Advertisement

Mangaluru: ಪೌರಾಣಿಕ ಕಥಾನಕ, ವೈಜ್ಞಾನಿಕ ಕೌತುಕ!

02:30 PM Oct 07, 2024 | Team Udayavani |

ಮಹಾನಗರ: ಮಂಗಳೂರು ದಸರಾ, ಇಲ್ಲಿನ ಪ್ರಮುಖ ದೇವಸ್ಥಾನಗಳ ನವರಾತ್ರಿ ಉತ್ಸವವೆಂದರೆ ಅದು ಸಮ್ಮೋಹಕ ಟ್ಯಾಬ್ಲೋಗಳ ಲೋಕ. ಇದು ಪೌರಾಣಿಕ ಕಥಾನಕಗಳನ್ನು ವೈಜ್ಞಾನಿಕ ಮತ್ತು ಸಂಶೋಧನಾತ್ಮಕ ರೂಪದಲ್ಲಿ ಪ್ರಸ್ತುತಪಡಿಸುವ ಅದ್ಭುತ ಲೋಕ. ಮೈಸೂರು ದಸರೆಯ ಸ್ತಬ್ಧಚಿತ್ರಗಳು ನಿಜಾರ್ಥದಲ್ಲಿ  ಸ್ತಬ್ಧವಾಗಿದ್ದರೆ, ಇಲ್ಲಿನ ಪ್ರತಿಯೊಂದು ಟ್ಯಾಬ್ಲೋ ಕೂಡಾ ಮಾತನಾಡುತ್ತದೆ, ಕುಣಿಯುತ್ತದೆ!

Advertisement

ಒಂದೆಡೆ ಅಧ್ಯಾತ್ಮದ ಸಂದೇಶ ಸಾರುವ ಪೌರಾಣಿಕ ಹಿನ್ನೆಲೆಯ ಭವ್ಯಾಕರ್ಷಕ ಟ್ಯಾಬ್ಲೋಗಳು ಗಮನ ಸೆಳೆದರೆ, ಇನ್ನೊಂದು ಕಡೆಯಲ್ಲಿ ಜನ ನಿರೀಕ್ಷಿ ಸುವುದು ಈಗಿನ ಟ್ರೆಂಡ್‌ಗೆ ತಕ್ಕಂತೆ ಸೃಷ್ಟಿಯಾಗುವ ಟ್ಯಾಬ್ಲೋಗಳನ್ನು.  ದ.ಕ, ಉಡುಪಿ ಭಾಗದ ಹಲ ವಾರು ಕಡೆ ಹವ್ಯಾಸಿ, ವೃತ್ತಿಪರ ತಂಡಗಳು ಪ್ರತೀ ವರ್ಷವೂ ಏನಾದರೊಂದು ವಿಶೇಷವಾದ ಟ್ಯಾಬ್ಲೋ ಸೃಷ್ಟಿಸಿ ತಮ್ಮೊಳಗೇ ಪೈಪೋಟಿ ಮಾಡುತ್ತವೆ. ಇದರಿಂದಾಗಿ ನೋಡುಗರಿಗೆ ನಿಜವಾಗಿಯೂ ಹಬ್ಬ.

