Advertisement

ಮೆಕಲಮ್‌ ಅಬ್ಬರದೊಂದಿಗೆ ಮೊದಲ್ಗೊಂಡ ಐಪಿಎಲ್‌

09:00 PM Apr 25, 2022 | Team Udayavani |

ಅದು 2007. ಮೊದಲ ಟಿ20 ವಿಶ್ವಕಪ್‌ ಪಂದ್ಯಾವಳಿ ಜಾಗತಿಕ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಭಾರತವಂತೂ ಭಾರೀ ಜೋಶ್‌ನಲ್ಲಿತ್ತು. ಕಾರಣ ಸ್ಪಷ್ಟ. ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಟೀಮ್‌ ಇಂಡಿಯಾ ಪ್ರಬಲ ಎದುರಾಳಿ ಪಾಕಿಸ್ಥಾನವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.

Advertisement

ದೇಶವಿಡೀ ಈ ಸಡಗರದಲ್ಲಿ ಮುಳುಗಿರುವಾಗಲೇ ಬಿಸಿಸಿಐ “ಇಂಡಿಯನ್‌ ಪ್ರೀಮಿಯರ್‌ ಲೀಗ್‌’ ಎಂಬ ವಿಶಿಷ್ಟ ಮಾದರಿಯ ಕ್ರಿಕೆಟ್‌ ಪಂದ್ಯಾವಳಿಯನ್ನು ಆರಂಭಿಸಿತು. ಚುಟುಕಾಗಿ ಇದು ಐಪಿಎಲ್‌ ಎಂದೇ ಜನಪ್ರಿಯಗೊಂಡದ್ದು ಈಗ ಇತಿಹಾಸ. ಈ ಪುಟದಲ್ಲಿನ್ನು ಯಪಿಎಲ್‌ನ ಪ್ರತಿಯೊಂದು ಸೀಸನ್‌ನ ಆರಂಭಿಕ ಪಂದ್ಯದ ಸ್ವಾರಸ್ಯವನ್ನು ಓದಲಿರುವಿರಿ.

ಅಬ್ಬರದ ಆರಂಭ
ಈ ಐಪಿಎಲ್‌ ಪಂದ್ಯದ ಆರಂಭ ಅತ್ಯಂತ ಅಬ್ಬರದಿಂದ ಕೂಡಿತ್ತು. ಚುಟುಕು ಕ್ರಿಕೆಟ್‌ ಇಷ್ಟೊಂದು ಸ್ಫೋಟಕವಾಗಿರುತ್ತದೆಯೇ ಎಂದು ಕ್ರಿಕೆಟ್‌ ಜಗತ್ತೇ ಹುಬ್ಬೇರುಸುವ ರೀತಿಯಲ್ಲಿ ಐಪಿಎಲ್‌ ಇತಿಹಾಸದ ಮೊದಲ ಪಂದ್ಯ ಸಾಗಿತು. ಅದು 2008ರ ಎಪ್ರಿಲ್‌ 18. ತಾಣ-ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ. ಆತಿಥೇಯ ರಾಯಲ್‌ ಚಾಲೆಂಜರ್ ಮತ್ತು ಕೋಲ್ಕತಾ ನೈಡ್‌ರೈಡರ್ ನಡುವೆ ಉದ್ಘಾಟನ ಪಂದ್ಯ. ಏಕಕಾಲಕ್ಕೆ ಟೀಮ್‌ ಇಂಡಿಯಾ ಟೆಸ್ಟ್‌ ತಂಡಕ್ಕೆ ಪದಾರ್ಪಣೆಗೈದ ರಾಹುಲ್‌ ದ್ರಾವಿಡ್‌ ಮತ್ತು ಸೌರವ್‌ ಗಂಗೂಲಿ ಈ ತಂಡಗಳ ನಾಯಕರಾಗಿದ್ದರು. ಈ ಪಂದ್ಯದ ಹೀರೋ ಆಗಿ ಮೆರೆದವರು ಕೆಕೆಆರ್‌ ಓಪನರ್‌ ಬ್ರೆಂಡನ್‌ ಮೆಕಲಮ್‌.

