ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬರೋಬ್ಬರಿ 15 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ತಂಡದ ಆಟಗಾರನೊಬ್ಬ ಶತಕ ಬಾರಿಸಲು ಕೆಕೆಆರ್ ಬರೋಬ್ಬರಿ 15 ವರ್ಷ ಕಾದಿದೆ. ಈ ಬರವನ್ನು ನೀಗಿಸಿದ್ದು ವೆಂಕಟೇಶ್ ಅಯ್ಯರ್.
ಕೆಕೆಆರ್ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಅವರು ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು. 51 ಎಸೆತ ಎದುರಿಸಿದ ಅಯ್ಯರ್ 104 ರನ್ ಬಾರಿಸಿದರು. ಈ ಇನ್ನಿಂಗ್ ವೇಳೆ ಅಯ್ಯರ್ 9 ಸಿಕ್ಸರ್ ಮತ್ತು 6 ಬೌಂಡರಿ ಚಚ್ಚಿದರು.
ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲಿ ಕೆಕೆಆರ್ ಆಟಗಾರ ಬ್ರೆಂಡನ್ ಮೆಕಲಮ್ ಶತಕ ಬಾರಿಸಿದ್ದರು. ಅಂದು ಅಜೇಯ 158 ರನ್ ಬಾರಿಸಿ ಐಪಿಎಲ್ ಇತಿಹಾಸದ ಮೊದಲ ಶತಕ ಬಾರಿಸಿದ್ದರು. ಆದರೆ ಇದಾದ ಬಳಿಕ ಕೆಕೆಆರ್ ತಂಡವು 11 ಶತಕಗಳನ್ನು ಬಿಟ್ಟುಕೊಟ್ಟಿದೆ ಆದರೆ ಈ 15 ವರ್ಷಗಳಲ್ಲಿ ಒಬ್ಬನೇ ಒಬ್ಬ ಕೆಕೆಆರ್ ಬ್ಯಾಟರ್ ಒಂದೂ ಶತಕ ಬಾರಿಸಿರಲಿಲ್ಲ. ಈ ಬರವನ್ನು ಇಂದು ವೆಂಕಿ ಅಯ್ಯರ್ ನೀಗಿದ್ದಾರೆ.
ಇದನ್ನೂ ಓದಿ:ಕೇಜ್ರಿವಾಲ್‌ರನ್ನು ʻಭಗವಾನ್ ಕೃಷ್ಣʼನಿಗೂ ಬಿಜೆಪಿಯನ್ನು ʻಕಂಸʼನಿಗೂ ಹೋಲಿಸಿದ ಆಪ್ ನಾಯಕ!
ಮೆಕಲಮ್ ಅವರು 2008ರ ಏಪ್ರಿಲ್ 18ರಂದು ಮೊದಲ ಶತಕ ಬಾರಿಸಿದ್ದರೆ, 2023ರ ಏಪ್ರಿಲ್ 16ರಂದು ಅಯ್ಯರ್ ನೂರರ ಗಡಿ ದಾಟಿದರು. ಅಂದರೆ 5477 ದಿನಗಳ ಬಳಿಕ ಕೆಕೆಆರ್ ಪರ ಶತಕ ದಾಖಲಾಗಿದೆ.