ಟ್ಯಾಬ್ಲೋ ನಿರ್ಮಾಣವೂ ಉದ್ಯಮ
ಹತ್ತಾರು ವರ್ಷಗಳಿಂದ ಟ್ಯಾಬ್ಲೊಗಳನ್ನು ನಿರ್ಮಿಸುತ್ತಿರುವ ವೃತ್ತಿಪರರು, ಟ್ಯಾಬ್ಲೋ ರಚನೆಯಲ್ಲಿ ಹವ್ಯಾಸಿಗಳಾಗಿ ತೊಡಗಿ ಕೊಳ್ಳುವವರು ತುಂಬಾ ಮಂದಿ ಇದ್ದಾರೆ. ಇಲ್ಲಿನ ಟ್ಯಾಬ್ಲೊಗಳಿಗೆ ಹೊರಜಿಲ್ಲೆ, ಹೊರ ರಾಜ್ಯಗಳಿಂದಲೂ ಡಿಮ್ಯಾಂಡ್‌. ಇದಕ್ಕೆ ಮುಖ್ಯಕಾರಣವೆಂದರೆ ಇಲ್ಲಿನ ಟ್ಯಾಬ್ಲೋಗಳು ನಿರ್ಮಾಣಗಾರರ ಸ್ಪರ್ಧಾ ಮನೋಭಾವದಿಂದ ರೂಪುಗೊಳ್ಳುತ್ತವೆ. ಇಲ್ಲಿ ಆದಾಯ ಗಳಿಕೆ, ವೃತ್ತಿಗಿಂತಲೂ ಭಕ್ತಿ, ಶ್ರದ್ಧೆ, ಹೊಸತನವನ್ನು ನೀಡಬೇಕೆಂಬ ಛಲ, ಇತರರಿಂದ ಚೆನ್ನಾಗಿರಬೇಕೆಂಬ ಸ್ಪರ್ಧಾ ಮನೋಭಾವವೇ ಹೆಚ್ಚು.

ಟ್ಯಾಬ್ಲೋಗೂ ಕ್ರಿಯೇಟಿವ್‌ ಟೀಮ್‌!
ಒಂದು ಸಿನಿಮಾಗೆ ಕ್ರಿಯೇಟಿವ್‌ ಟೀಮ್‌ ಕೆಲಸ ಮಾಡುತ್ತದೋ ಅದೇ ರೀತಿ ಟ್ಯಾಬ್ಲೋ ತಯಾರಿಯಲ್ಲೂ ಇದೆ. ಟ್ಯಾಬ್ಲೋ  ತಯಾರಿಕಾ ತಂಡಗಳು ಪ್ರತಿ ವರ್ಷವೂ ಕನಿಷ್ಠ ಒಂದು ಹೊಸ ಪರಿಕಲ್ಪನೆಯನ್ನು ಪ್ರಚುರಪಡಿಸುತ್ತವೆ. ಇಂತಹ ಹೊಸ ಪರಿಕಲ್ಪನೆಗೆ ಬೇಕಾದ ಕಥಾವಸ್ತು(ಸ್ಟೋರಿ) ಸೃಷ್ಟಿಯಾಗಲು ಹಲವು ತಿಂಗಳುಗಳು ಬೇಕು!. ತಂಡದೊಳ ಗಿನ ಕ್ರಿಯೇಟಿವ್‌ ಸದಸ್ಯರು ಪರಸ್ಪರ ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಿ ನಾನಾ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸಿ ಅಂತಿಮ ತೀರ್ಮಾನಕ್ಕೆ ಬರುತ್ತಾರೆ. ಇದರಲ್ಲಿ ಕಲಾವಿ ದರು ಮಾತ್ರವಲ್ಲದೆ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರ ಪಾಲು ಕೂಡ ಇರುತ್ತದೆ. ಮುಂದಿನ ವರ್ಷಕ್ಕೆ ಯಾವ ಟ್ಯಾಬ್ಲೊ ಎಂಬುದಕ್ಕೆ ಹಿಂದಿನ ವರ್ಷವೇ ಚಿಂತನೆ ಆರಂಭವಾಗಿರುತ್ತದೆ. ಟ್ಯಾಬ್ಲೋ ರಚನೆಯ ಪೈಪೋಟಿ ಹೆಚ್ಚುತ್ತಿರುವಂತೆಯೇ ಕೆಲವು ತಂಡಗಳು ಹೊರ ರಾಜ್ಯಗಳಿಂದಲೂ ಆಯ್ದ ಕಲಾವಿದರನ್ನು ಕರೆಸುತ್ತವೆ.