ಆರ್‌ಸಿಬಿ ಬೌಲರ್‌ಗಳ ಮೇಲೆರಗಿ ಹೋದ ಮೆಕಲಮ್‌ ಇನ್ನಿಂಗ್ಸ್‌ ಉದ್ದಕ್ಕೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈಯುತ್ತ ಸಾಗಿದರು. ಭರ್ತಿ 20 ಓವರ್‌ಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡು ರಂಜನೀಯ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಇವರ ಅಬ್ಬರಕ್ಕೆ ಕೇವಲ ಆರ್‌ಸಿಬಿ ಮಾತ್ರವಲ್ಲ, ಐಪಿಎಲ್‌ನ ಉಳಿದ ತಂಡಗಳೂ ದಂಗಾದವು. ಈ ಅವಧಿಯಲ್ಲಿ ಕೇವಲ 73 ಎಸೆತ ಎದುರಿಸಿದ ಮೆಕಲಮ್‌ 13 ಸಿಕ್ಸರ್‌, 10 ಬೌಂಡರಿ ಸಿಡಿಸಿ ಅಜೇಯ 158 ರನ್‌ ಬಾರಿಸಿದರು. ಇದು ಟಿ20 ಕ್ರಿಕೆಟಿನ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು.

ಆರ್‌ಸಿಬಿ ತದ್ವಿರುದ್ಧ ಆಟ
ಮೆಕಲಮ್‌ ಸಾಹಸದಿಂದ ಕೆಕೆಆರ್‌ ಮೂರೇ ವಿಕೆಟಿಗೆ 222 ರನ್‌ ರಾಶಿ ಹಾಕಿತು. ಜವಾಬಿತ್ತ ಆರ್‌ಸಿಬಿಯದ್ದು ಇದಕ್ಕೆ ತದ್ವಿರುದ್ಧವಾದ ಆಟ. ಟಿ20 ಪಂದ್ಯವನ್ನು ಹೀಗೂ ಆಡಬಹುದು ಎಂದು ತೋರಿಸಿಕೊಟ್ಟಿತು ಬೆಂಗಳೂರು ಪಡೆ. ಅಂತಿಮ ಸ್ಕೋರ್‌, 15.1 ಓವರ್‌ಗಳಲ್ಲಿ 82 ಆಲೌಟ್‌! ಕೆಕೆಆರ್‌ ಗೆಲುವಿನ ಅಂತರ 140 ರನ್‌!

Advertisement

ಆರ್‌ಸಿಬಿಯದು ಘೋರ ಬ್ಯಾಟಿಂಗ್‌ ವೈಫ‌ಲ್ಯ. ದ್ವಿತೀಯ ಓವರ್‌ನಿಂದ ಮೊದಲ್ಗೊಂಡ ಕುಸಿತ ನಿಲ್ಲಲೇ ಇಲ್ಲ. ರಾಹುಲ್‌, ಜಾಫ‌ರ್‌, ಕೊಹ್ಲಿ, ಕ್ಯಾಲಿಸ್‌, ವೈಟ್‌, ಬೌಷರ್‌… ಎಲ್ಲರದೂ ಸಿಂಗಲ್‌ ಡಿಜಿಟ್‌. ಎರಡಂಕೆಯ ಗಡಿ ದಾಟಿದ್ದು ಪ್ರವೀಣ್‌ ಕುಮಾರ್‌ ಮಾತ್ರ. ಕೆಕೆಆರ್‌ ಸರದಿಯಲ್ಲಿ ಮೆಕಲಮ್‌ ಅವರ 158 ರನ್‌ ಸರ್ವಾಧಿಕ ವೈಯಕ್ತಿಕ ಗಳಿಕೆಯಾದರೆ, ಆರ್‌ಸಿಬಿಯಲ್ಲಿ ಪ್ರವೀಣ್‌ ಕುಮಾರ್‌ ಅವರ 18 ರನ್ನೇ ಅತ್ಯಧಿಕ ಮೊತ್ತ. ಅಲ್ಲಿ 14 ಸಿಕ್ಸರ್‌, 15 ಬೌಂಡಿ ಸಿಡಿದರೆ, ಇಲ್ಲಿ ಕಂಡುಬಂದದ್ದು 3 ಫೋರ್‌, 3 ಸಿಕ್ಸರ್‌ ಮಾತ್ರ.

ಹೀಗೆ ತೀರಾ ಒಂದಕ್ಕೊಂದು ತದ್ವಿರುದ್ಧ ಬ್ಯಾಟಿಂಗ್‌ ಮೂಲಕ ಮೊದಲ್ಗೊಂಡಿತ್ತು ಐಪಿಎಲ್‌ ಜಾತ್ರೆ!

Advertisement

Udayavani is now on Telegram. Click here to join our channel and stay updated with the latest news.

Next