Advertisement
ವೇತನ ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಮತ್ತು ಸದಸ್ಯರು ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಸುಮಾರು 500 ಪುಟಗಳ ಅಂತಿಮ ವರದಿ ಸಲ್ಲಿಸಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರದಿಯ ಅಂಶಗಳನ್ನು ಬಹಿರಂಗಪಡಿಸಲು ಆಯೋಗ ಮತ್ತು ಸರ್ಕಾರ ನಿರಾಕರಿಸಿದೆ.
Related Articles
Advertisement
ನೌಕರರ ವೇತನದಲ್ಲಿ ಅಸಮಾನತೆ ಹೋಗಲಾಡಿಸಲು ಕೆಲ ಭತ್ಯೆಗಳನ್ನು ನೀಡುವಂತೆ ಮತ್ತು ತರ್ಕಬದ್ಧವಾಗಿ ವೇತನ ನಿಗದಿಪಡಿಸಬೇಕು ಎಂದು ಹೇಳಿದೆ. ಅಲ್ಲದೆ, ವೇತನ ಬಡ್ತಿ ನೀಡುವ ಸಂದರ್ಭದಲ್ಲಿ ನೌಕರರ ಕಾರ್ಯಕ್ಷಮತೆ ಪರಿಗಣಿಸಬೇಕು. ಈ ಮೂಲಕ ಸರ್ಕಾರಿ ನೌಕರರಲ್ಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಅವಕಾಶ ಕಲ್ಪಿಸಬೇಕು. ಇದರಿಂದ ಅವರ ಕಾರ್ಯಕ್ಷಮತೆ ಸುಧಾರಣೆಯಾಗಿ ಕೆಲಸಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಆಯೋಗ ಶಿಫಾರಸು ಮಾಡಿದೆ.
ಇದಲ್ಲದೆ, ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ತುಟ್ಟಿ ಭತ್ಯೆ ಸೂತ್ರದಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕು. ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆ, ರಜೆ ಪ್ರಯಾಯಿತಿ, ವೈದ್ಯಕೀಯ ಮರುಪಾವತಿ ಪ್ರಮಾಣವನ್ನು ಪ್ರಸ್ತುತ ಹಣದುಬ್ಬರ ಪ್ರಮಾಣಕ್ಕೆ ತಕ್ಕಂತೆ ಹೆಚ್ಚಿಸಬೇಕು ಎಂದೂ ಆಯೋಗವು ತನ್ನ ಶಿಫಾರಸಿನಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆಯೂ ಆಯೋಗ ಕೆಲವು ಶಿಫಾರಸುಗಳನ್ನು ಮಾಡಿದ್ದು, ಪ್ರಸ್ತುತ ಇರುವ ಖಾಲಿ ಹುದ್ದೆಗಳ ಪೈಕಿ ಅಗತ್ಯವಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ನೌಕರರಿಗೆ ಆಗಾಗೆ ತರಬೇತಿ ನೀಡಬೇಕು ಎಂದು ಹೇಳಿದೆ. ಅಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸುವ ನೌಕರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರೊಂದಿಗೆ ಅವರಿಗೆ ನೀಡುವ ನಗದು ಪುರಸ್ಕಾರದ ಮೊತ್ತ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದೂ ಹೇಳಿರುವುದಾಗಿ ತಿಳಿದುಬಂದಿದೆ.