ಹುಲಿಗಳಿಗಾಗಿಯೇ ಸ್ಪೆಷಲ್‌
ದಸರಾ ಮೆರವಣಿಗೆಯಲ್ಲಿ ಹುಲಿಗಳ ಅಬ್ಬರ ಜೋರು. ಬರ್ಕೆ ಫ್ರೆಂಡ್ಸ್‌ನಿಂದ 200ಕ್ಕೂ ಅಧಿಕ ಹುಲಿವೇಷಧಾರಿಗಳು ಈ ಬಾರಿ ಶೋಭಾಯಾತ್ರೆಯಲ್ಲಿ ರುತ್ತಾರೆ. ಅವರಿಗೆ ಸ್ಪೆಷಲ್‌ ಟ್ಯಾಬ್ಲೋ ಸಿದ್ಧವಾಗುತ್ತಿದೆ. ಆರಂಭದಿಂದಲೂ  ವಿಶಿಷ್ಟ ರೀತಿಯ ಟ್ಯಾಬ್ಲೊಗಳಿಂದ ಗುರುತಿಸಲ್ಪಟ್ಟ ಕಾಳಿಚರಣ್‌ ಫ್ರೆಂಡ್ಸ್‌ ಈ ಬಾರಿಯೂ 70ರಷ್ಟು ಕಪ್ಪು ಹುಲಿಗಳೊಂದಿಗೆ ಸಿದ್ಧಗೊಂಡಿದೆ. ಜತೆಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನವೀನ ಪರಿಕಲ್ಪನೆಯ ಎರಡು ಟ್ಯಾಬ್ಲೊಗಳನ್ನು ಪರಿಚಯಿಸಲಿದೆ. ಇದಕ್ಕಾಗಿ ಮುಂಬೈಯ ತಜ್ಞರು ಆಗಮಿಸಲಿದ್ದಾರೆ. ಈ ಹಿಂದೆ ಐರ್ಲ್ಯಾಂಡ್‌ನ‌ ಪ್ರಸಿದ್ದ ಪರಿಕಲ್ಪನೆಗೆ ಸ್ತಬ್ದಚಿತ್ರದ ರೂಪ ಕೊಟ್ಟಿದ್ದೆವು. ಈ ಬಾರಿ ಹುಲಿವೇಷದ ಆಕರ್ಷಣೆಯ ಜತೆಗೆ ವಿದೇಶದ ಪರಿಕಲ್ಪನೆಗೆ ಸ್ಥಳೀಯ ಟಚ್‌ ನೀಡಿದ ಟ್ಯಾಬ್ಲೋ ಸಿದ್ಧಗೊಳಿಸುತ್ತಿದ್ದೇವೆʼ ಎನ್ನುತ್ತಾರೆ ಕಾಳಿಚರಣ್‌ ಫ್ರೆಂಡ್ಸ್‌ನ ವಿಘ್ನೇಶ್‌.

Advertisement

ಈ ಬಾರಿ ದಸರೆಗೆ ಏಲಿಯನ್ಸ್‌ ʼಜಾದೂʼ
ಈ ಬಾರಿಯ ಮಂಗಳೂರು ದಸರಾದಲ್ಲಿ ಪ್ರದರ್ಶನಗೊಳ್ಳಲಿರುವ ʼಜಾದೂʼ ಹೆಸರಿನ ಟ್ಯಾಬ್ಲೋ 5 ಏಲಿಯನ್ಸ್‌ಗಳ ಕೌತುಕದ ಸನ್ನಿವೇಶವನ್ನು ಬಿಂಬಿಸಲಿದೆ. ಬಾಲಿವುಡ್‌ನ‌ ʼಕೋಯಿ ಮಿಲ್‌ಗ‌ಯಾʼ ಸಿನೆಮಾದ ದೃಶ್ಯದಿಂದ ಪ್ರೇರಿತಗೊಂಡು ಮಂಗಳೂರಿನ ತಂತ್ರಜ್ಞರ ಶ್ರಮ, ಕೈಚಳಕದಲ್ಲಿ ರೂಪುಗೊಳ್ಳುತ್ತಿದೆ. ʼವಿಸ್ಮಯಗಳನ್ನು ಯುವಜನತೆ, ಮಕ್ಕಳಿಗೆ ಮನಮುಟ್ಟುವಂತೆ ಪ್ರದರ್ಶಿಸುವುದು ಹಾಗೂ ಜನತೆಗೆ ಹೊಸತನ್ನು ನೀಡುವುದುʼ ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ತಂಡದ ಯತೀಶ್‌ ಮಂಗಳೂರು ಅವರು.

