Advertisement
ಮುಂಗಾರು ಹಂಗಾಮಿನಲ್ಲಿ ಮಳೆ ಇಲ್ಲದೇ ಬರಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಓಂಶಕ್ತಿ ಅಮ್ಮನವರ ನೂರಾರು ಮಹಿಳಾ ಭಕ್ತರು ವಿಶಿಷ್ಟ ರೀತಿಯಲ್ಲಿ ಗಂಜಿ ಉತ್ಸವದ ಮೂಲಕ ಮಳೆಗಾಗಿ ಕಿ.ಮೀ ಗಟ್ಟಲೇ ತಲೆಯ ಮೇಲೆ ಮಡಿಕೆ ಇಟ್ಟುಕೊಂಡು ಕಾಲ್ನಡಿಗೆಯಲ್ಲಿ ಸಾಗಿ ವರುಣನ ಕೃಪೆಗೆ ಮೊರೆಯಿಟ್ಟರು.
Related Articles
Advertisement
ಇದಕ್ಕೂ ಮೊದಲು ನಗರದ ಜಿಲ್ಲಾಸ್ಪತ್ರೆ ಸಮೀಪದ ಕೈವಾರ ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಗರದ ವಾಪಸಂದ್ರ, ಚಾಮರಾಜಪೇಟೆ, ಅಂಬೇಡ್ಕರ್ ಕಾಲೋನಿ, ಬಿಬಿ ರಸ್ತೆ, ಮಹಾಕಾಳಿ ರಸ್ತೆ, ಕಂದವಾರ ಬಾಗಿಲು, ನಗರ್ತಪೇಟೆ ಮುಖಾಂತರ ನಗರದ ಟೌನ್‌ಹಾಲ್ ವೃತ್ತಕ್ಕೆ ಗಂಜಿ, ಬೆಂಕಿ ಮಡಿಕೆಯ ಉತ್ಸವದ ಮೆರವಣಿಗೆ ಆಗಮಿಸಿದರು.
ಗಂಜಿ ಉತ್ಸವವನ್ನು ಸಂಪನ್ನ: ಮೆರವಣಿಗೆ ಮಾರ್ಗ ನಗರದ ಪ್ರಮುಖ ಗ್ರಾಮ ದೇವರುಗಳಾದ ಶ್ರೀ ರಂಗನಾಥಸ್ವಾಮಿ, ಮಹಾಕಾಳಿ ಅಮ್ಮನವರಿಗೆ ಹಾಗೂ ಕಂದವಾರದ ವೆಂಕಟರಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಾಧು ಮಠದ ರಸ್ತೆಯಿಂದ ಪುನಃ ಕೈವಾರ ತಾತಯ್ಯನ ದೇವಸ್ಥಾನಕ್ಕೆ ತೆರಳಿದ ಭಕ್ತರು ಗಂಜಿ ಉತ್ಸವವನ್ನು ಸಂಪನ್ನಗೊಳಿಸಿದರು. ಗಂಜಿ ಉತ್ಸವದಲ್ಲಿ ಪಾಲ್ಗೊಂಡಿದ್ದವರಿಗೆಲ್ಲಾ ಓಂಶಕ್ತಿ ಸೇವಾ ಮಂಡಳಿ ವತಿಯಿಂದ ಅನ್ನದಾಸೋಹ ಏರ್ಪಡಿಸಲಾಗಿತ್ತು.
ತಮಟೆ ಸದ್ದಿಗೆ ಕುಣಿದ ಮಹಿಳೆಯರು: ಗಂಜಿ ಉತ್ಸವದ ವೇಳೆ ಓಂಶಕ್ತಿ ಮಹಿಳೆಯರು ತಮಟೆಯ ಸದ್ದಿನ ನಿನಾದಕ್ಕೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ತಲೆ ಮೇಲೆ ಗಂಜಿ, ಬೆಂಕಿ ಮಡಿಕೆ ಹೊತ್ತು ಸಾಗಿ ಬಂದರೆ ಮೆರವಣಿಗೆ ಮುಂಭಾಗದಲ್ಲಿ ಕೆಲ ಮಹಿಳೆಯರು ಕುಣಿದು ಓಂಶಕ್ತಿ ಅಮ್ಮನವರಿಗೆ ಹರಕೆ ತೀರಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಂಡರು. ಪ್ರತಿ ವರ್ಷ ನಾವು ಮಳೆಗಾಗಿ ಪ್ರಾರ್ಥಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಗಂಜಿ, ಬೆಂಕಿ ಮಡಿಕೆ ಉತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ಇದು ಮೂರನೇ ವರ್ಷದ ಕಾರ್ಯಕ್ರಮ ಎಂದು ಚಿಕ್ಕಬಳ್ಳಾಪುರದ ಓಂಶಕ್ತಿ ಸಂಘಟನೆಯ ಮಹಿಳಾ ಸಂಘದ ಅಧ್ಯಕ್ಷ ಕನಕಾಂಭ ತಿಳಿಸಿದರು.
ಬೆಳ್ಳಿರಥದಲ್ಲಿ ಓಂಶಕ್ತಿ ಅಮ್ಮನವರ ಉತ್ಸವ: ಜಿಲ್ಲಾ ಕೇಂದ್ರದಲ್ಲಿ ಮಳೆಗಾಗಿ ಪ್ರಾರ್ಥಿಸಿ ಓಂಶಕ್ತಿ ಮಹಿಳಾ ಸಂಘದ ಸದಸ್ಯರು ನಡೆಸಿದ ಗಂಜಿ, ಬೆಂಕಿ ಮಡಿಕೆಯ ಉತ್ಸವದ ಆಚರಣೆ ವೇಳೆ ಓಂಶಕ್ತಿ ಆಧಿಪರಾಶಕ್ತಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕೃತ ಬೆಳ್ಳಿ ರಥದ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಓಂಶಕ್ತಿ ಅಮ್ಮನವರಿಗೆ ಏರ್ಪಡಿಸಿದ್ದ ಆಕರ್ಷಕ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು. ಮೆರವಣಿಗೆ ಸಾಗಿದ ರಸ್ತೆಗಳಲ್ಲಿ ಮಹಿಳೆಯರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.
ಜಿಲ್ಲೆಯಲ್ಲಿ ಸತತ ಆರೇಳು ವರ್ಷಗಳಿಂದ ಮಳೆ ಬೆಳೆ ಇಲ್ಲದೇ ತೀವ್ರ ಬರಗಾಲ ಆವರಿಸಿದೆ. ರೈತಾಪಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಗಂಜಿ ಉತ್ಸವ ಆಚರಿಸುತ್ತಿದ್ದೇವೆ. ನಗರಕ್ಕಿರುವ ಗಂಡಾಂತರಗಳು ತೊಲಗಲಿ, ಉತ್ತಮ ಮಳೆ ಬೆಳೆಯಾಗಿ ಜನ ಜೀವನ ಸಮೃದ್ಧಿಯಿಂದ ಇರಲಿ ಎಂಬ ಭಾವನೆಯಿಂದ ಓಂಶಕ್ತಿ ಅಮ್ಮನವರಿಗೆ ಗಂಜಿ ಉತ್ಸವ ಆಚರಿಸಿದ್ದೇವೆ.-ಕನಕಾಂಭ, ಉತ್ಸವ ಸಮಿತಿ ಅಧ್ಯಕ್ಷೆ