Advertisement

ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಳೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ

02:15 PM Aug 15, 2020 | mahesh |

ಮುಂಬಯಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕಕ್ಕೆ ಶುಕ್ರವಾರ ಬರೋಬ್ಬರಿ 30 ವರ್ಷ ತುಂಬಿತು. ಅರ್ಥಾತ್‌, ಅವರು ತಮ್ಮ ಶತಕಗಳ ಶತಕಕ್ಕೆ ಮುಹೂರ್ತವಿರಿಸಿ ಮೂರು ದಶಕಗಳೇ ಉರುಳಿದವು. ಈ ಸಂದರ್ಭದಲ್ಲಿ ನೆನಪಿನಂಗಳದಲ್ಲಿ ವಿಹರಿಸಿದ್ದಾರೆ ವಾಮನಮೂರ್ತಿ…

Advertisement

“ನನ್ನ ಮೊದಲ ಅಂತಾರಾಷ್ಟ್ರೀಯ ಶತಕ ವಿಶೇಷ ಸಂದರ್ಭದಲ್ಲಿ ದಾಖಲಾಯಿತು. ಅಂದು ಆಗಸ್ಟ್‌ 14. ಮರುದಿನವೇ ಭಾರತದ ಸ್ವಾತಂತ್ರ್ಯ ಸಂಭ್ರಮ. ಈ ಕಾರಣಕ್ಕಾಗಿ ನನ್ನ ಪಾಲಿಗೆ ಇದೊಂದು ಸ್ಪೆಷಲ್‌ ಸೆಂಚುರಿ. ಜತೆಗೆ ಟೆಸ್ಟ್‌ ಪಂದ್ಯವೊಂದನ್ನು ಉಳಿಸಿಕೊಳ್ಳುವುದೂ ಒಂದು ಕಲೆ ಎಂಬುದರ ಪಾಠವೊಂದು ನನಗೆ ಲಭಿಸಿತು. ಸರಣಿ ಜೀವಂತವಾಗಿ ಉಳಿಯಿತು…’ ಎಂದು 1990ರ ಆಗಸ್ಟ್‌ 14ರ ದಿನವನ್ನು ಸಚಿನ್‌ ಸ್ಮರಿಸಿಕೊಂಡಿದ್ದಾರೆ.

ಸಚಿನ್‌-ಪ್ರಭಾಕರ್‌ ಜತೆಯಾಟ
ಅಜರುದ್ದೀನ್‌ ನೇತೃತ್ವದ ಭಾರತ ಅಂದು ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ದ್ವಿತೀಯ ಟೆಸ್ಟ್‌ ಆಡಲಿಳಿದಿತ್ತು. ಮೊದಲ ಸರದಿಯಲ್ಲಿ 68 ರನ್‌ ಬಾರಿಸಿ ಮಿಂಚಿದ ಸಚಿನ್‌, ದ್ವಿತೀಯ ಸರದಿಯಲ್ಲಿ ಅಜೇಯ 119 ರನ್‌ (189 ಎಸೆತ, 17 ಬೌಂಡರಿ) ಬಾರಿಸಿ ಭಾರತವನ್ನು ಸೋಲಿನಿಂದ ಬಚಾಯಿಸಿದ್ದರು. 408 ರನ್‌ ಟಾರ್ಗೆಟ್‌ ಪಡೆದಿದ್ದ ಭಾರತ, ಪಂದ್ಯ ಮುಗಿಯುವಾಗ 6ಕ್ಕೆ 343 ರನ್‌ ಗಳಿಸಿತ್ತು. ಈ 6 ವಿಕೆಟ್‌ 183 ರನ್ನಿಗೆ ಉರುಳಿದಾಗ ಭಾರತ ಸೋಲಿನ ಆತಂಕದಲ್ಲಿತ್ತು. ಆದರೆ 6ನೇ ಕ್ರಮಾಂಕದಲ್ಲಿ ಆಡಲಿಳಿದ ಸಚಿನ್‌ ಮತ್ತು ನಂ.8 ಆಟಗಾರ ಮನೋಜ್‌ ಪ್ರಭಾಕರ್‌ (ಅಜೇಯ 67) ಸೇರಿಕೊಂಡು ಮುರಿಯದ 7ನೇ ವಿಕೆಟಿಗೆ 160 ರನ್‌ ಪೇರಿಸಿ ಇಂಗ್ಲೆಂಡಿನ ಕನಸನ್ನು ಛಿದ್ರಗೊಳಿಸಿದ್ದರು. “ಯೇ ಹಮ್‌ ಕರ್‌ ಸಕ್ತೇ ಹೇಂ, ಮ್ಯಾಚ್‌ ಬಚಾ ಲೇಂಗೆ’ ಎಂದು ಪ್ರಭಾಕರ್‌ ಧೈರ್ಯ ತುಂಬಿಸಿದ್ದನ್ನು ಸಚಿನ್‌ ನೆನಪಿಸಿಕೊಂಡರು.

ಎರಡೂ ಇನ್ನಿಂಗ್ಸ್‌ಗಳಲ್ಲಿ ಮಿಂಚಿದ ಸಚಿನ್‌ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಇದಕ್ಕಾಗಿ ನೀಡಿದ ಶಾಂಪೇನ್‌ ಬಾಟಲಿಯನ್ನು ಓಪನ್‌ ಮಾಡಲು ಸಚಿನ್‌ಗೆ ಕಾನೂನು ನಿಯಮ ಅಡ್ಡಿಯಾಗಿತ್ತು. ಏಕೆಂದರೆ, ಅವರಿಗೆ ಆಗ 18 ವರ್ಷ ತುಂಬಿರಲಿಲ್ಲ!

ಮೊದಲ ಶತಕಕ್ಕಾಗಿ ಸಂಜಯ್‌ ಮಾಂಜ್ರೆಕರ್‌ ಬಿಳಿ ಟೀ-ಶರ್ಟ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದನ್ನೂ ತೆಂಡುಲ್ಕರ್‌ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಅಂದಿನ ಶತಕದ ಬಳಿಕ ಸಚಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೂ 50 ಸೆಂಚುರಿ ಬಾರಿಸುತ್ತಾರೆಂದು ಬಹುಶಃ ಯಾರೂ ಭಾವಿಸಿರಲಿಲ್ಲ.

Advertisement

ಇಲ್ಲಿ ಉಲ್ಲೇಖೀಸಲೇಬೇಕಾದ ಇನ್ನೊಂದು ಸಂಗತಿಯಿದೆ. ಇದು ಸ್ಪಿನ್‌ ಮಾಂತ್ರಿಕನಾಗಿ ಮೆರೆದ ಅನಿಲ್‌ ಕುಂಬ್ಳೆ ಅವರ ಪದಾರ್ಪಣ ಟೆಸ್ಟ್‌ ಪಂದ್ಯವಾಗಿತ್ತು!

Advertisement

Udayavani is now on Telegram. Click here to join our channel and stay updated with the latest news.

Next