡ ಪ್ರೀತಿಸುವ ಹುಡುಗಿಯಾಗಿ, 30 ದಿನದಲ್ಲಿ ಇಂಗ್ಲೀಷ್ ಕಲಿಯೋ ಆಸೆ ಇರುವ ಹುಡುಗಿ ಪಾತ್ರವಂತೆ. ವಿಜಯ್ ಚೆಂಡೂರ್ ಇಲ್ಲಿ ಬೆಣ್ಣೆ ಕರಿಯಪ್ಪನ ಪಿಸಿ ಪಾತ್ರ ಮಾಡಿದ್ದಾರೆ. “ಬಬ್ಲೂಷ’ ಮಾಡಿದ್ದ ಹರ್ಷಅರ್ಜುನ್ ಇಲ್ಲೊಂದು ಪಾತ್ರ ನಿರ್ವಹಿಸಿದ್ದು, ಮಾಲೂರು ಶ್ರೀನಿವಾಸ್ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾ ರೆ. ಕೃಷ್ಣಕುಮಾರ್ ಛಾಯಾಗ್ರಹಣವಿದೆ.