ಉದ್ಯೋಗವೂ.. ಹವ್ಯಾಸವೂ..
ಕಲ್ಲಡ್ಕದ ವರ್ಣ ಆರ್ಟ್ಸ್ನವರ ಟ್ಯಾಬ್ಲೋಗಳಿಗೂ ಜಿಲ್ಲೆ, ಹೊರಜಿಲ್ಲೆ, ಹೊರ ರಾಜ್ಯದಿಂದಲೂ ಬೇಡಿಕೆ ಇದೆ. ಈ ತಂಡ ಕಟೀಲು ಭ್ರಮರಾಂಬಿಕೆ, ಗಜಾಸುರನ ವಧೆ, ಕೊಲ್ಲೂರು ಮೂಕಾಂಬಿಕೆ ಮೊದಲಾದ ಸ್ತಬ್ಧಚಿತ್ರಗಳಿಂದ ಜನಮನ್ನಣೆ ಗಳಿಸಿವೆ. ಈ ಬಾರಿ ಬಾರಿ ಧಾರಿಕಾಸುರ ವಧೆ ಸ್ತಬ್ಧಚಿತ್ರ ತಯಾರಾಗಿದೆ.  ʼನಮ್ಮ ತಂಡದಲ್ಲಿ ಸ್ಥಳೀಯ ಕಲಾವಿದರೇ ಇದ್ದಾರೆ. ಅವರ ಜತೆ  ಹವ್ಯಾಸಿಗಳಾಗಿ ಯುವಕರೂ ಸೇರಿಕೊಳ್ಳು ತ್ತಾರೆ. ಅಗತ್ಯ ಬಿದ್ದರೆ ಹೊರಗಿನ ಕಲಾವಿದರನ್ನು ಕರೆಯಿಸುತ್ತೇವೆʼ ಎನ್ನುತ್ತಾರೆ ಕಲ್ಲಡ್ಕ ವರ್ಣ ಆರ್ಟ್ಸ್ನ ಜಗದೀಶ್‌.

ಕೇರಳದಲ್ಲಿಯೂ ಡಿಮ್ಯಾಂಡ್‌
ಕಳೆದ 10 ವರ್ಷಗಳಿಂದ ಸ್ತಬ್ಧಚಿತ್ರಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸುರತ್ಕಲ್‌ನ ನಿತ್ಯಾನಂದ ಆರ್ಟ್ಸ್ನವರು ಚೌತಿ, ಅಷ್ಟಮಿ, ದಸರಾ ಸಮಯದಲ್ಲಿ ಬ್ಯುಸಿಯಾಗುತ್ತಾರೆ. ವಿನೋದ್‌ ಅವರ ನೇತೃತ್ವದಲ್ಲಿ  ಹೊಸತೇನು ಎಂಬ ಚಿಂತನೆ ನಡೆದು ಒಂದು ರೂಪ ಕೊಡಲಾಗುತ್ತದೆ. ಇವರ ಟ್ಯಾಬ್ಲೋಗಳಿಗೆ  ಕೇರಳದಿಂದಲೂ ಡಿಮ್ಯಾಂಡ್‌ ಇದೆ.

ವರದಿ: ಸಂತೋಷ್‌ ಬೊಳ್ಳೆಟ್ಟು

ಚಿತ್ರ: ಸತೀಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next